ಮುಂಬೈ, (ಫೆಬ್ರವರಿ 25): ಕೈಗಾರಿಕೋದ್ಯಮಿ ಅನಿಲ್ ಅಂಬಾನಿ (ಅನಿಲ್ ಅಂಬಾನಿ) ಅವರ ಮುಂಬೈನಲ್ಲಿರುವ 3,716 ಮೌಲ್ಯದ ‘ಅಬೋಡ್’ ನಿವಾಸವನ್ನು ಇಡಿ ತಾತ್ಕಾಲಿಕ ಮುಟ್ಟುಗೋಲು ಹಾಕಿಕೊಂಡಿದೆ. ಅನಿಲ್ ಅಂಬಾನಿ ಅವರ ಸಮೂಹ ಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಕಮ್ಯುನಿಕೇಷನ್ಸ್(ಆರ್‌ಕಾಂ) ವಿರುದ್ಧ ಬ್ಯಾಂಕ್ ಸಾಲದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಡಿ ಅಧಿಕಾರಿಗಳು, ಅನಿಲ್ ಅಂಬಾನಿ ಬಂಗಲೆಯನ್ನು ಜಪ್ತಿ ಮಾಡಿದರು.
ಮುಂಬೈನ ಪಾಲಿಹಿಲ್ ಪ್ರದೇಶದಲ್ಲಿರುವ 17 ಅಂತಸ್ತಿನ, 66 ಮೀ.ಎತ್ತರದ ಐಷಾರಾಮಿ ಆಸ್ತಿಯ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ತಾತ್ಕಾಲಿಕ ಜಪ್ತಿ ಆದೇಶವನ್ನು ಹೊರಡಿಸಲಾಗಿದೆ. ಈ ಪ್ರಕರಣಕ್ಕೆ ಈವರೆಗೆ ಜಪ್ತಿ ಮಾಡಲಾದ ಆಸ್ತಿಯ ಮೌಲ್ಯ 15,700 ಕೋಟಿ ರೂಪಾಯಿಗೆ ತಲುಪಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಅನಿಲ್ ಅಂಬಾನಿಗೆ ಇನ್ನಷ್ಟು ಕುಣಿಕೆ ಬಿಗಿದ ಇಡಿ; 3,000 ಕೋಟಿ ರೂ ಮೌಲ್ಯದ ವಿವಿಧ ಆಸ್ತಿಗಳು ಮುಟ್ಟುಗೋಲು
ಈ ಜಪ್ತಿ ಆರ್‌ಕಾಮ್‌ನಿಂದ ಹಣಕಾಸು ಅಕ್ರಮಗಳು ಮತ್ತು ಸಾಲದ ಹಣದ ದುರ್ಬಳಕೆ ಆರೋಪಗಳ ಕುರಿತು ಇಡಿ ನಡೆಸುತ್ತಿರುವ ತನಿಖೆಯ ಭಾಗವಾಗಿದೆ. ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ಕಂಪನಿಗಳಿಂದ ವಂಚನೆ, ಲಂಚಾ ಮತ್ತು ಬ್ಯಾಂಕ್ ಸಾಲಗಳ ಬಳಕೆಯ ಆರೋಪಗಳಿಗೆ ಸಂಬಂಧಿಸಿದಂತೆ ಎರಡು ಎಫ್‌ಐಆರ್‌ಗಳ ಆಧಾರದಲ್ಲಿ ಇಡಿ ತನಿಖೆ ನಡೆಸುತ್ತಿದೆ.
ಈ ಮೂಲಗಳ ಪ್ರಕಾರ, ಈ ಪ್ರಕರಣದಲ್ಲಿ ಅನಿಲ್ ಅಂಬಾನಿ ಅವರನ್ನು ಇಡಿ ಎರಡನೇ ಬಾರಿಗೆ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಅವರನ್ನು ಈ ಹಿಂದೆ ಆಗಸ್ಟ್ 2025 ರಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಆ ವೇಳೆ ಪಿಎಂಎಲ್ ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಲಾಗಿದೆ. ಈಗ ಮತ್ತೊಮ್ಮೆ ವಿಚಾರಣೆಗೆ ಒಳಪಡುವ ಸಾಧ್ಯತೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ