ಬೆಂಗಳೂರು, (ನವೆಂಬರ್ 28): ಆನೇಕಲ್ ತಾಲ್ಲೂಕಿನ ಕಮ್ಮಸಂದ್ರ ಅಗ್ರಹಾರದ ಬಳಿ ಸೆರೆ ಸಿಕ್ಕಿದ್ದ ಕಾಡೆಮ್ಮನನ್ನು ಹಿಡಿಯಲು ಅರಣ್ಯ ಇಲಾಖೆ ಕಳೆದ ಎರಡು ದಿನಗಳಿಂದ ನಡೆಸುತ್ತಿರುವ ಕಸರತ್ತು ವಿಫಲವಾಗಿದೆ, ಇಲಾಖೆಯ ಕಾರ್ಯಾಚರಣೆ ಸ್ಥಳೀಯರಲ್ಲಿ ಕುತೂಹಲ ಮತ್ತು ಆತಂಕವನ್ನು ಸೃಷ್ಟಿಸಿದೆ. ಈ ಕಾಡಮ್ಮೆ ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಸಿಬ್ಬಂದಿಗೆ ‘ಕಾಡೆಮ್ಮೆ ಸಿಕ್ಕಾಗ ಅರವಳಿಕೆ ಇರಲಿಲ್ಲ, ಈಗ ಅರವಳಿಕೆ ತಂದಾಗ ಕಾಡೆಮ್ಮೆ ಸಿಗುತ್ತಿಲ್ಲ’. ಆದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ ಕಾಡಮ್ಮೆ ಸೆರೆ ಹಿಡಿಯೋದು ತಲೆನೋವಾಗಿದೆ.
ಕಳೆದ ದಿನ ಕಮ್ಮಸಂದ್ರ ಅಗ್ರಹಾರದ ಬಳಿ ಕಾಡೆಮ್ಮೆ ಕಾಣಿಸಿಕೊಂಡಾಗ, ಅರಣ್ಯ ಇಲಾಖೆ ಸಿಬ್ಬಂದಿ, ತಜ್ಞ ವೈದ್ಯರ ತಂಡ ಸೇರಿದಂತೆ ದೊಡ್ಡ ಪಡೆಯೇ ಸ್ಥಳದಲ್ಲಿ ಜಮಾವಣೆಗೊಂಡಿತ್ತು. ಕಡೆಮ್ಮೆ ಜನರ ಕಣ್ಣ ಮುಂದೆಯೇ ಇಡೀ ದಿನ ಸಂಚರಿಸುತ್ತಿತ್ತು. ಆದರೆ, ಪ್ರಾಣಿಯನ್ನು ಸೆರೆ ಹಿಡಿಯಲು ಅತ್ಯಗತ್ಯವಾದ ಅರವಳಿಕೆ ಲಭ್ಯವಿರಲಿಲ್ಲ. ಇಡೀ ದಿನ ಕಾಡೆಮ್ಮೆ ಇಲಾಖೆ ಕಣ್ಣ ಮುಂದೆಯೇ ಇದ್ದರೂ, ಅದನ್ನು ಹಿಡಿಯಲು ಸಾಧ್ಯವಾಗದೆ ಸಿಬ್ಬಂದಿ ವಿಫಲವಾಗಿದೆ. ಇದೀಗ ಅರವಳಿಕೆ ಹಿಡಿದು ಹುಡುಕುತ್ತಿದ್ದರೂ ಸಹ ಕಡೆಮ್ಮೆ ಸಿಗುತ್ತಿಲ್ಲ. ಡ್ರೋಣ್ ಕ್ಯಾಮೆರಾದಿಂದ ಹುಡುಕಾಡಿದರೂ ಸಹ ಇಲ್ಲ. ಇದರಿಂದ ಸ್ಥಳೀಯರಲ್ಲಿ ಆತಂಕ ಮುಂದುವರಿದಿದೆ.