ಬೆಂಗಳೂರು/ಚಿತ್ರದುರ್ಗ, (ಜನವರಿ 29): ಅಕ್ರಮ ಬೆಟ್ಟಿಂಗ್ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ (ಅಕ್ರಮ ಬೆಟ್ಟಿಂಗ್ ಪ್ರಕರಣ) ಪ್ರಮುಖ ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ. ವಿರೇಂದ್ರ ಪಪ್ಪಿಗೆ (ಕೆ.ಸಿ. ವೀರೇಂದ್ರ ಪಪ್ಪಿ)ಸೇರಿದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ. ಈ ಹಿಂದೆ ದಾಳಿ ವೇಳೆ ಕೋಟ್ಯಾಂತರ ರೂಪಾಯಿ ನಗದು ಹಣ ಹಾಗೂ ಚಿನ್ನ, ಬೆಳ್ಳಿ ಸಿಕ್ಕಿತ್ತು. ಇದೀಗ ವೀರೇಂದ್ರ ಪಪ್ಪಿಗೆ ಸೇರಿದ ಕೃಷಿ ಜಮೀನು, ನಿವೇಶನ ಸೇರಿ ಒಟ್ಟು 177.3 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದೆ. ಈ ಮೂಲಜ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ಖುಷಿಯಲ್ಲಿದ್ದ ವೀರೇಂದ್ರ ಪಪ್ಪಿಗೆ ಇಡಿ ಮತ್ತೊಂದು ಶಾಕ್ ಕೊಟ್ಟಿದೆ.
ಆನ್ಲೈನ್ ಬೆಟ್ಟಿಂಗ್ ಹಗರಣ ಸಂಬಂಧ ಇಡಿ ಅಧಿಕಾರಿಗಳು ವೀರೇಂದ್ರ ಪಪ್ಪಿ ಮನೆಗಳ ಮೇಲೆ ದಾಳಿ ನಡೆಸಿದ್ದರು. ಆಗ ವೀರೇಂದ್ರ ಪಪ್ಪಿ ಅವರನ್ನು ಬಂಧಿಸಿ ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿತ್ತು. ಇದೀಗ ಮತ್ತೆ ಸಿ ಅಕ್ರಮ ಹಣದಿಂದ ಸಂಪಾದನೆ ಮಾಡಿದ ಕೃಷಿ ಜಮೀನು, ನಿವೇಶನ ಸೇರಿ 177.3 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.
ಇದನ್ನೂ ಓದಿ: ಚಿತ್ರದುರ್ಗ ಕೈ ಶಾಸಕ ವಿರೇಂದ್ರ ಪಪ್ಪಿ ಖಜಾನೆಯನ್ನೇ ತೆರೆದಿಟ್ಟ ಇಡಿ: ಲಕ್ಷುರಿ ಕಾರು, ಚಿನ್ನಾಭರಣ ಪತ್ತೆ
ದೇಶದ ವಿವಿಧ ರಾಜ್ಯಗಳಲ್ಲಿ ದಾಖಲಾಗಿದ್ದ ಆನ್ಲೈನ್ ಬೆಟ್ಟಿಂಗ್ ಪ್ರಕರಣ ಇಡಿ ಅಧಿಕಾರಿಗಳು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ತನಿಖೆ ವೇಳೆ ಹಗರಣದಲ್ಲಿ ಕೆ.ಸಿ.ವೀರೇಂದ್ರ ಮತ್ತು ಸಹಚರರು ಮಾಸ್ಟರ್ ಮೈಂಡ್ ಪತ್ತೆಯಾಗಿದೆ. ನೂರಾರು ಮ್ಯೂಲ್ ಅಕೌಂಟ್ ಬಳಸಿ ಅಕ್ರಮ ಹಣ ವರ್ಗಾವಣೆ ಇದೆ. ತನಿಖೆ ವೇಳೆ ಸಿಕ್ಕ ಈ ಎಲ್ಲಾ ಸಾಕ್ಷ್ಯಗಳ ಆಧಾರದ ಮೇಲೆ ಕೆ ಸಿ ವೀರೇಂದ್ರ ಆಸ್ತಿ ಜಪ್ತಿ ಮಾಡಲಾಗಿದೆ.
ಈ ಹಿಂದೆ ಪ್ರಕರಣ ಸಂಬಂಧ 60ಕ್ಕೂ ಹೆಚ್ಚು ಸ್ಥಳದಲ್ಲಿ ದಾಳಿ ನಡೆಸಿದ್ದ ಇಡಿ, ಚಿನ್ನ, ನಗದು,ಬೆಳ್ಳಿ, ವಾಹನಗಳನ್ನು ವಶಪಡಿಸಿಕೊಂಡಿತ್ತು. ಒಟ್ಟಾರೆ ಪ್ರಕರಣದಲ್ಲಿ ಇಲ್ಲಿಯವರೆಗೆ 320 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಈ ಹಗರಣದಲ್ಲಿ 2,300 ಕೋಟಿ ರೂಪಾಯಿ ಅಧಿಕ ಅಕ್ರಮ ನಡೆದಿದ್ದು, ಈ ಸಂಬಂಧ ತನಿಖೆ ಮುಂದುವರಿದಿದೆ.
ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು