ಗುತ್ತಲ ಠಾಣೆಯ ಪಿಎಸ್ ಐ ಬಸನಗೌಡ ಬಿರಾದಾರ ಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ
ಹಾವೇರಿ, ಮಾರ್ಚ್ 05: ಗುತ್ತಲ ಪಟ್ಟಣದಲ್ಲಿ ರಾಜಾರೋಷವಾಗಿ ಮಟ್ಕಾ ದಂಧೆ ನಡೆಯುತ್ತಿರುವ ಕಾರಣ ಕರ್ತವ್ಯಲೋಪ ಹಿನ್ನೆಲೆ ಗುತ್ತಲ ಠಾಣೆಯ ಪಿಎಸ್ಐ ಬಸನಗೌಡ ಬಿರಾದಾರ ಅವರಿಗೆ ಅಮಾನತು ಮಾಡಿ ದಾವಣಗೆರೆ ಪೂರ್ವ ವಲಯ ಐಜಿಪಿ ಡಾ.ರವಿಕಾಂತೇಗೌಡ ಆದೇಶ ನೀಡಿದ್ದಾರೆ. 3 ದಿನಗಳ ಹಿಂದೆ ಗುತ್ತಲ ಪಟ್ಟಣಕ್ಕೆ ಭೇಟಿ ನೀಡಿದ್ದ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಮಟ್ಕಾ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ್ದರು. ಆರೋಪಿ ತಾವೇ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಹೀಗಾಗಿ ಮಟ್ಕಾ ದಂಧೆಕೋರರನ್ನು ಹಿಡಿಯಲು ಶಾಸಕರೇ ಬರುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಪಿಎಸ್ಐ ತಲೆದಂಡ ಮಾಡಿ ಐಜಿಪಿ ಸ್ಥಾಪಿಸಿದ್ದಾರೆ.
ಡೆಪ್ಯುಟಿ ಸ್ಪೀಕರ್ ಗೆ ದೂರು ನೀಡಿದ್ದ ಮಹಿಳೆಯರು
ವಿವಿಧ ಕಾಮಗಾರಿಗಳ ಉದ್ಘಾಟನೆಗಾಗಿ ಹಾವೇರಿ ತಾಲೂಕಿನ ಗುತ್ತಲ ಪಟ್ಟಣಕ್ಕೆ ರುದ್ರಪ್ಪ ಲಮಾಣಿ ಭೇಟಿ ನೀಡಿದ್ದರು, ಈ ವೇಳೆ ಸ್ಥಳೀಯ ಮಹಿಳಾ ಡೆಪ್ಯುಟಿ ಸ್ಪೀಕರ್ ಪ್ರಾಥಮಿಕ ಮಕ್ಕಳ ಶಾಲೆ ಸಮೀದ ಕೊಠಡಿಯಲ್ಲಿ ಮಟ್ಕಾ ದಂಧೆ ಕುರಿತು ದೂರು ನೀಡಿದ್ದರು. ಅವ್ಯಾಹತವಾಗಿ ದಂಧೆ ನಡೆಯುತ್ತಿತ್ತು, ಇವರಿಗೆ ಹೇಳುವವರು ಕೇಳುವವರು ಯಾರೂ ಇಲ್ಲದ ಸ್ಥಿತಿ ಉದ್ಭವಿಸಿರೋದಾಗಿ ಅಲವತ್ತುಕೊಂಡಿದ್ದರು. ಕೂಡಲೇ ಸ್ಥಳಕ್ಕೆ ರುದ್ರಪ್ಪ ಲಮಾಣಿ ಭೇಟಿ ನೀಡಿದಾಗ ವ್ಯಕ್ತಿಯೋರ್ವ ಮಟ್ಕಾ ಬರೆಯುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: ಮಟ್ಕಾ ಅಡ್ಡೆ ಮೇಲೆ ದಾಳಿ ಮಾಡಿ ಬುಕ್ಕಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಶಾಸಕ
ಮಹಿಳೆಯರು ದೂರಿರುವಂತೆ ರಾಜಾರೋಷವಾಗಿ ಮಟ್ಕಾ ದಂಧೆ ನಡೆಯುತ್ತಿರುವುದನ್ನು ಕಂಡು ಗರಂ ಆದ ರುದ್ರಪ್ಪ ಲಮಾಣಿ, ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪಿಎಸ್ ಐಗೆ ಆರೋಪಿಯನ್ನು ಒಪ್ಪಿಸಿದ್ದ ಡೆಪ್ಯೂಟಿ ಸ್ಪೀಕರ್, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದಿತ್ತು. ಕೂಡಲೇ ಮಟ್ಕಾ ದಂಧೆಗೆ ಕಡಿವಾಣ ಹಾಕುವಂತೆ ತಹಶೀಲ್ದಾರ್ ಮತ್ತು ಪೊಲೀಸ್ ಸಿಬ್ಬಂದಿಗೆ ರುದ್ರಪ್ಪ ಲಮಾಣಿ ಸೂಚಿಸಿರುವುದು ಸ್ಥಳೀಯರ ಮೆಚ್ಚುಗೆಗೆ ಕಾರಣವಾಗಿದೆ. ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಜನಪ್ರತಿನಿಧಿಗಳೇ ಬಂದು ಮಾಡಬೇಕಿತ್ತು ಎಂಬ ಮಾತುಗಳು ಸಹ ಕೇಳಿಬಂದಿದ್ದವು. ಹೀಗಾಗಿ ಎಚ್ಚೆತ್ತ ಪೊಲೀಸ್ ಇಲಾಖೆ ಘಟನೆಯಲ್ಲಿ ಗುತ್ತಲ ಠಾಣೆಯ ಪಿಎಸ್ಐ ಬಸನಗೌಡ ಬಿರಾದಾರ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.