Headlines

ಹರೀಶ್ ರಾಣಾಗೆ ದಯಾಮರಣ: ಈ ಕಾನೂನು ಹೋರಾಟಕ್ಕೆ ಮುನ್ನುಡಿ ಬರೆದಿದ್ದು 42 ವರ್ಷ ಕೋಮಾದಲ್ಲಿದ್ದ ದಾದಿ ಅರುಣಾ ಕಥೆ!

ಹರೀಶ್ ರಾಣಾಗೆ ದಯಾಮರಣ: ಈ ಕಾನೂನು ಹೋರಾಟಕ್ಕೆ ಮುನ್ನುಡಿ ಬರೆದಿದ್ದು 42 ವರ್ಷ ಕೋಮಾದಲ್ಲಿದ್ದ  ದಾದಿ ಅರುಣಾ ಕಥೆ!

ಹರೀಶ್ ರಾಣಾಗೆ ದಯಾಮರಣ: ಈ ಕಾನೂನು ಹೋರಾಟಕ್ಕೆ ಮುನ್ನುಡಿ ಬರೆದಿದ್ದು 42 ವರ್ಷ ಕೋಮಾದಲ್ಲಿದ್ದ  ದಾದಿ ಅರುಣಾ ಕಥೆ!

ಈ ಲೇಖನವು, 42 ವರ್ಷಗಳ ಕಾಲ ಕೋಮಾ ಸ್ಥಿತಿಯಲ್ಲಿದ್ದ ನರ್ಸ್ ಅರುಣಾ ಶಾನಬಾಗ್ ದುರಂತ ಕಥೆಯು ಭಾರತದಲ್ಲಿ ನಿಷ್ಕ್ರಿಯ ದಯಾಮರಣದ ಕಾನೂನು ಚರ್ಚೆಗೆ ಹೇಗೆ ಕಾರಣವಾಯಿತು?. ಇತ್ತೀಚೆಗೆ ಹರೀಶ್ ರಾಣಾ ಪ್ರಕರಣದಲ್ಲಿ ಸುಪ್ರೀಂ ನೀಡಿದ ತೀರ್ಪು, ‘ಘನತೆಯಿಂದ ಸಾಯುವ ಹಕ್ಕಿನ’ ಕುರಿತ ಈ ಚರ್ಚೆ ಮುನ್ನೆಲೆಗೆ ತಂದಿದೆ.

ಭಾರತದಲ್ಲಿ ದಯಾಮರಣ (Euthanasia) ಕುರಿತು ನಡೆಯುತ್ತಿರುವ ಚರ್ಚೆಗಳು ಮತ್ತೆ ತೀವ್ರವಾಗುತ್ತಿರುವ ಸಂದರ್ಭದಲ್ಲಿ, ದೇಶವನ್ನು ಬೆಚ್ಚಿಬೀಳಿಸಿದ ಅರುಣಾ ಶಾನಬಾಗ್ ಪ್ರಕರಣವನ್ನು ಮತ್ತೆ ನೆನಪಿಸಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ 13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಇದ್ದ ಹರೀಶ್ ರಾಣಾ ಅವರಿಗೆ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ನೀಡಿದ ಹಿನ್ನೆಲೆ, ಭಾರತದ ‘ಸಾಯುವ ಹಕ್ಕು’ ಕುರಿತ ಕಾನೂನು ಚರ್ಚೆಗೆ ಮೂಲವಾಗಿದ್ದ ಅರುಣಾ ಶಾನಬಾಗ್ ಅವರ ಹೃದಯವಿದ್ರಾವಕ ಕಥೆ ಮತ್ತೊಮ್ಮೆ ಗಮನ ಸೆಳೆಯುತ್ತಿದೆ.

1973ರ ನವೆಂಬರ್ 27ರಂದು ಮುಂಬೈನ ಕಿಂಗ್ ಎಡ್ವರ್ಡ್ ಮೆಮೋರಿಯಲ್ (KEM) ಆಸ್ಪತ್ರೆಯಲ್ಲಿ 25 ವರ್ಷದ ಯುವ ನರ್ಸ್ ಆಗಿದ್ದ ಅರುಣಾ ಶಾನಬಾಗ್ ತಮ್ಮ ಕರ್ತವ್ಯ ಮುಗಿಸಿ ಮನೆಗೆ ತೆರಳಲು ಸಿದ್ಧರಾಗಿದ್ದರು. ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸೋಹನ್ಲಾಲ್ ವಾಲ್ಮೀಕಿ ಎಂಬಾತನೊಂದಿಗೆ ಅವರಿಗೆ ವಾಗ್ವಾದ ಉಂಟಾಯಿತು.

ಕೆಲವು ವರದಿಗಳ ಪ್ರಕಾರ, ರಜೆ ವಿನಂತಿ ನಿರಾಕರಿಸಿದ್ದ ಕಾರಣದಿಂದ ವಾಲ್ಮೀಕಿ ಕೋಪಗೊಂಡಿದ್ದನು. ನಂತರ ಆ ರಾತ್ರಿ ಅವನು ಅರುಣಾ ಮೇಲೆ ಕ್ರೂರ ದಾಳಿ ನಡೆಸಿದನು. ಅವಳನ್ನು ನಾಯಿ ಸರಪಳಿಯಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಹಲ್ಲೆ ಮಾಡಲಾಗಿತ್ತು. ಈ ದಾಳಿಯಿಂದಾಗಿ ಅರುಣಾ ಅವರಿಗೆ ತೀವ್ರ ಮೆದುಳು ಹಾನಿ ಉಂಟಾಯಿತು.

ಹಲ್ಲೆಯ ಬಳಿಕ ಅವಳನ್ನು ಆಸ್ಪತ್ರೆಯೊಳಗೆ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಹಚ್ಚಲಾಯಿತು. ವೈದ್ಯಕೀಯ ಪರೀಕ್ಷೆಯಲ್ಲಿ ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿತು. ವಾಲ್ಮೀಕಿ ಮೇಲೆ ಕೊಲೆ ಯತ್ನ ಮತ್ತು ದರೋಡೆ ಆರೋಪಗಳು ಸಾಬೀತಾಗಿ ಶಿಕ್ಷೆ ವಿಧಿಸಲಾಯಿತು. ಆದರೆ ಅತ್ಯಾ*ಚಾರದ ಆರೋಪಕ್ಕೆ ಶಿಕ್ಷೆ ವಿಧಿಸಲಾಗಲಿಲ್ಲ ಎಂಬುದು ಆ ಕಾಲದ ಕಾನೂನು ವ್ಯವಸ್ಥೆಯ ಕುರಿತಾಗಿ ದೊಡ್ಡ ವಿವಾದಕ್ಕೆ ಕಾರಣವಾಯಿತು.

ಈ ದಾಳಿಯಿಂದ ಅರುಣಾ ಅವರ ಮೆದುಳಿಗೆ ಆಮ್ಲಜನಕ ಪೂರೈಕೆ ಕಡಿತಗೊಂಡಿದ್ದು ಶಾಶ್ವತ ಹಾನಿ ಉಂಟಾಯಿತು. ಪರಿಣಾಮವಾಗಿ ಅವರು ಸಸ್ಯಕ ಸ್ಥಿತಿ (ಕೃತಕ ಜೀವಾಧಾರಕ – ಕೋಮಾ Vegetative State)ಗೆ ತಳ್ಳಲ್ಪಟ್ಟರು. ಅವರು ಕಣ್ಣು ತೆರೆದು ನೋಡುವಂತಿದ್ದರೂ, ತಮ್ಮ ಸುತ್ತಲಿನ ಘಟನೆಗಳನ್ನು ಅರಿತುಕೊಳ್ಳಲು ಅಥವಾ ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿರಲಿಲ್ಲ. ಮಾತನಾಡುವುದು, ಭಾವನೆ ವ್ಯಕ್ತಪಡಿಸುವುದು ಅಥವಾ ದೇಹವನ್ನು ಚಲಿಸುವುದು ಅವರಿಂದ ಸಾಧ್ಯವಾಗಲಿಲ್ಲ.

ಅರುಣಾ ಅವರಿಗೆ ಎಂಟು ಮಂದಿ ಸಹೋದರ–ಸಹೋದರಿಯರು ಇದ್ದರೂ, ಕೆಲವೇ ವರ್ಷಗಳ ಬಳಿಕ ಅವರ ಭೇಟಿ ಕಡಿಮೆಯಾಯಿತು ಎಂದು ಆಸ್ಪತ್ರೆ ಮೂಲಗಳು ಹೇಳುತ್ತವೆ. ಆದರೆ ಕುಟುಂಬದವರು ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಇದರಿಂದಾಗಿ KEM ಆಸ್ಪತ್ರೆಯ ದಾದಿಯರು ಮತ್ತು ಸಿಬ್ಬಂದಿಯೇ ಅರುಣಾ ಅವರನ್ನು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ನೋಡಿಕೊಂಡರು. ಆಸ್ಪತ್ರೆಯ ಸಿಬ್ಬಂದಿಯ ಸೇವಾಭಾವ ದೇಶದಾದ್ಯಂತ ಪ್ರಶಂಸೆಗೆ ಪಾತ್ರವಾಯಿತು.

2009ರಲ್ಲಿ ಲೇಖಕಿ ಹಾಗೂ ಪತ್ರಕರ್ತೆ ಪಿಂಕಿ ವಿರಾನಿ ಅರುಣಾ ಶಾನಬಾಗ್ ಅವರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ದಯಾಮರಣ ಅರ್ಜಿ ಸಲ್ಲಿಸಿದರು. “ ಅರುಣಾಸ್ ಸ್ಟೋರಿ: ದಿ ಟ್ರೂ ಅಕೌಂಟ್ ಆಫ್ ಎ ರೇ*ಪ್ and Its Aftermath” ಎಂಬ ಪುಸ್ತಕದಲ್ಲೂ ಅವರು ಈ ಘಟನೆ ದಾಖಲಿಸಿದ್ದರು. ಸುಪ್ರೀಂ ಕೋರ್ಟ್ ವೈದ್ಯಕೀಯ ಸಮಿತಿಯನ್ನು ನೇಮಿಸಿ ಅರುಣಾ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿತು. ವೈದ್ಯಕೀಯ ಸಮಿತಿ ಅವರು ಶಾಶ್ವತ ಕೋಮಾ ಸ್ಥಿತಿಯಲ್ಲಿ ಇದ್ದಾರೆ ಎಂದು ತಿಳಿಸಿತು. 2011ರ ಮಾರ್ಚ್ 7ರಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು. ಭಾರತದಲ್ಲಿ ನಿಷ್ಕ್ರಿಯ ದಯಾಮರಣ (Passive Euthanasia)ಗೆ ಮಾರ್ಗಸೂಚಿಗಳನ್ನು ರೂಪಿಸಿ ಕಾನೂನುಬದ್ಧತೆ ನೀಡಿತು. ಆದರೆ ಅರುಣಾ ಶಾನಬಾಗ್ ಪ್ರಕರಣದಲ್ಲಿ ದಯಾಮರಣ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಕಾರಣ, ಅವರನ್ನು ವರ್ಷಗಳ ಕಾಲ ನೋಡಿಕೊಂಡಿದ್ದ KEM ಆಸ್ಪತ್ರೆಯ ಸಿಬ್ಬಂದಿ ಅವರು ಬದುಕಬೇಕೆಂದು ಅಭಿಪ್ರಾಯಪಟ್ಟಿದ್ದರು.

ನಂತರ 2014ರಲ್ಲಿ ದಯಾಮರಣ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್ ಐದು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ಒಪ್ಪಿಸಿತು. “ಕಾಮನ್ ಕಾಸ್” ಎಂಬ ಸಂಸ್ಥೆ ಘನತೆಯಿಂದ ಸಾಯುವ ಹಕ್ಕು ಮಾನವನ ಮೂಲಭೂತ ಹಕ್ಕಾಗಿರಬೇಕು ಎಂದು ವಾದಿಸಿತು.

ಕೇಂದ್ರ ಸರ್ಕಾರ ಇದನ್ನು ವಿರೋಧಿಸಿತು. ವೈದ್ಯರ ಕರ್ತವ್ಯ ಜೀವ ಉಳಿಸುವುದು, ಅದನ್ನು ಕೊನೆಗೊಳಿಸುವುದು ಅಲ್ಲ ಎಂದು ಸರ್ಕಾರ ಹೇಳಿತ್ತು. ಇದರ ನಡುವೆ 2015ರಲ್ಲಿ ಅರುಣಾ ಶಾನಬಾಗ್ ಅವರಿಗೆ ನ್ಯುಮೋನಿಯಾ ತಗುಲಿ, ಮೇ 18ರಂದು ಅವರು ನಿಧನರಾದರು. ನಾಲ್ಕು ದಶಕಗಳ ಕಾಲ ಅವರನ್ನು ನೋಡಿಕೊಂಡಿದ್ದ ಆಸ್ಪತ್ರೆಯ ದಾದಿಯರೇ ಅವರ ಅಂತ್ಯಕ್ರಿಯೆ ನೆರವೇರಿಸಿದರು.

ನಂತರ 2018ರಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು. ನಿಷ್ಕ್ರಿಯ ದಯಾಮರಣವನ್ನು ಸಂಪೂರ್ಣವಾಗಿ ಕಾನೂನುಬದ್ಧಗೊಳಿಸಿ,  ಘನತೆಯಿಂದ ಸಾಯುವ ಹಕ್ಕು (Right to Die with Dignity) ಯನ್ನು ಮೂಲಭೂತ ಹಕ್ಕಾಗಿ ಗುರುತಿಸಿತು. “ಲಿವಿಂಗ್ ವಿಲ್” ಅಥವಾ ಜೀವಂತ ಇಚ್ಛೆ ಎಂಬ ವ್ಯವಸ್ಥೆಯನ್ನೂ ನ್ಯಾಯಾಲಯ ಮಾನ್ಯತೆ ನೀಡಿತು.

ಇದೀಗ ಸುಪ್ರೀಂ ಕೋರ್ಟ್ 13 ವರ್ಷಗಳಿಂದ ಸಸ್ಯಕ ಸ್ಥಿತಿಯಲ್ಲಿ ಇದ್ದ 31 ವರ್ಷದ ಹರೀಶ್ ರಾಣಾ ಅವರಿಗೆ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ನೀಡಿದೆ.

ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಹರೀಶ್ ರಾಣಾ 2013ರಲ್ಲಿ ಪೇಯಿಂಗ್ ಗೆಸ್ಟ್ ವಸತಿಗೃಹದ ನಾಲ್ಕನೇ ಮಹಡಿಯಿಂದ ಬಿದ್ದು ಗಂಭೀರ ಮೆದುಳು ಗಾಯಗೊಂಡಿದ್ದರು. ನಂತರದಿಂದ ಅವರು ಜೀವ ಬೆಂಬಲ ವ್ಯವಸ್ಥೆಗಳ ಮೇಲೆಯೇ ಅವಲಂಬಿತರಾಗಿದ್ದರು.

ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಹಾಗೂ ಆಹಾರಕ್ಕಾಗಿ ಗ್ಯಾಸ್ಟ್ರೋಜೆಜುನೋಸ್ಟೊಮಿ ಟ್ಯೂಬ್ ಸಹಾಯದಿಂದ ಅವರು ಬದುಕುತ್ತಿದ್ದರು. ಕಳೆದ 13 ವರ್ಷಗಳಲ್ಲಿ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣದ ಕಾರಣ, ಅವರ ಪೋಷಕರು ದಯಾಮರಣಕ್ಕೆ ಅನುಮತಿ ಕೋರಿ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.

ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರ ಪೀಠ, ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದ ಬಳಿಕ ಈ ಅನುಮತಿಯನ್ನು ನೀಡಿದೆ.

“ವೈದ್ಯರ ಕರ್ತವ್ಯ ರೋಗಿಗೆ ಚಿಕಿತ್ಸೆ ನೀಡುವುದೇ ಆಗಿದ್ದರೂ, ಚೇತರಿಕೆಯ ಯಾವುದೇ ಭರವಸೆ ಇಲ್ಲದ ಸಂದರ್ಭದಲ್ಲಿ ಆ ಕರ್ತವ್ಯವನ್ನು ಮರುಪರಿಶೀಲಿಸಬೇಕಾಗುತ್ತದೆ,” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಒಟ್ಟಿನಲ್ಲಿ, ಅರುಣಾ ಶಾನಬಾಗ್ ಅವರ ದುರಂತ ಕಥೆ ಭಾರತದಲ್ಲಿ ದಯಾಮರಣ ಹಾಗೂ ಘನತೆಯಿಂದ ಸಾಯುವ ಹಕ್ಕು ಕುರಿತ ಕಾನೂನು ಚರ್ಚೆಗೆ ದಿಕ್ಕು ತೋರಿಸಿದ ಮಹತ್ವದ ಘಟನೆ ಎನ್ನಬಹುದು. ಇಂದು ಹರೀಶ್ ರಾಣಾ ಪ್ರಕರಣದೊಂದಿಗೆ ಆ ಚರ್ಚೆ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಪ್ರಸ್ತಾಪವಾಗುತ್ತಿದೆ.

Source link

Leave a Reply

Your email address will not be published. Required fields are marked *