
ಆನೇಕಲ್, ಮಾರ್ಚ್ 16: ಬೆಂಗಳೂರು–ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಡೆಡ್ಲಿ ರೋಡ್ ರೇಜ್ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ತಮಿಳುನಾಡು ಗಡಿಯ ಸಮೀಪದ ಜೂಜುವಾಡಿ ಚೆಕ್ಪೋಸ್ಟ್ ಬಳಿ ಪೊಲೀಸರು ತಡೆದಾಗ ಕಾರು ನಿಲ್ಲಿಸಿದ ಚಾಲಕ ಎದುರಿದ್ದ ಪೊಲೀಸ್ ಸಿಬ್ಬಂದಿಯನ್ನೇ ಬಾನೆಟ್ ಮೇಲೆ ಹಾರಿಸಿಕೊಂಡು ಪರಾರಿಯಾಗಲು ಯತ್ನಿಸಿದ. ತಮಿಳುನಾಡಿನಲ್ಲಿ ಗುಟ್ಕಾ ನಿಷೇಧ ಇರುವವರನ್ನು ಕರ್ನಾಟಕದಿಂದ ಅಕ್ರಮವಾಗಿ ಗುಟ್ಕಾ ಮತ್ತು ಮದ್ಯವನ್ನು ಸಾಗಾಟ ಮಾಡುತ್ತಿದ್ದಾರೆ ಎಂಬ ಅನುಮಾನಕ್ಕೆ ಪೊಲೀಸರು ತಡೆದರು. ಈ ವೇಳೆ ಕಾರು ಚಾಲಕ ಯಾರಬ್ ಪಾಷ (34) ಎಂಬಾತ ವಾಹನವನ್ನು ನಿಲ್ಲಿಸದೇ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಹೆಡ್ ಕಾನ್ ಟೇಬಲ್ ರಾಜೀವ್ ಗಾಂಧಿ ಕಾರಿನ ಮುಂದೆ ಅಡ್ಡವಾಗಿ ನಿಂತಾಗ, ಲೆಕ್ಕಿಸದೇ ಚಾಲಕ ಕಾರನ್ನು ಮುನ್ನಡೆಸಿದ್ದಾನೆ. ಪರಿಣಾಮವಾಗಿ ಪೊಲೀಸ್ ಸಿಬ್ಬಂದಿ ಕಾರು ಬಾನೆಟ್ ಮೇಲೆ ಬಿದ್ದಿದ್ದಾರೆ. ಅವರು ಬಾನೆಟ್ ಮೇಲೆ ನೇತಾಡುತ್ತಿದ್ದಾಗಲೇ ಕೆಲದೂರ ಕಾರು ಚಲಾಯಿಸಿದ್ದಾರೆ. ಅದೃಷ್ಟವಶಾತ್ ಹೆಡ್ ಕಾನ್ ಟೇಬಲ್ ರಾಜೀವ್ ಗಾಂಧಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ನಂತರ ಹೊಸೂರು ಸಿಪ್ಕಾಟ್ ಆರೋಪಿಯನ್ನು ಬಂಧಿಸಿದ್ದಾರೆ. ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಸುಮಾರು 390 ಕೆಜಿ ಗುಟ್ಕಾ ಹಾಗೂ ಮದ್ಯವನ್ನು ವಶಕ್ಕೆ ಪಡೆದಿದ್ದು, ಇದರ ಮೌಲ್ಯ ಸುಮಾರು 2.20 ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಪ್ರಸ್ತುತ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ