
ಹಾವೇರಿ, ಏಪ್ರಿಲ್ 10: ಸಾಲದ ಹಣ ವಾಪಸ್ ಕೇಳುವ ಭರದಲ್ಲಿ ಒಂದು ಗುಂಪಿನ ಗರ್ಭಿಣಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪರಿಣಾಮ, ಹೊಟ್ಟೆಯಲ್ಲಿ ಆರು ತಿಂಗಳ ಅವಳಿ-ಜವಳಿ ಶಿಶುಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಹಾವೇರಿ (ಹಾವೇರಿ) ಜಿಲ್ಲೆ ಸವಣೂರು ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ನಡೆದಿದೆ. ಅಲ್ಲಿಪುರ ಗ್ರಾಮದ ಹಾಲವ್ವ ಎಂಬುವವರು ಮಗಳ ಸೀಮಂತ ಕಾರ್ಯಕ್ರಮಕ್ಕಾಗಿ ಬಂದಿದ್ದರು. ಹಾಲವ್ವ ಅವರು ಗ್ರಾಮದ ಸುರೇಶ ಲಮಾಣಿ ಎಂಬುವವರಿಂದ 30 ಸಾವಿರ ರೂಪಾಯಿ ಸಾಲ ಪಡೆದಿದ್ದರು.
ಮಾರ್ಚ್ 28 ರಂದು ಹಣ ವಾಪಸ್ ಕೇಳಲು ಬಂದ ಸುರೇಶ ಮತ್ತು ಆತನ ಕುಟುಂಬಸ್ಥರು ಗಲಾಟೆ ಆರಂಭಿಸಿದ್ದಾರೆ. ‘ಮಗಳ ಸೀಮಂತ ಮುಗಿದ ಮೇಲೆ ಹಣ ಕೊಡುತ್ತೇವೆ, ಸ್ವಲ್ಪ ಕೊಡಿ’ ಎಂದು ಹಾಲವ್ವ ಮನವಿ ಮಾಡಿದರೂ ಕೇಳಿದ ಸಮಯ ಆರೋಪಿಗಳು ಹಲ್ಲೆಗೆ ಮುಂದಾಗಿದ್ದಾರೆ.
ಗರ್ಭಿಣಿ ಪವಿತ್ರ ಮೇಲೆ ಹೊಟ್ಟೆಗೆ ಒದ್ದು ಹಲ್ಲೆ
ತಾಯಿ ಹಾಲವ್ವ ಮೇಲೆ ಹಲ್ಲೆ ನಡೆಯುವುದನ್ನು ಕಂಡು ಜಗಳ ಬಿಡಿಸಲು ಬಂದ ಆರು ತಿಂಗಳ ಗರ್ಭಿಣಿ ಮಗಳು ಪವಿತ್ರ ಲಮಾಣಿ ಅವರ ಹೊಟ್ಟೆಗೆ ಆರೋಪಿಗಳು ಬಲವಾಗಿ ಒಡ್ಡಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಅಸ್ವಸ್ಥಗೊಂಡ ಪವಿತ್ರ ಅವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಅವಧಿ ಪೂರ್ವ ಹೆರಿಗೆ, ಹೊಟ್ಟೆಯಲ್ಲಿದ್ದ ಅವಳಿ ಕಂದಮ್ಮಗಳು ಪೆಟ್ಟು ಬಿದ್ದು ಸಾವನ್ನಪ್ಪಿವೆ.
ನಾಲ್ವರ ವಿರುದ್ಧ ದೂರು
ಈ ಘಟನೆ ನಡೆದ ಸುರೇಶ ಲಮಾಣಿ, ಪರಶುರಾಮ ಲಮಾಣಿ, ಮಹೇಶ ಲಮಾಣಿ ಮತ್ತು ಸಕ್ಕುಬಾಯಿ ಲಮಾಣಿ ಎಂಬ ನಾಲ್ವರ ವಿರುದ್ಧ ಸವಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ‘ನನ್ನ ಮಗಳ ಸೀಮಂತ ಮಾಡಬೇಕಾದ ಮನೆಯಲ್ಲಿ ಈಗ ಶವದ ಸೂತಕ ಆವರಿಸಿದೆ, ಆರೋಪಿಗಳನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸಿ’ ಎಂದು ತಾಯಿ ಹಾಲವ್ವ ಕಣ್ಣೀರು ಹಾಕುತ್ತಾ ಬಂದಿದ್ದಾರೆ.
ಇದನ್ನೂ ಓದಿ: ಕಿವಿ ಕೇಳಲ್ಲ, ಮಾತು ಬರಲ್ಲ! ಆದ್ರೂ ಸ್ನೇಹಿತನ ಹೆಂಡತಿ ಮೇಲೆ ಕಣ್ಣು ಹಾಕಿದ ವ್ಯಕ್ತಿ ಮಾಡಿದ್ದೇನು ಗೊತ್ತಾ?
ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ