
ಮೈಸೂರು, ಏಪ್ರಿಲ್ 10: ನಂಜನಗೂಡಿನ ಪುಟ್ಟ ಹಳ್ಳಿಯೊಂದರಲ್ಲಿ ವಿಧಿಯ ಅಟ್ಟಹಾಸಕ್ಕೆ ಸಿಲುಕಿ ಇಡೀ ಕುಟುಂಬವೇ ಬೀದಿಗೆ ಬಿದ್ದಿತ್ತು. ಮಾರಕ ಕಾಯಿಲೆಯಿಂದ ಎರಡು ಕಾಲು ಕಳೆದುಕೊಂಡ ಪೂಜಾ ಎಂಬಾಕೆಯ ಬದುಕು ಅಂಧಕಾರದಲ್ಲಿತ್ತು. ಅತ್ತ ಪತಿಗೂ ಅಪಘಾತ, ಇತ್ತ ಕೈಯಲ್ಲಿ ಹಣವಿಲ್ಲದ ಸ್ಥಿತಿ. ಈ ಕಣ್ಣೀರಿನ ಕಥೆ ಕೇಳಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (ಎಚ್.ಡಿ.ಕುಮಾರಸ್ವಾಮಿ)ಇಂದು ಆ ಬಡ ಕುಟುಂಬಕ್ಕೆ ಸಾಕ್ಷಾತ್ ದೇವರಾಗಿ ಬಂದಿದ್ದರು. ಹಳೆಯ ಲೀಸ್ ಹಣ ತೀರಿಸುವ ಭರವಸೆ ಜೊತೆಗೆ, ಮನೆಯ ಮಗನಂತೆ ಆ ಕುಟುಂಬಕ್ಕೆ ಧೈರ್ಯ ತುಂಬಿದರು.
ಬರೋಬ್ಬರಿ 11 ಶಸ್ತ್ರಚಿಕಿತ್ಸೆ
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ 24 ವರ್ಷದ ಪೂಜಾ ಮಾರಕ ಕಾಯಿಲೆಗೆ ತುತ್ತಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಇಲ್ಲಿಯೇ ನೆಲೆಸಿರುವ ಈ ಕುಟುಂಬಕ್ಕೆ ವಿಧಿ ಒಂದಾದ ಮೇಲೊಂದರಂತೆ ಕಷ್ಟಗಳನ್ನು ನೀಡಿದೆ. ಮಾರಕ ಕಾಯಿಲೆಗೆ ತುತ್ತಾದ ಪೂಜಾ, ಬರೋಬ್ಬರಿ 11 ಶಸ್ತ್ರಚಿಕಿತ್ಸೆಗಳನ್ನ ಎದುರಿಸಿದ್ದಾರೆ. ಅಂತಿಮವಾಗಿ ತನ್ನ ಎರಡೂ ಕಾಲುಗಳನ್ನೇ ಕಳೆದುಕೊಂಡು ಇಂದು ಹಾಸಿಗೆ ಹಿಡಿದಿದ್ದಾರೆ.
ನನ್ನ ಸಂಕಷ್ಟವನ್ನ ಕುಮಾರಣ್ಣನಿಗೆ ತಲುಪಿಸಿ
ಪೂಜಾಗೆ ಗಾಯದ ಮೇಲೆ ಬರೆ ಎಳೆದಂತೆ ಪತಿ ರವಿ ಕೂಡ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ. ಪುಟ್ಟ ಮಕ್ಕಳನ್ನ ಕಟ್ಟಿಕೊಂಡು ಜೀವನ ನಡೆಸಲು ದಾರಿಯೇ ಇಲ್ಲದಂತಾಗ, ಪೂಜಾ ಮನವಿ ಮಾಡಿದ್ದು ಕುಮಾರಣ್ಣನಿಗೆ. “ನನ್ನ ಸಂಕಷ್ಟವನ್ನು ಹೇಗಾದರೂ ಮಾಡಿ ಅವರಿಗೆ ತಲುಪಿಸಿ” ಎಂದು ಬೇಡಿಕೊಂಡಿದ್ದಾರೆ. ಪೂಜಾರ ಕೂಗು ಕುಮಾರಸ್ವಾಮಿ ಅವರಿಗೆ ತಲುಪಿದೆ. ಇಂದು ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು ನೇರವಾಗಿ ಪೂಜಾರ ಮನೆಗೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯಗೆ ಹಳೆಯ ದಿನಗಳನ್ನ ನೆನಪಿಸಿ ವ್ಯಂಗ್ಯವಾಡಿದ ಕುಮಾರಸ್ವಾಮಿ
ಹಾಸಿಗೆಯಲ್ಲಿ ಮಲಗಿದ್ದ ಪೂಜಾರನ್ನ ಕಂಡು ಮರುಗಿದ ಎಚ್ಡಿ ಕುಮಾರಸ್ವಾಮಿ, ಕುಟುಂಬದ ಪರಿಸ್ಥಿತಿಯನ್ನು ಆಲಿಸಿದರು. ಪೂಜಾ ತಂದೆ ಕುಮಾರ ಮತ್ತು ತಾಯಿ ಶೀಲಾರಿಗೆ ಧೈರ್ಯ ತುಂಬಿದರು. ಸ್ಥಳದಲ್ಲೇ ವೈಯಕ್ತಿಕವಾಗಿ ಧನಸಹಾಯ ಮಾಡಿದರು. ಅಷ್ಟೇ, ಕುಟುಂಬದ ದೊಡ್ಡ ತಲೆನೋವಾಗಿ ಮನೆಯ ಲೀಸ್ ಹಣವನ್ನ ತಾವೇ ಕೊಡುವ ಭರವಸೆ ನೀಡುವ ಮೂಲಕ ಕುಟುಂಬಕ್ಕೆ ಆಸರೆಯಾದರು. ಪತಿ ರವಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ಜೊತೆ ಚರ್ಚಿಸಿ ಸೂಕ್ತ ಪರಿಹಾರ ಕೊಡಿಸುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಸಾಧ್ಯವಿದ್ರೆ ಕಾಂಗ್ರೆಸ್ ಬಿಟ್ಟು ಗೆದ್ದು ತೋರ್ಸಿ ನೋಡೋಣ! ಸಿದ್ದರಾಮಯ್ಯಗೆ ಕುಮಾರಸ್ವಾಮಿ ಓಪನ್ ಚಾಲೆಂಜ್
ಇನ್ನು ಈ ವೇಳೆ ಹೆಚ್ಡಿಗೆ ಶಾಸಕ ಹರೀಶ್ ಗೌಡ, ಎಂಎಲ್ಸಿ ಮಂಜೇಗೌಡ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಪ್ರಮುಖ ನಾಯಕ ಸಾಥ್. ಒಟ್ಟಿನಲ್ಲಿ, ರಾಜಕೀಯ ಜಂಜಾಟಗಳ ನಡುವೆಯೂ ಕೇಂದ್ರ ಸಚಿವರು ತೋರಿದ ಈ ಮಾನವೀಯತೆ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿಧಿಯ ಆಟಕ್ಕೆ ಸೋತಿದ್ದ ಪೂಜಾ ಕುಟುಂಬಕ್ಕೆ ಕುಮಾರಸ್ವಾಮಿ ನೀಡಿದ ಭರವಸೆ ಹೊಸ ಜೀವನದ ಕಿರಣ ಮೂಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.