ಚಿಕ್ಕಬಳ್ಳಾಪುರ, ನವೆಂಬರ್ 17: ವಿಶ್ವವಿಖ್ಯಾತ ಪ್ರವಾಸಿ ತಾಣ, ನಂದಿಗಿರಿಧಾಮದ ತಪ್ಪಲಿನ ಪುರಾಣ ಪ್ರಸಿದ್ದ ಶ್ರೀ ಭೋಗನಂದೀಶ್ವರ ದೇವಸ್ಥಾನಕ್ಕೆ ಇಂದು ಕಾರ್ತಿಕ ಮಾಸದ ಸೋಮವಾರ ಹಿನ್ನಲೆಯಲ್ಲಿ ಭಕ್ತ ಸಾಗರವೇ ಹರಿದುಬಂದಿದೆ. ರಾಜಧಾನಿ ಬೆಂಗಳೂರಿನ ಜನ ಹಾಗೂ ಈಶ್ವರನ ಭಕ್ತರು, ದೇವಸ್ಥಾನಕ್ಕೆ ಜನಸಾಗರವಾಗಿ ಹರಿದು ಬಂದಿದ್ದು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ನಂತರ ದೇವಸ್ಥಾನದಲ್ಲಿ ಎಣ್ಣೆ ದೀಪ ಹಚ್ಚಿ, ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.
ಕಾರ್ತಿಕ ಮಾಸದ ಕೊನೆ ಸೋಮವಾರದಂದು, ಮಾಡುವ ಪೂಜೆಗಳಲ್ಲಿ ಹೆಚ್ಚು ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಇದರಿಂದ ಮಹಿಳಾ ಭಕ್ತರ ದಂಡು ದೇವಸ್ಥಾನದಲ್ಲಿ ಬಿಡುಬಿಟ್ಟಿದ್ದು, ಅರುಣಾಚಲೇಶ್ವರ, ಗಂಗಾಧರ ಹಾಗೂ ಗಿರಿಜಾಂಬ ಸಮೇತ ಶ್ರೀ ಬೋಗನಂದೀಶ್ವರ ಸ್ವಾಮಿಯ ದರ್ಶನ ಪಡೆದರು. ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ನಾಲ್ಕು ಗಂಟೆಯಿಂದ ವಿಶೇಷ ಪೂಜೆಗಳು ನಡೆಯುತ್ತಿವೆ. ವಿಶೇಷವಾಗಿ ರಾಜಧಾನಿ ಬೆಂಗಳೂರಿನ ಜನ ದೇವಸ್ಥಾನಕ್ಕೆ ಆಗಮಿಸಿದರು, ಸುಮಾರು ಒಂದು ಲಕ್ಷ ಜನ ದೇವರ ದರ್ಶನ ಪಡೆಯುವ ಸಾಧ್ಯತೆ ಇದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ