ಹುಬ್ಬಳ್ಳಿ ಉಪ ಕಾರಾಗೃಹದಲ್ಲಿ ಕೈದಿಗಳ ಬಿಂದಾಸ್ ಲೈಫ್ಚಿತ್ರದ ಕ್ರೆಡಿಟ್ ಮೂಲ: tv9
ಹುಬ್ಬಳ್ಳಿ, ಫೆಬ್ರವರಿ 21: ಧಾರವಾಡ (ಧಾರವಾಡ) ಜಿಲ್ಲೆಯ ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿರುವ ಆರೋಪ ಕೇಳಿಬಂದಿದ್ದು, ಜೈಲಿನೊಳಗಿನ ಅಕ್ರಮ ಸೌಲಭ್ಯಗಳ ವಿಡಿಯೋ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಣ ಕೊಟ್ಟರೆ ಸಬ್ ಜೈಲಿನಲ್ಲಿ ಎಲ್ಲಾ ಸೌಲಭ್ಯಗಳು ಸಿಗುತ್ತವೆ ಎಂಬ ಆರೋಪಗಳು ಕೇಳಿಬಂದಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ವಿಚಾರಣಾಧೀನ ಕೈದಿಗಳು ಮೊಬೈಲ್ ಫೋನ್ ಬಳಸುತ್ತಿರುವುದು, ಸೆಲ್ಫಿ ತೆಗೆದುಕೊಳ್ಳುತ್ತಿರುವುದು, ಗಾಂಜಾ ಹಾಗೂ ಮದ್ಯ ಸೇವನೆ ಮಾಡುತ್ತಿರುವುದು ಕಾಣಿಸುತ್ತಿದೆ. ಜೈಲಿನಲ್ಲೇ ಬಿಂದಾಸ್ ಜೀವನ ನಡೆಸುತ್ತಿರುವಂತೆ ಈ ದೃಶ್ಯಗಳು ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಜೈಲಿನೊಳಗೆ ಯಾವುದೇ ಅಂಜಿಕೆ ಇಲ್ಲದೇ ಕೈದಿಗಳು ವರ್ತಿಸುತ್ತಿರುವುದು ಆಡಳಿತದ ಮೇಲಿನ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಈ ಉಪ ಕಾರಾಗೃಹದಲ್ಲಿ ಕಳೆದ ವರ್ಷ ನವೆಂಬರ್ 13ರಂದು ನಡೆದಿದ್ದ ಮಲ್ಲಿಕ್ ಕೊಲೆ ಪ್ರಕರಣದ ಆರೋಪಿಗಳು ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಶಾಮೀಲಾದ ಆರೋಪಿಗಳು ಇದ್ದಾರೆ. ಬೆಂಡಿಗೇರಿ ಪೊಲೀಸರು ಈ ಪ್ರಕರಣ ಸಂಬಂಧ 17 ಜನರನ್ನು ಬಂಧಿಸಿದ್ದರು. ವೈರಲ್‌ನಲ್ಲಿ ಅಭಿಷೇಕ್ ಜಾಧವ್ ವಿಡಿಯೋ, ಗಣೇಶ್ ಜಾಧವ್ ಸೇರಿದಂತೆ ಕೆಲ ಆರೋಪಿಗಳು ಕಾಣಿಸಿಕೊಂಡಿದ್ದಾರೆ.
ವಿಡಿಯೋ ಇಲ್ಲಿ ನೋಡಿ
ಗಮನಾರ್ಹವೆಂದರೆ, ಮೂರು ದಿನಗಳ ಹಿಂದಷ್ಟೇ ರಾಜ್ಯದ ಡಿಜಿಪಿ ಅಲೋಕ್ ಕುಮಾರ್ ಹುಬ್ಬಳ್ಳಿಯ ವಿಶ್ವೇಶ್ವರಯ್ಯ ನಗರದಲ್ಲಿರುವ ಉಪ ಕಾರಾಗೃಹಕ್ಕೆ ಭೇಟಿ ನೀಡಿದ್ದರು. ಜೈಲಿನ ಕಾರ್ಯವೈಖರಿ, ಭದ್ರತಾ ವ್ಯವಸ್ಥೆ, ಸಬ್ ಜೈಲ್ ಕಟ್ಟಡ, ಗಾರ್ಡನ್ ಹಾಗೂ ಕೈದಿಗಳಿಗೆ ಒದಗಿಸಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದ್ದರು. ಕೈದಿಗಳ ಜೊತೆಯೂ ಮಾತುಕತೆ ನಡೆಸಿದ್ದರು. ಆದರೆ ಅವರ ಭೇಟಿಯ ಮೂರೇ ದಿನಗಳಲ್ಲಿ ಜೈಲಿನೊಳಗಿನ ಅಕ್ರಮ ಚಟುವಟಿಕೆಗಳ ವಿಡಿಯೋ ವೈರಲ್ ಆಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: ಕಲ್ಲು, ಚಪ್ಪಲಿ ತೂರಾಟದ ಬಳಿಕ ಬಾಗಲಕೋಟೆ ಬೂದಿ ಮುಚ್ಚಿದ ಕೆಂಡ: ಶಾಂತಿ ಸಭೆ ವಿಫಲ, ಎಲ್ಲಾ ಆರೋಪಿಗಳ ಬಂಧನಕ್ಕೆ ಡೆಡ್ ಲೈನ್
ಜೈಲಿನೊಳಗೆ ಗಾಂಜಾ, ಮದ್ಯ, ಮೊಬೈಲ್‌ಗಳ ಪೂರೈಕೆ ಹೇಗೆ ನಡೆಯುತ್ತಿದೆ? ಇದಕ್ಕೆ ಒಳಗಿನಿಂದ ಸಹಕಾರವಿದೆಯೇ? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಸಂಬಂಧಿತ ಅಧಿಕಾರಿಗಳ ಘಟನೆ ಕುರಿತು ತನಿಖೆ ಆರಂಭಿಸಿದ್ದು, ವಿಡಿಯೋ ನೈಜತೆಯ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದರು.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ