
‘ಧುರಂಧರ’ ಸಿನಿಮಾ ಡಿಸೆಂಬರ್ 5ರಂದು ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಇದಾದ ಕೇವಲ ಮೂರೇ ತಿಂಗಳಿಗೆ ‘ಧುರಂಧರ 2’ ರಿಲೀಸ್ ಆಗಿದೆ. ಈ ಸಿನಿಮಾದ ರನ್ ಟೈಂ 3 ಗಂಟೆ 49 ನಿಮಿಷ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆ ನಿರೀಕ್ಷೆಗಳನ್ನು ಸಿನಿಮಾ ತಲುಪಿತೇ? ಆ ಬಗ್ಗೆ ಇಲ್ಲಿದೆ ವಿವರ.
‘ಧುರಂಧರ’ ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಹಮ್ಜಾ ಅಲಿ ಮಜಾರಿ, ರೆಹಮಾನ್ ಡಕಾಯಿತ್ನ ಹತ್ಯೆ ಮಾಡುತ್ತಾನೆ. ಆ ಬಳಿಕ ನಡೆಯುವ ಕಥೆಯೇ ‘ಧುರಂಧರ 2’. ಸಿನಿಮಾದ ಹೆಸರೇ ‘ಧುರಂಧರ: ದಿ ರಿವೇಂಜ್’. ಹೀಗಾಗಿ, ಸಿನಿಮಾ ಉದ್ದಕ್ಕೂ ಸೇಡಿನ ಕಥೆ ಸಾಗುತ್ತದೆ. ರಕ್ತದೋಕುಳಿ ಹರಿಯುತ್ತದೆ. ಉರುಳುವ ತಲೆಗಳಿಗೆ ಲೆಕ್ಕ ಇಲ್ಲ. ಹಾಗಾದರೇ ಈ ಸೇಡಿನ ಹಿಂದಿನ ಕಾರಣವೇನು? ಜಸ್ಕಿರತ್ ಸಿಂಗ್, ಹಮ್ಜಾ ಆಗಿದ್ದೇಕೆ? ಅದನ್ನು ಸಿನಿಮಾದಲ್ಲೇ ನೋಡಬೇಕು.
‘ಧುರಂಧರ’ ಸಿನಿಮಾದಲ್ಲಿ ಜಸ್ಕಿರತ್ ಸಿಂಗ್ ರಂಗಿ ಹಮ್ಜಾ ಆದದ್ದು ತೋರಿಸಿಲ್ಲ. ಆದರೆ, ಈ ಸಿನಿಮಾದಲ್ಲಿ ಜಸ್ಕಿರತ್ ಹಿನ್ನೆಲೆಯನ್ನು ವಿವರವಾಗಿ ಹೇಳಲಾಗಿದೆ. ಯಾವುದೋ ನಿರ್ದೇಶಕರು ಆರಂಭದ ಅರ್ಧ ಗಂಟೆಯನ್ನು ಮೀಸಲಿಟ್ಟಿದ್ದಾರೆ. ಈ ಚಿತ್ರ ಪ್ರೀಕ್ವೆಲ್ನಿಂದ ಆರಂಭವಾಗಿ, ಸೀಕ್ವೆಲ್ಗೆ ಸಾಗುತ್ತಿದೆ. ರಣವೀರ್ ಸಿಂಗ್ ಅವರು ಚಿತ್ರದ ಕಾಣಿಸಿದ್ದಾರೆ. ಅವರದ್ದು ಓನ್ ಮ್ಯಾನ್ ಶೋ ಎಂದರೂ ತಪ್ಪಾಗಲಿಕ್ಕಿಲ್ಲ.
‘ಧುರಂಧರ 2’ ಸಿನಿಮಾದಲ್ಲಿ ಕೆಲವು ಟ್ವಿಸ್ಟ್‌ಗಳಿವೆ. ಆ ತಿರುವುಗಳನ್ನು ನೀವು ನೋಡಲು ಸಾಧ್ಯವಿಲ್ಲ. ಈ ಕಾರಣಕ್ಕೆ ‘ಧುರಂಧರ 2’ ಸಿನಿಮಾ ಹೆಚ್ಚು ಮನರಂಜನೆ ನೀಡುತ್ತದೆ. ರಣವೀರ್ ಸಿಂಗ್ ಅವರು ರಕ್ತದೋಕುಳಿಯಲ್ಲಿ ಮಿಂದೆದ್ದಿದ್ದಾರೆ. ಅವರು ಭರ್ಜರಿ ಆ್ಯಕ್ಷನ್ ಮೆರೆದಿದ್ದಾರೆ. ಒಮ್ಮೆ ಹಮ್ಜಾ ಆಗಿ, ಮತ್ತೊಮ್ಮೆ ಜಸ್ಕಿರತ್ ಆಗಿ ಅವರು ಇಷ್ಟ ಆಗುತ್ತಾರೆ. ಆ್ಯಕ್ಷನ್ ದೃಶ್ಯಗಳನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ.
ಇನ್ನು, ಈ ಚಿತ್ರದ ಮತ್ತೊಂದು ಹೈಲೈಟ್ ಎಂದರೆ ಅರ್ಜುನ್ ರಾಂಪಾಲ್. ಅವರು ಐಸಿಸ್ ಮೇಜರ್ ಇಕ್ಬಾಲ್ ಆಗಿ ಕಾಣಿಸಿಕೊಂಡಿದ್ದಾರೆ. ಇವರ ಪಾತ್ರಕ್ಕೂ ಸಾಕಷ್ಟು ತೂಕ ಇದೆ. ಎಸ್ಪಿ ಚೌದ್ರಿ ಅಸ್ಲಾಮ್ ಪಾತ್ರದಲ್ಲಿ ಸಂಜಯ್ ದತ್ ನಟಿಸಿದ್ದಾರೆ. ಸಿನಿಮಾದಲ್ಲಿ ಅವರ ಪಾತ್ರದ ಬಳಕೆ ಸರಿಯಾಗಿ ಆಗಿಲ್ಲ. ಆರ್ ಮಾಧವನ್ ಅವರು ಅಜಯ್ ಸನ್ಯಾಲ್ ಆಗಿ ಕಾಣಿಸಿಕೊಂಡಿದ್ದಾರೆ. ಸಾರಾ ಅರ್ಜುನ್, ರಾಕೇಶ್ ಬೇಡಿ ಮುಂತಾದವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಶಾಶ್ವತ್ ಸಚ್ ದೇವ್ ಹಿನ್ನಲೆ ಸಂಗೀತ ಚಿತ್ರದ ತೂಕವನ್ನು ಹೆಚ್ಚಿಸಿದೆ. ಬರುವ ಹಾಡುಗಳು ಕೂಡ ಮನಸ್ಸಿನಲ್ಲಿ ಉಳಿಯುತ್ತವೆ. ವಿಕಾಶ್ ಛಾಯಾಗ್ರಹಣ ಸಿನಿಮಾವನ್ನು ಮತ್ತಷ್ಟು ಅಂದಗೊಳಿಸಿದೆ.
ನಿರ್ದೇಶಕ ಆದಿತ್ಯ ಧಾರ್ ಶ್ರಮವನ್ನು ಮೆಚ್ಚಲೇಬೇಕು. ಒಂದು ಅದ್ಭುತ ಚಿತ್ರವನ್ನು ನೋಡಲು ಇಟ್ಟಿದ್ದಾರೆ. ಈ ಚಿತ್ರವನ್ನು ‘ಧುರಂಧರ’ಗಿಂತ ಮತ್ತಷ್ಟು ರಾ ಆಗಿ ಕಟ್ಟಿಕೊಟ್ಟಿದ್ದಾರೆ. ಅವರ ಕಡೆಯಿಂದ ಒಂದೊಳ್ಳೆಯ ಸ್ಪೈ ಸಿನಿಮಾ ಸಿಕ್ಕಿದೆ. ಹಲವು ನೈಜ ಘಟನೆಗಳನ್ನು ಕಾಲ್ಪನಿಕ ಕಥೆಯಲ್ಲಿ ಹೊಸೆದಿದ್ದಾರೆ. ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ, ನೋಟ್ ಬ್ಯಾನ್, ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿ ಮೋದಿ ಮಾತನಾಡಿದ ನೈಜ ವಿಡಿಯೋ ತೋರಿಸಿದ್ದಾರೆ ಆದಿತ್ಯ ಧಾರ್. ನೋಟ್ ಬ್ಯಾನ್ ಹಿಂದಿನ ಕಾರಣವನ್ನೂ ಕಥೆಗೆ ಲಿಂಕ್ ಕೊಟ್ಟಿದ್ದಾರೆ. ಈ ರೀತಿಯ ಹಲವು ಘಟನೆಗಳನ್ನು ತೋರಿಸಲಾಗಿದೆ. ಆದರೆ, ಇದರಲ್ಲಿ ಯಾವುದು ನೈಜ ಘಟನೆ? ಯಾವುದು ಕಾಲ್ಪನಿಕ ಎಂಬ ಗೊಂದಲಕ್ಕೆ ಉತ್ತರ ಸಿಗೋದಿಲ್ಲ.
ಸಿನಿಮಾದ ಅವಧಿ ಬರೋಬ್ಬರಿ 3 ಗಂಟೆ ಹಾಗೂ 49 ನಿಮಿಷ. ಪ್ರತಿ ವಿಷಯವನ್ನು ವಿವರವಾಗಿ ಹೇಳುವ ಪ್ರಯತ್ನವನ್ನು ಮಾಡಲಾಗಿದೆ. ಇದು ಕೆಲವು ಕಡೆಗಳಲ್ಲಿ ಪ್ರೇಕ್ಷಕನ ತಾಳ್ಮೆ ಪರೀಕ್ಷೆಯನ್ನು ಮಾಡುತ್ತದೆ. ಪ್ರೀ ಕ್ಲೈಮ್ಯಾಕ್ಸ್ ನಲ್ಲಿ ಬರೋ ಫೈಟ್ ಬಹುದೀರ್ಘ ಎನಿಸುತ್ತದೆ. ಬಡೆ ಸಾಬ್ ಪಾತ್ರದ ಸುತ್ತಲಿನ ಸಸ್ಪೆನ್ಸ್ ಸಂಪೂರ್ಣವಾಗಿ ಟೊಳ್ಳೆನಿಸುತ್ತದೆ. ಅಕ್ಷಯ್ ಖನ್ನಾ ಮೊದಲ ಭಾಗದಲ್ಲಿ ಶೋ ಸ್ಟೀಲರ್ ಆಗಿದ್ದರು. ಆದರೆ, ಈ ಸಿನಿಮಾದಲ್ಲಿ ಅವರು ಪೋಸ್ಟರ್‌ಗೆ ಮಾತ್ರ ಸೀಮಿತವಾಗಿದ್ದಾರೆ ಎಂಬುದು ಬೇಸರದ ವಿಷಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.