ದಾವಣಗೆರೆ, ಫೆಬ್ರವರಿ 24: ಚನ್ನಗಿರಿ ತಾಲೂಕಿನ ಕಾಕನೂರ ಗ್ರಾಮದ ಒಂಟಿ ಮನೆಯಲ್ಲಿದ್ದ ವೃದ್ಧ ದಂಪತಿಯ ಕೈ ಕಾಲು ಕಟ್ಟಿ, ಹಿಂಸೆ ನೀಡಿ ಮನೆಯಲ್ಲಿದ್ದ ಸುಮಾರು 8 ಲಕ್ಷ 40 ಸಾವಿರ ಮೌಲ್ಯದ ಚಿನ್ನಾಭರಣ ದೋಚಿದ್ದ ಪ್ರಕರಣ ಸಂಬಂಧ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ತಮಿಳುನಾಡಿನ ಹೊಸೂರು ಬತ್ತಪಲ್ಲಿಯ ಶಿವಕುಮಾರ್, ಸೇಲಂ ಜಿಲ್ಲೆಯ ಕೇಶವನ್, ದಿಂಡಿಗಲ್ ಜಿಲ್ಲೆಯ ಅರುಣ್ ಪ್ರಶಾಂತ್, ತಿರುವಣ್ಣಾಮಲೈನ ಅರಸು ಹಾಗೂ ನಾಮಕ್ಕಲ್ ಕಲಾದೇವಿ ಬಂಧಿತ ಆರೋಪಿಗಳು. ಬಂಧಿತರಿಂದ ಬರೋಬ್ಬರಿ 14 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣ ಏನು?
ಸೆಪ್ಟೆಂಬರ್ 6,2025 ರಂದು ಆರೋಪಿಗಳು ದರೋಡೆ ನಡೆಸಿದ್ದರು. ರಾತ್ರಿ ವೇಳೆ ಮನೆ ಬಾಗಿಲು ತೆರೆದಿರೋದು ನೋಡಿ ಒಳಗೆ ನುಗ್ಗಿದ್ದ ಐದು ಜನ ಮುಸುಕುಧಾರಿಗಳ ಗ್ಯಾಂಗ್ , ಟಿವಿ ನೋಡುತ್ತಿದ್ದ ಮಾದಪ್ಪ ಅವರನ್ನು ಪಂಚೆಯಿಂದ ಕಟ್ಟಿ ಬಳಿಕ ಅಡುಗೆ ಮನೆಯಲ್ಲಿದ್ದ ಸಾವಿತ್ರಮ್ಮ ಕೈ ಕಾಲುಗಳನ್ನು ಹಗ್ಗದಿಂದ ಬಿಗಿದು ರಾಬರಿ ನಡೆಸುತ್ತಿದ್ದರು. ಮೈಮೇಲಿದ್ದ ಬಂಗಾರದ ಜೀವ ಬೆದರಿಕೆ ಹಾಕಿ ಕಪಾಟಿನಲ್ಲಿದ್ದ ಒಡವೆಗಳನ್ನೂ ಆರೋಪಿಗಳು ದೋಚಿದ್ದರು. ದಂಪತಿಯ ಜೊತೆಗಿದ್ದ ಮಗ ಕೆಲಸದ ನಿಮಿತ್ತ ಹೊರ ಹೋಗಿದ್ದ ವೇಳೆಯೇ ಘಟನೆ ನಡೆದಿರೋದು ಕುಟುಂಬವನ್ನು ಬೆಚ್ಚಿಬೀಳಿಸಿದೆ. ಸರ್ಕಾರಿ ನೌಕರರಾಗಿದ್ದ ದಂಪತಿ ಕರಾವಳಿ ಕರ್ನಾಟಕ ಭಾಗದಲ್ಲಿ ಹಲವು ವರ್ಷ ವಾಸವಿದ್ದು, ನಿವೃತ್ತಿ ಬಳಿಕ ಇದ್ದೊಬ್ಬ ಪುತ್ರನ ಜೊತೆ ಬಂದು ತೋಟದ ಮನೆಯಲ್ಲಿ ನೆಲೆಸಿದ್ದರು.
ಇದನ್ನೂ ಓದಿ: 400 ಕೋಟಿ ರೂ. ದರೋಡೆ ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಸಾಳ್ವೆ ಬಂಧನ
ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಬಲೆ ಖದೀಮರನ್ನು ಖೆಡ್ಡಾಕ್ಕೆ ಕೆಡವುವಲ್ಲಿ ಕೊನೆಗೂ ಯಶಸ್ಸು ಕಂಡಿದ್ದಾರೆ. ಆರೋಪಿಗಳನ್ನು ತಮಿಳುನಾಡಿಗೇ ತೆರಳಿ ಬಂಧಿಸಲಾಗಿದೆ, ಇನ್ನೂ ಹಲವೆಡೆ ರೀತಿಯ ದರೋಡೆ ಪ್ರಕರಣಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ಕೆಲ ಪೊಲೀಸ್ ಠಾಣೆಗಳಲ್ಲಿಯೂ ಇವರ ವಿರುದ್ಧ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ತಮಿಳುನಾಡು ಮೂಲದ ಈ ಗ್ಯಾಂಗ್ ಚಿತ್ರದುರ್ಗದ ಮೂಲಕ ಅಡಿಕೆನಾಡು ಚನ್ನಗಿರಿ ಪ್ರವೇಶ ಮಾಡಿದ್ದು ಕೂಡ ಬಯಲಾಗಿತ್ತು, ಆರೋಪಿಗಳಿಗೆ ಸ್ಥಳೀಯರು ಯಾರಿಂದ ಸಹಕಾರ ಸಿಕ್ಕಿತ್ತಾ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.