
ತುಮಕೂರು, (ಏಪ್ರಿಲ್ 07): ವಿಚ್ಛೇದನ (ವಿಚ್ಛೇದನ) ಬಯಸಿದ ಪತ್ನಿಗೆ (ಹೆಂಡತಿ) ಪತಿ (ಗಂಡ) ಮಚ್ಚಿನೇಟು ಕೊಟ್ಟು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು (ತುಮಕೂರು) ಜಿಲ್ಲೆ ಕೊರಟಗೆರೆ ತಾಲೂಕಿನ ಕೋಟೆಯಲ್ಲಿ ನಡೆದಿದೆ. ದಂಪತಿಗಳ ನಡುವೆ ನಿನ್ನೆ (ಏಪ್ರಿಲ್ 06) ಗಲಾಟೆ, ತಡವಾಗಿ ಬೆಳಕಿಗೆ ಬಂದಿದೆ. ಪತಿಯ ಮಚ್ಚಿನೇಟಿನಿಂದ ಬಳಲುತ್ತಿರುವ ಪತ್ನಿ ನಾಗಮಣಿ ಸಾವು ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದು, ಮತ್ತೊಂದೆಡೆ ಪತಿ ಮಾರುತಿ, ಇಂದು (ಏಪ್ರಿಲ್ 07) ಬೆಳಗ್ಗೆ ಕೊರಟಗೆರೆ ತಾಲೂಕಿನ ದೊಡ್ಡನಹಳ್ಳಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರಿನ ಸರ್ಕಾರಿ ಆಸ್ಪತ್ರೆಯ ನರ್ಸ್ ಆಗಿರುವ ನಾಗಮಣಿ ಹಾಗೂ ಮಾರುತಿ ಕಳೆದ 15 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಮಾರುತಿ ವೃತ್ತಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರೆ, ನಾಗಮಣಿಗೆ ಮದುವೆ ನಂತರ ಸರ್ಕಾರಿ ನರ್ಸ್ ಕೆಲಸ ಸಿಕ್ಕಿತ್ತು. ಆದರೆ, ಯಾವಾಗ ನಾಗಮಣಿಗೆ ಸರ್ಕಾರಿ ನರ್ಸ್ ಕೆಲಸ ಒಲಿದುಬಂತೋ ಅಂದಿನಿಂದ ಆಕೆಯ ಜೀವನ ಶೈಲಿಯೇ ಬದಲಾಗಿದ್ದು, ಗಾರೆ ಕೆಲಸ ಮಾಡಿಕೊಂಡಿದ್ದ ಪತಿ ಮಾರುತಿಯಿಂದ ನಾಗಮಣಿ ವಿವಾಹ ವಿಚ್ಛೇದನ ಪಡೆದುಕೊಳ್ಳಲು ಚಿಂತನೆ ನಡೆಸಿದ್ದಳು.
ಇದನ್ನೂ ಓದಿ: ಮದುವೆ ನಿಶ್ಚಯವಾಗಿದ್ದ ಯುವಕನ ಬರ್ಬರವಾಗಿ ಕೊಂದ ಸಹೋದರ; ಅತ್ತಿಗೆ ಜೊತೆಗೆ ಅಕ್ರಮ ಸಂಬಂಧ ಆರೋಪಕ್ಕೆ ಹರಿದಿದ್ದು ನೆತ್ತರು
ಇನ್ನೊಂದೆಡೆ ನಾಗಮಣಿಗೆ ಮತ್ತೊಬ್ಬನ ಜೊತೆ ಸಂಬಂಧ ಇರುವ ಬಗ್ಗೆ ಮಾರುತಿಗೆ ಅನುಮಾನ ಬಂದಿದ್ದು, ಇದೇ ವಿಚಾರವಾಗಿ ಗಲಾಟೆ ಮಾಡಿದೆ. ಈ ಗಂಡ ಹೆಂಡತಿ ಜಗಳ ಮೈಸೂರಿನ ಸ್ಥಳೀಯ ಠಾಣೆ ಮೆಟ್ಟಿಲೇರಿತ್ತು. ಇದಾದ ಬಳಿಕ ಮೊನ್ನೆ ಗಂಡನ ಜೊತೆ ಕೋಟೆಯಲ್ಲಿ ವಾಸವಾಗಿದ್ದ ಮಕ್ಕಳ ನೋಡಲು ನಾಗಮಣಿ ಬಂದಿದ್ದಳು. ಈ ವೇಳೆ ದಂಪತಿಗಳ ನಡುವೆ ಮತ್ತೆ ಗಲಾಟೆ, ಈ ಸಂದರ್ಭದಲ್ಲಿ ಮಾರುತಿ, ಮಚ್ಚಿನಿಂದ ನಾಗಮಣಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಬಳಿಕ ಸ್ಥಳೀಯರು ಗಾಯಾಳು ನಾಗಮಣಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ನಾಗಮಣಿ ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.
ಇನ್ನೊಂದೆಡೆ ಪತಿ ಮಾರುತಿ ಇಂದು (ಏಪ್ರಿಲ್ 07) ಕೊರಟಗೆರೆ ತಾಲೂಕಿನ ದೊಡ್ಡನಹಳ್ಳಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.