ದೀಪಾವಳಿ ಹಬ್ಬದ ಆಚರಣೆಯನ್ನು ನಿಷೇಧಿಸಿದ ಲೋಕಿಕೆರೆ ಗ್ರಾಮಸ್ಥರು
ದಾವಣಗೆರೆ, ಅಕ್ಟೋಬರ್ 22: ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಉಂಟು ಮಾಡುವ ಹಬ್ಬವೇ ದೀಪಾವಳಿ. ಹಬ್ಬದ ದಿನ ದೀಪ ಹಚ್ಚಿ ಪಟಾಕಿ ಸಿಡಿಸಿ ಎಲ್ಲರೂ ಸಂಭ್ರಮ ಪಡುತ್ತಾರೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಈ ದೀಪಾವಳಿ (ದೀಪಾವಳಿ) ಬಂದರೇ ಭಯದ ವಾತಾವರಣ ಕವಿಯುತ್ತದೆ. ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮದ ಕೆಲ ಸಮುದಾಯದ ಜನರು ದೀಪಾವಳಿಯನ್ನು ಕರಾಳ ದಿನವನ್ನಾಗಿ ನೋಡುತ್ತಾರೆ. ಅನಾದಿಕಾಲದಿಂದಲೂ ಈ ಗ್ರಾಮದಲ್ಲಿ ದೀಪಾವಳಿಯಂದೇ ಹಲವಾರು ದುರ್ಘಟನೆ ಸಂಭವಿಸಿರುವುದೇ ಈ ನಂಬಿಕೆಗೆ ಕಾರಣವೆಂದು ಗ್ರಾಮಸ್ಥರು ಹೇಳುತ್ತಾರೆ.
ಹಬ್ಬದ ದಿನದಂದೇ ನೂರಾರು ಯುವಕರು ಕಾಣೆ
ಲೋಕಿಕೆರೆ ಗ್ರಾಮದ ಕೆಲ ಸಮುದಾಯದ ಜನರಿಗೆ ದೀಪಾವಳಿ ಹಬ್ಬ ಕರಾಳ ದಿನ. ಈ ಗ್ರಾಮದವರು ಹಬ್ಬ ಆಚರಿಸದಿರಲು ಸಾಕಷ್ಟು ಕಾರಣ ಹೇಳುತ್ತದೆ. ನೂರಾರು ವರ್ಷದ ಹಿಂದೆ ಈ ಗ್ರಾಮದಲ್ಲಿ ವಿವಿಧ ಸಮುದಾಯದ ನೂರಾರು ಯುವಕರು ದೀಪಾವಳಿ ಹಬ್ಬದಂದು ಕಾಣೆಯಾದರಂತೆ.
ಹಬ್ಬದ ದಿನ ಪೂಜೆಗಾಗಿ, ಉತ್ರಾಣಿ ಕಡ್ಡಿ, ಕಾಶಿಕಡ್ಡಿ, ಹೂ ತರಲುಗಳಿಂದ ಹೊರಗೆ ಹೋದವರು ಮರಳಿ ಬರಲೇ ಇಲ್ಲ. ಗ್ರಾಮಸ್ಥರು ಎಷ್ಟೆ ಹುಡುಕಿದರೂ ಅವರು ಸುಳಿವು ಸಿಗದ ಕಾರಣಕ್ಕೆ ಅಂದೇ ದೀಪಾವಳಿ ಕರಾಳ ದಿನ ಎಂದು ಹಬ್ಬದ ಆಚರಣೆಯನ್ನು ಕೈಬಿಟ್ಟಿದ್ದಾರೆ. ಅದು ತಲೆಮಾರುಗಳಿಂದ ಮುಂದುವರಿಯುತ್ತಾ ಬಂದಿದೆ.
ಹಬ್ಬದ ದಿನದಂದೇ ಜಮೀನಿಗೆ ಬೆಂಕಿ!
ಜಿಲ್ಲಾ ಕೇಂದ್ರ ದಾವಣಗೆರೆಯಿಂದ ಸುಮಾರು 20 ಕಿಮೀ ಅಂತರದಲ್ಲಿ ಇರುವ ಈ ಲೋಕಿಕೆರೆ ಹಬ್ಬ ಸುಮಾರು 200ಕ್ಕೂ ಅಧಿಕ ಕುಟುಂಬಗಳು ದೀಪಾವಳಿಯಿಂದ ದೂರ ಉಳಿದಿದ್ದಾರೆ. ಯಾವುದಕ್ಕೂ ಆಗಿದ್ದೆಲ್ಲಾ ಆಗಿ ಹೋಗಿದೆ, ಹಿಂದಿನದೆಲ್ಲಾ ಮರೆತು ದೀಪಾವಳಿ ಹಬ್ಬ ಆಚರಣೆ ಮಾಡಲು ಐದು ಹಿಂದೊಮ್ಮೆ ನಿರ್ಧಾರ ಮಾಡಿದೆ. ಎಂದಿನಂತೆ ದೀಪಾವಳಿ ಹಬ್ಬದ ದಿನದಂದು ಹಬ್ಬ ಆಚರಣೆ ಮಾಡಲು ಮುಂದಾಗಿದ್ದರು.
ಈ ವೇಳೆ ಏಕಾಏಕಿ ಜಮೀನಿನಲ್ಲಿ ಪೈರಿಗೆ, ಹುಲ್ಲಿನ ಬಣವಿಗೆ ಬೆಂಕಿ ಬಿದ್ದು ದಗ ಎಂದು ಹೊತ್ತಿ ಉರಿದಿತ್ತು. ಇದನ್ನು ಕಂಡು ಆ ಕುಟುಂಬಸ್ಥರು ಮತ್ತಷ್ಟು ಆತಂಕಗೊಂಡಿದ್ದರು. ಆ ಘಟನೆಯ ನಂತರ ಯಾವತ್ತು ಹಬ್ಬ ಮಾಡುವ ಯೋಚನೆಯನ್ನೇ ಮಾಡಿರಲಿಲ್ಲ. ಆ ಸಮುದಾಯದವರು ದೀಪಾವಳಿಯ ಆಚರಣೆಯಿಂದ ದೂರ ಉಳಿದಿದ್ದಾರೆ.
ಇದನ್ನೂ ಓದಿ ದೀಪಾವಳಿ ಪಟಾಕಿಯಿಂದ ಅವಾಂತರ: ಬೆಂಗಳೂರಿನಲ್ಲಿ 90 ಜನರ ಕಣ್ಣಿಗೆ ಹಾನಿ, ಗಾಳಿಯ ಗುಣಮಟ್ಟ ಕುಸಿತ
ಗ್ರಾಮದ ಮಕ್ಕಳು ಹಬ್ಬ ಮಾಡುವ ಆಸೆಯನ್ನು ತೋರ್ಪಡಿಸಿದರೂ ಇಲ್ಲಿನ ನಂಬಿಕೆಯನ್ನು ಮುರಿಯಲಾಗದ ಕುಟುಂಬಗಳು ನಿರಾಸೆಗೊಳ್ಳುವ ಪರಿಸ್ಥಿತಿ ಎದುರಾಗಿದೆ. ಒಟ್ಟಾರೆ ಮನಸ್ಸಿನ ಕತ್ತಲೆಯನ್ನು ತೊಡೆದು ಬೆಳಕಿನೆಡೆಗೆ ಸಾಗುವ ಮಾದರಿಯ ಸಾಂಕೇತಿಕವಾಗಿ ಆಚರಿಸುವ ದೀಪಾವಳಿ, ಈ ಲೋಕಿಕೆರೆ ಗ್ರಾಮದ ಕೆಲವರಿಗೆ ಕರಾಳವಾಗಿದ್ದು ಮಾತ್ರ ದುರಂತವೇ ಸರಿ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.