ದೇವನಹಳ್ಳಿ, ಫೆ.25: ರಸ್ತೆ ಬದಿಯ ಚರಂಡಿಯಲ್ಲಿ ಕತ್ತು ಕೊಯ್ದು ಸುಟ್ಟು ಹಾಕಿದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆ (40) ಶವ (ಮೃತ ದೇಹ) ಪತ್ತೆ ಆಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ (ದೇವನಹಳ್ಳಿ) ಪಟ್ಟಣದ ಸ್ವರ್ಣಾರ್ಧಿ ಹೋಟೆಲ್ ಬಳಿ ಚರಂಡಿಯಲ್ಲಿ ನಡೆದಿದೆ. ಹಂತಕರು ಬೇರೆಡೆ ಕೊಂದು ರಾತ್ರಿ ವೇಳೆ ಶವ ತಂದು ಬಿಸಾಕಿದ್ದು, ನಾಲ್ಕೈದು ದಿನಗಳ ಹಿಂದೆ ಮಹಿಳೆಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗ್ಗೆ ಮೂತ್ರ ವಿಸರ್ಜನೆಗೆ ಹೋಗಿದ್ದ ವ್ಯಕ್ತಿಯ ಕಣ್ಣಿಗೆ ಶವ ಕಾಣಿಸಿದೆ. ಕೂಡಲೇ ದೇವನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೋಕೋ ತಂಡದಿಂದ ಸ್ಥಳ ಪರಿಶೀಲನೆ ನಡೆಸಿ ಸದ್ಯ ಮೃತದೇಹವನ್ನು ದೇವನಹಳ್ಳಿ ತಾಲೂಕು ಆಸ್ಪತ್ರೆ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.
ಈಶಾನ್ಯ ವಿಭಾಗ ಡಿಸಿಪಿ ಮಿಥುನ್ ಕುಮಾರ್ ಹೇಳಿದ್ದಿಷ್ಟು
ಘಟನೆಯ ಬಗ್ಗೆ ಟಿವಿ9ಗೆ ಈಶಾನ್ಯ ವಿಭಾಗ ಡಿಸಿಪಿ ಮಿಥುನ್ ಕುಮಾರ್ ಪ್ರತಿಕ್ರಿಯಿಸಿದ್ದು, ಅಪರಿಚಿತ ಹೆಣ್ಣು ಮಗಳು ಶವ ಇದೆ. ಮೇಲ್ನೋಟಕ್ಕೆ ಕೊಲೆ ಮಾಡಿ ಬಿಸಾಕಿದ್ದಾರೆ. ಡ್ರೈನೆಜ್ನಲ್ಲಿ ಚಾಕುನಿಂದ ಇರಿದು ಸುಟ್ಟ ಸ್ಥಿತಿಯಲ್ಲಿ ಶವ ಇದೆ. ಸುಮಾರು 30 ರಿಂದ 35 ವರ್ಷದ ಮಹಿಳೆ ಇರಬಹುದು ಎಂದು ಹೇಳಿದರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಯ ಕೊಲೆ: ಅಸಲಿಗೆ ಅಲ್ಲಿ ನಡೆದಿದ್ದೇನು ಗೊತ್ತೇ? ಕಾರ್ಯಕಾರಿ ಮಾಹಿತಿ ಬಯಲು
ಒಂದು ದಿನದ ಹಿಂದೆ ಕೊಲೆ ಮಾಡಬಹುದಿತ್ತು. ಕೊಲೆ ಯಾರು ಮಾಡಿದ್ದಾರೆ ಅನ್ನೋದು ಗೊತ್ತಾಗಿಲ್ಲ. ಸುತ್ತಾಮುತ್ತ ಸಿಸಿ ಕ್ಯಾಮರಾಗಳು ಇವೆ. ಎಲ್ಲವನ್ನೂ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ ಎಂದು ಈಶಾನ್ಯ ವಿಭಾಗ ಡಿಸಿಪಿ ಮಿಥುನ್ ಕುಮಾರ್ ಹೇಳಿದ್ದಾರೆ.
ಮರಕ್ಕೆ ಬುಲೆಟ್ ಬೈಕ್ ಡಿಕ್ಕಿ: ಇಬ್ಬರು ಸವಾರರ ಸಾವು
ಮರಕ್ಕೆ ಬುಲೆಟ್ ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರು ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಯಲಹಂಕ ನ್ಯೂಟೌನ್ ಉನ್ನಿಕೃಷ್ಣನ್ ಜಂಕ್ಷನ್ ನಲ್ಲಿ ನಡೆದಿದೆ. ಕಿರಣ್(25) ಮತ್ತು ಯಶವಂತ(25) ಮೃತರು. ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಲ್ಯಾಣ ಮಂಟಪದಲ್ಲೇ ಹೃದಯಾಘಾತದಿಂದ ಕುಸಿದುಬಿದ್ದು ಫೋಟೋಗ್ರಾಫರ್ ಸಾವು!
ಹೆಲ್ಮೆಟ್ ಧರಿಸದೆ ಬುಲೆಟ್ ಬೈಕ್ ನಲ್ಲಿ ಮೂವರು ಯುವಕರು ತೆರಳಿದ್ದಾರೆ. ಈ ವೇಳೆ ಮರಕ್ಕೆ ಬೈಕ್ ಡಿಕ್ಕಿಯಾಗಿ ಪಲ್ಟಿ ಹೊಡೆದಿದ್ದು, ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಯಶವಂತ ಸಾವನ್ನಪ್ಪಿದ್ದಾರೆ. ಗೌತಮ್ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.