Hoskote Highway Tragedy: 7 Dead in XUV 700 and Bike Collision ಹೊಸಕೋಟೆ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಆರು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಏಳು ಮಂದಿ ದುರ್ಮರಣಕ್ಕೀಡಾಗಿದ್ದಾರೆ.

ಹೊಸಕೋಟೆ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯ ಎಂ. ಸತ್ಯವರ ಗ್ರಾಮದ ಬಳಿ ಶುಕ್ರವಾರ ನಸುಕಿನ ಜಾವ 4:50ಕ್ಕೆ ಬೈಕ್, ಎಕ್ಸ್‌ಯುವಿ 700 ಕಾರು ಹಾಗೂ ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಈ ಭೀಕರ ದುರಂತದಲ್ಲಿ ಎಕ್ಸ್‌ಯುವಿ ಕಾರಿನಲ್ಲಿದ್ದ ಆರು ಮಂದಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಒಬ್ಬ ಬೈಕ್ ಸವಾರ ಸೇರಿದಂತೆ ಒಟ್ಟು 7 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅತಿವೇಗವಾಗಿ ಧಾವಿಸುತ್ತಿದ್ದ ಎಕ್ಸ್‌ಯುವಿ ಕಾರು (KA 03 NW 0138) ಮೊದಲು ಮುಂದೆ ಚಲಿಸುತ್ತಿದ್ದ ಬೈಕ್‌ಗೆ ಗುದ್ದಿ, ನಂತರ ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಕ್ಯಾಂಟರ್‌ಗೆ ಮುಖಾಮುಖಿ ಡಿಕ್ಕಿಯಾಗಿದೆ.

ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ, ಕಾರಿನಲ್ಲಿದ್ದ ಎಲ್ಲಾ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದವು. ಆದರೆ ಅತಿವೇಗ ಮತ್ತು ಡಿಕ್ಕಿಯ ರಭಸಕ್ಕೆ ಏರ್‌ಬ್ಯಾಗ್‌ಗಳೂ ಸ್ಫೋಟಗೊಂಡು ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ 26 ವರ್ಷದ ಗಗನ್ ಅಪಘಾತಕ್ಕೆ ಬಲಿಯಾಗಿದ್ದಾರೆ. ದೃಷ್ಟಿಹೀನ ತಾಯಿಗೆ ಈತನೇ ಏಕೈಕ ಆಧಾರಸ್ತಂಭವಾಗಿದ್ದ. ಈತ ಸಫಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಕಾರಿನಲ್ಲಿದ್ದ ಮೃತರ ಪೈಕಿ ಅಶ್ವಿನ್ ನಾಯರ್ (17) ಯಲಹಂಕದ ಆರ್.ವಿ. ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಉಳಿದ ಐವರು ಕೂಡ ಇದೇ ಕಾಲೇಜಿನ ವಿದ್ಯಾರ್ಥಿಗಳೆಂದು ಶಂಕಿಸಲಾಗಿದೆ. ಉಳಿದ ವಿದ್ಯಾರ್ಥಿಗಳನ್ನು ಅರ್ಹನ್, ಅಯನ್ ಆಲಿ ಹಾಗೂ ಭರತ್ ಎಂದು ಗುರುತಿಸಲಾಗಿದ್ದು, ಇನ್ನುಳಿದ ಇಬ್ಬರ ಗುರುತು ಸಿಗಬೇಕಿದೆ.

ಮೃತ ಅಶ್ವಿನ್ ನಾಯರ್ ಮನೆಯವರಿಗೆ ತಿಳಿಸದೆಯೇ ಸ್ನೇಹಿತರೊಂದಿಗೆ ಕಾರಿನಲ್ಲಿ ಹೊರಹೋಗಿದ್ದ. ಮಗ ಮನೆಯಲ್ಲೇ ಮಲಗಿದ್ದಾನೆ ಎಂದು ಭಾವಿಸಿದ್ದ ತಾಯಿಗೆ ಪೊಲೀಸರ ಕರೆ ಬಂದಾಗ ಘೋರ ಸತ್ಯ ಬಯಲಾಗಿದೆ.

ಎಕ್ಸ್‌ಯುವಿ ಡಿಕ್ಕಿಗೆ ಕ್ಯಾಂಟರ್ ಪಲ್ಟಿಯಾಗಿದ್ದು, ಅದರ ಚಕ್ರಕ್ಕೆ ರಸ್ತೆಯಲ್ಲಿ ಬರುತ್ತಿದ್ದ ಮತ್ತೊಂದು ಬ್ರಿಜಾ ಕಾರು ಡಿಕ್ಕಿಯಾಗಿದೆ. ಇಡೀ ಹೆದ್ದಾರಿ ರಣರಂಗದಂತಾಗಿತ್ತು. ಕ್ಯಾಂಟರ್‌ನ ಹಿಂದಿನ ಎರಡು ಚಕ್ರಗಳು ಕ್ಯಾಂಟರ್‌ನಿಂದ ಸಪರೇಟ್ ಆಗಿದ್ದವು.

ಘಟನಾ ಸ್ಥಳಕ್ಕೆ ಮತ್ತು ಹೊಸಕೋಟೆ ಶವಾಗಾರಕ್ಕೆ ಕೇಂದ್ರ ವಲಯ ಐಜಿಪಿ ಲಾಬುರಾಮ್ ಹಾಗೂ ಎಸ್ ಪಿ ಚಂದ್ರಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹಗಳನ್ನು ಇರಿಸಲಾಗಿದ್ದು, ನಸುಕಿನ ಜಾವವೇ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Source link
ನಸುಕಿನ ನಿದ್ದೆಯಲ್ಲಿದ್ದ ಅಮ್ಮಂದಿರಿಗೆ ಸಿಕ್ಕಿತು ಮಕ್ಕಳ ಸಾವಿನ ನ್ಯೂಸ್: ಹೊಸಕೋಟೆ ಆಕ್ಸಿಡೆಂಟ್‌ನ ಭೀಕರತೆ ತಿಳಿಸುವ 10 ಚಿತ್ರಗಳು!