
ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಆರೋಪಿಸಿದ ಪ್ರತಾಪ್ ಸಿಂಹ, ಕಾಂಗ್ರೆಸ್ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಆಡಳಿತ ಸತ್ತಿದೆ. ಆ ಸತ್ತ ಆಡಳಿತದ ಹೆಣವನ್ನು ಸಿದ್ದರಾಮಯ್ಯ ಮುಂದೆ ಹೊತ್ತಿದ್ದಾರೆ, ಡಿ.ಕೆ. ಶಿವಕುಮಾರ್ ಹಿಂದೆ ಹೊತ್ತಿದ್ದಾರೆ. ಆಡಳಿತದ ಹೆಣವನ್ನು ಮುಂದೆ ಹೊರುವ ಪ್ರಯತ್ನವನ್ನು ಡಿಕೆ ಮಾಡುತ್ತಿದ್ದಾರೆ. ಹೆಣವನ್ನು ಮುಂದೆ ಯಾರಾದರೂ ಹೊರಲಿ, ಹಿಂದೆ ಯಾರಾದರೂ ಹೊರಲಿ – ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಎಂದಿಗೂ ದೇವರಾಜ ಅರಸು ಆಗಲು ಸಾಧ್ಯವಿಲ್ಲ ಎಂದು ಹೇಳಿದ ಅವರು ಸಿದ್ದರಾಮಯ್ಯ ಬಹಳ ಬೇಗ ಜನರ ಮನಸ್ಸಿನಿಂದ ದೂರಾಗುತ್ತಾರೆ. ಜನರು ಅವರನ್ನು ಮರೆಯುವ ದಿನಗಳು ಬಹಳ ದೂರವಿಲ್ಲ ಎಂದು ಹೇಳಿದರು. ಡಿ.ಕೆ. ಶಿವಕುಮಾರ್ ಜೊತೆಗೆ ಪೈಪೋಟಿ ನಡೆಸುತ್ತಾ ಕೆಲ ದಿನಗಳು ಮಾತ್ರ ತಮ್ಮ ಸ್ಥಾನ ಉಳಿಸಿಕೊಳ್ಳಬಹುದು ಎಂದು ಟೀಕಿಸಿದ ಪ್ರತಾಪ್ ಸಿಂಹ, “ಅದರಿಂದ ಯಾವುದೇ ಪ್ರಯೋಜನ ಇಲ್ಲ” ಎಂದರು.