ತಾಮ್ರದ ಪಾತ್ರೆಗಳ ಆರೋಗ್ಯ ಪ್ರಯೋಜನಗಳ ಹೊರತಾಗಿಯೂ, ಅವುಗಳನ್ನು ಶುಚಿಗೊಳಿಸುವ ಕಷ್ಟದಿಂದಾಗಿ ಬಳಕೆ ಕಡಿಮೆಯಾಗಿದೆ. ಕಡಲೆ ಹಿಟ್ಟು, ಮೊಸರು, ನಿಂಬೆ ರಸದಂತಹ ವಸ್ತುಗಳನ್ನು ಬಳಸಿ, ಯಾವುದೇ ರಾಸಾಯನಿಕಗಳಿಲ್ಲದೆ ಕಪ್ಪಾದ ತಾಮ್ರದ ಪಾತ್ರೆಗಳನ್ನು ಸುಲಭವಾಗಿ ಹೊಳೆಯುವಂತೆ ಮಾಡುವ ವಿಧಾನವನ್ನು ವಿವರಿಸುತ್ತದೆ.

ಹಲವು ದಶಕಗಳ ಹಿಂದೆ ಮನೆಮನೆಗಳಲ್ಲಿ ತಾಮ್ರವೇ ರಾರಾಜಿಸುತ್ತಿದೆ. ಇದಕ್ಕೆ ಕಾರಣ, ಅದರಲ್ಲಿ ಇರುವ ಆರೋಗ್ಯವರ್ಧಕ ಅಂಶ. ಆದರೆ ಅದನ್ನು ಕ್ಲೀನ್ ಮಾಡುವುದೇ ದೊಡ್ಡ ಸಮಸ್ಯೆ. ದಿನನಿತ್ಯ ಬಳಸುವ ತಾಮ್ರದ ಪಾತ್ರೆಗಳನ್ನು ಶುಚಿಗೊಳಿಸುವುದು ಕಷ್ಟ ಎಂದು ಅದರ ಉಸಾಬರಿ ಬೇಡ ಎಂದು ಇಂದು ಈ ಪಾತ್ರೆಗಳು ಅಟ್ಟಕ್ಕೇರಿವೆ. ಇನ್ನು ಹಬ್ಬ-ಹರಿದಿನಗಳಲ್ಲಿ ಪೂಜಾ ಸಾಮಗ್ರಿಗಳಾದ ತಾಮ್ರದ ಪಾತ್ರೆಗಳನ್ನು ಹೊರಕ್ಕೆ ತೆಗೆದು ಅದನ್ನು ಚಕಚಕಗೊಳಿಸುವುದೇ ದೊಡ್ಡ ಸವಾಲಾಗುತ್ತದೆ. ನೀರು ತಾಗಿದರೂ ಕಪ್ಪಾಗಿ ಬಿಡುತ್ತೆ ಎನ್ನುವ ಚಿಂತೆಯಲ್ಲಿರುವ ಮಹಿಳೆಯರಿಗೆ ವರದಾನವಾಗಿ ಸಿಕ್ಕಿದ್ದು, ಸ್ಟೀಲ್. ಅದೇ ಕಾರಣಕ್ಕೆ ತಾಮ್ರ ಏನಿದ್ದರೂ ಸದ್ಯ ದೇವರ ಮನೆಯ ಮತ್ತು ಪೂಜಾ ಸಾಮಗ್ರಿಗೆ ಸೀಮಿತವಾಗಿಬಿಟ್ಟಿದೆ.

ಅಷ್ಟಕ್ಕೂ ದೇಹಕ್ಕೆ ಅಲ್ಪಪ್ರಮಾಣದಲ್ಲಿ ಅಗತ್ಯವಾದ ಖನಿಜಗಳನ್ನು ಒದಗಿಸುವ ಶಕ್ತಿ ತಾಮ್ರಕ್ಕೆ ಇದೆ. ಇದು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ. ಕೆಂಪು ರಕ್ತ ಕಣಗಳು ಮತ್ತು ಕೊಲ್ಯಾಜೆನ್ಗಳನ್ನು ದೇಹಕ್ಕೆ ಪೂರೈಸುವಲ್ಲಿ ತಾಮ್ರವು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ತಾಮ್ರದಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣಗಳಿವೆ. ಆದ್ದರಿಂದ ಇದೇ ಕಾರಣಕ್ಕೆ ರಾತ್ರಿ ನೀರನ್ನು ತಾಮ್ರದ ಪಾತ್ರೆಯಲ್ಲಿ ಇಟ್ಟು ಬೆಳಗ್ಗೆ ಕುಡಿದರೆ ಆರೋಗ್ಯವನ್ನು ಕಾಪಿಟ್ಟುಕೊಳ್ಳಬಹುದು ಎನ್ನಲಾಗಿದೆ.

ಇಂಥ ನೀರನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಹಲವಾರು ಕಾಯಿಲೆ ಬರಿಸುವ ಬ್ಯಾಕ್ಟೀರಿಯಾಗಳನ್ನು ಕೊಂದು ಜೀರ್ಣವ್ಯವಸ್ಥೆಯನ್ನು ಉತ್ತಮಗೊಳಿಸಲು ನೆರವಾಗುತ್ತದೆ. ದೇಹದಲ್ಲಿ ತಾಮ್ರ ಕಡಿಮೆಯಾದರೆ ನಮ್ಮ ದೇಹ ಕಬ್ಬಿಣವನ್ನು ಹೀರಿಕೊಳ್ಳುವ ಸಾಮರ್ಥವೂ ಕಡಿಮೆಯಾಗುತ್ತದೆ. ಪರಿಣಾಮ, ರಕ್ತಹೀನತೆ. ಹಾಗಾಗಿ ಆಹಾರದಲ್ಲಿ ಕಬ್ಬಿಣದ ಅಂಶವಿದ್ದರೂ, ಇದನ್ನು ಹೀರಿಕೊಳ್ಳಲು ತಾಮ್ರದ ನೆರವು ಬೇಕೇ ಬೇಕು. ತಾಮ್ರದ ಅಂಶ ದೇಹದಲ್ಲಿ ಹೆಚ್ಚಿದರೆ ಕಬ್ಬಿಣದ ಅಂಶವೂ ಹೆಚ್ಚುತ್ತದೆ, ತನ್ಮೂಲಕ ರಕ್ತಹೀನತೆಯ ತೊಂದರೆ ಇಲ್ಲವಾಗಿಸುತ್ತದೆ.

ಪ್ರತಿದಿನವೂ ಪೂಜಾ ಸಾಮಗ್ರಿಯನ್ನು ಬಳಸುವವರು ತಮ್ಮದೇ ಆದ ರೀತಿಯಲ್ಲಿ ತಾಮ್ರದ ಸಾಮಗ್ರಿಗಳು ತೊಳೆದರೂ ಅವು ಬಹು ಬೇಗನೇ ಕಪ್ಪಾಗಿಬಿಡುತ್ತವೆ. ಇವುಗಳನ್ನು ಜಗಮಗಗೊಳಿಸುವ ಹಲವು ಪೌಡರ್ಗಳನ್ನು (Powder) ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಅವುಗಳಲ್ಲಿನ ರಾಸಾಯನಿಕದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಖಂಡಿತ. ಆದ್ದರಿಂದ ಇವುಗಳಿಂದ ಮುಕ್ತಿ ಹೊಂದಿ ಸುಲಭದಲ್ಲಿ ತಾಮ್ರದ ಪಾತ್ರೆಗಳನ್ನು ಚಕಚಕಗೊಳಿಸೋ ಸುಲಭ ವಿಧಾನ ಇಲ್ಲಿದೆ.

3 ಸ್ಪೂನ್ ಕಡಲೆ ಹಿಟ್ಟು (Gram Floor) ತೆಗೆದುಕೊಳ್ಳಿ.

ಹಿಟ್ಟಿಗೆ 1 ಚಮಚ ಉಪ್ಪನ್ನು ಸೇರಿಸಿ.

ಮಿಶ್ರಣಕ್ಕೆ 3 ಚಮಚ ಮೊಸರು (curd) ಮಿಶ್ರಣ ಮಾಡಿ.

ಮಿಶ್ರಣಕ್ಕೆ 1 ಚಮಚ ಅರಿಶಿನ ಸೇರಿಸಿ.

ಅಂತಿಮವಾಗಿ, 2 ಚಮಚ ನಿಂಬೆ ರಸವನ್ನು ಸೇರಿಸಿ.

ಒಂದು ಹದಕ್ಕೆ ಬರುವವರೆಗೆ ಪೇಸ್ಟ್ ಆಗುವಂತೆ ಮಿಕ್ಸ್ ಮಾಡಿ.

ಇಷ್ಟು ಮಾಡಿದರೆ ಪೇಸ್ಟ್ ಸಿದ್ಧವಾಗುತ್ತದೆ.

ಸ್ವಲ್ಪ ಪ್ರಮಾಣದ ಪೇಸ್ಟ್ (paste) ತೆಗೆದುಕೊಂಡು ಅದನ್ನು ನೀವು ಸ್ವಚ್ಛಗೊಳಿಸಲು ಬಯಸುವ ತಾಮ್ರದ ಉತ್ಪನ್ನಗಳ ಮೇಲೆ ಉಜ್ಜಿಕೊಳ್ಳಿ.

ತಾಮ್ರದ ವಸ್ತುಗಳನ್ನು ಪೇಸ್ಟ್ನೊಂದಿಗೆ ನಿಧಾನವಾಗಿ ಉಜ್ಜಲು ಮೃದುವಾದ ಬಟ್ಟೆ ಅಥವಾ ಮೃದುವಾದ ಬ್ರಷ್ ಬಳಸಿ.

ಕೊಳಕು ಹೊರಬರಲು ಪ್ರಾರಂಭವಾಗುವವರೆಗೆ ಉಜ್ಜುವುದನ್ನು ಮುಂದುವರಿಸಿ.

ಪೇಸ್ಟ್ ಸಂಪೂರ್ಣವಾಗಿ ಪಾತ್ರೆಯಿಂದ ಹೋಗುವವರೆಗೆ ನೀರಿನಿಂದ ಚೆನ್ನಾಗಿ ತೊಳೆಯಿರಿ.

ತಾಮ್ರದ ವಸ್ತುಗಳನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಿ.

Source link
ತಾಮ್ರದ ಪಾತ್ರೆ ಕಪ್ಪಾಗೋ ಚಿಂತೆನಾ? ಇನ್ಮುಂದೆ ಟೆನ್ಷನ್ ಬಿಡಿ- ಫಳಫಳ ಹೊಳಪಿಗೆ ಇಲ್ಲಿದೆ ಸೂಪರ್ ಟಿಪ್ಸ್