
ಮೈಸೂರು, ಫೆಬ್ರವರಿ 09: ಮೈಸೂರು ನಗರದ ಕೆಸರೆ ಬಡಾವಣೆಯಲ್ಲಿ ಭಾರಿ ಅವಘಡ ಸಂಭವಿಸಿದೆ. ಮೈಸೂರು-ಬೆಂಗಳೂರು ಹೆದ್ದಾರಿ ಸಮೀಪದ, ಓಲ್ಡ್ ಐಟಿಐ (ಹಳೆಯ ಐಟಿಐ) ಪ್ರದೇಶದಲ್ಲಿ ನಾಲ್ಕಕ್ಕೂ ಹೆಚ್ಚು ಗೋದಾಮುಗಳಿಗೆ ಬೆಂಕಿ ತಗುಲಿದೆ, ಭಾರೀ ಪ್ರಮಾಣದ ಹಾನಿ ಸಂಭವಿಸಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಮೈಸೂರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಪ್ರಯತ್ನ ಮಾಡಲಾಗಿದೆ. ಈ ಹಿನ್ನೆಲೆ ಹಲವು ಅಗ್ನಿಶಾಮಕ ವಾಹನಗಳು ಕಾರ್ಯನಿರ್ವಹಿಸುತ್ತಿವೆ, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.
ಈ ಅನಾಹುತದಿಂದ ಸುತ್ತ ಮುತ್ತ ದಟ್ಟ ಹೊಗೆ ಆವರಿಸಿದ್ದು, ಅಗ್ನಿಶಾಮಕ ದಳದ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯೂ ನಿಯೋಜನೆಗೊಂಡಿದ್ದು, ಪರಿಸ್ಥಿತಿ ನಿಭಾಯಿಸಲು ಸಹಾಯಕವಾಗಿದೆ. ಅಗ್ನಿ ಅವಘಡದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕೆಲವು ಮೂಲಗಳ ಪ್ರಕಾರ, ದುಷ್ಕರ್ಮಿಗಳ ಕೃತ್ಯದಿಂದ ಬೆಂಕಿ ತಗುಲಿರುವ ಸಾಧ್ಯತೆಯೂ ಇದೆ ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.