ಕೇರಳದ ಲಾಟರಿ ಟಿಕೆಟ್
ಚಾಮರಾಜನಗರ, ಜನವರಿ 02: ರಾತ್ರಿ ಬೆಳಗಾಗುವುದರೊಳಗೆ ಶ್ರೀಮಂತರಾಗೋ ಹುಚ್ಚು ಕನಸು ಇಟ್ಟುಕೊಂಡು ಲಾಟರಿ ಖರೀದಿಸಿ ಬೀದಿಗೆ ಬಂದ ಅದೆಷ್ಟೋ ಕುಟುಂಬಗಳು. ದಿನಗೂಲಿ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ಕಾರ್ಮಿಕರು ಇದರಿಂದ ಸಂಕಷ್ಟಕ್ಕೆ ಸಿಲುಕುತ್ತಿರುವುದನ್ನು ಮನಗಂಡು ಕರ್ನಾಟಕದಲ್ಲಿ ಲಾಟರಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಿದ್ದರೂ ಅವುಗಳ ಹಾವಳಿ ಮಾತ್ರ ನಿಂತಿಲ್ಲ. ಕದ್ದು ಮುಚ್ಚಿ ನಡೆಯುವ ವ್ಯವಹಾರಗಳು ಒಂದೆಡೆಯಾದರೆ ನೆರೆ ರಾಜ್ಯದ ಲಾಟರಿಗಳು ಕೂಡ ಗಡಿ ಜಿಲ್ಲೆಗಳಲ್ಲಿ ಜೋರಾಗಿಯೇ ವ್ಯವಹಾರ ನಡೆಸುತ್ತಿವೆ.
ಹೌದು, ಚಾಮರಾಜನಗರದ ಹಲವು ಪ್ರದೇಶಗಳಲ್ಲಿ ನೆರೆ ರಾಜ್ಯ ಕೇರಳದಿಂದ ತರಲಾಗುವ ಅಕ್ರಮ ಲಾಟರಿ ಟಿಕೆಟ್‌ಗಳ ಮಾರಾಟವು ಎಗ್ಗಿಲ್ಲದೆ ನಡೆಯುತ್ತಿದೆ. ಗುಂಡ್ಲುಪೇಟೆ, ಚಾಮರಾಜನಗರ ಮತ್ತು ಕೊಳ್ಳೇಗಾಲ ಸಮೀಪದ ಗ್ರಾಮಗಳಲ್ಲಿ ಇವುಗಳ ಬಹಿರಂಗ ಮಾರಾಟದ ಬಗ್ಗೆ ವರದಿಯಾಗಿದೆ. ಆರ್ಥಿಕ ಶೋಷಣೆಯಿಂದ ದುರ್ಬಲ ವರ್ಗಗಳನ್ನು ರಕ್ಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಲಾಟರಿಯನ್ನು ನಿಷೇಧಿಸಿದ್ದರೂ ಕಠಿಣ ಕಾನೂನು ಜಾರಿಯಲ್ಲಿನ ಕೊರತೆಯಿಂದ ಈ ವ್ಯಾಪಾರ ಗುಪ್ತವಾಗಿ ಮುಂದುವರಿದಿದೆ. ಏಜೆಂಟ್‌ಗಳು ಹಾಗೂ ಮಧ್ಯವರ್ತಿಗಳಿಗೆ ಲಾಭ ಮಾಡಿಕೊಡುತ್ತಿದೆ.
ಇದನ್ನೂ ಓದಿ: ಒಂದು ಕೋಟಿ ಲಾಟರಿ ಗೆದ್ದವನನ್ನ ಡೋಲು ಬಾರಿಸಿ ಹುಡುಕುತ್ತಿದೆ
ಕೇರಳ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುವ ಆರೋಪದ ಮೇಲೆ ಇತ್ತೀಚೆಗಷ್ಟೇ ಗುಂಡ್ಲುಪೇಟೆ ತಾಲೂಕಿನ ತೆರಕನಂಬಿ ಗ್ರಾಮದಲ್ಲಿ 48 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ತೆರಕನಂಬಿ ಗ್ರಾಮದ ನಿವಾಸಿಗಳ ಪ್ರಕಾರ, ಲಾಟರಿ ನಿಷೇಧದ ನಡುವೆಯೂ ಬೇಡಿಕೆ ಇರುವ ಕಾರಣ ವ್ಯವಹಾರ ಎಗ್ಗಿಲ್ಲದೆ ನಡೆಯುತ್ತಿದೆ. ಸಾಮಾನ್ಯವಾಗಿ ರೂ.50 ರಿಂದ ರೂ.250ರವರೆಗೆ ಲಾಟರಿ ಟಿಕೆಟ್ ಮಾರಾಟ ಮಾಡಲಾಗುತ್ತಿದ್ದರೆ, ಬಹುಮಾನ ಮೊತ್ತವು ರೂ.50 ಲಕ್ಷದವರೆಗೆ ಇರುತ್ತದೆ. ದಿನಗೂಲಿ ಕಾರ್ಮಿಕರು, ವಿಶೇಷವಾಗಿ ತೆಂಗಿನಕಾಯಿ ವ್ಯಾಪಾರ ಮತ್ತು ಇತರ ಅನೌಪಚಾರಿಕ ಉದ್ಯೋಗಗಳಲ್ಲಿ ತೊಡಗಿರುವವರೇ ಇವುಗಳ ಮೇಲೆ ಹಣ ಸುರಿಯುತ್ತಿದ್ದಾರೆ.
ಕರ್ನಾಟಕ ಪೊಲೀಸರ ಅಂಕಿಅಂಶಗಳ ಪ್ರಕಾರ, 2023ರಲ್ಲಿ ಕರ್ನಾಟಕ ಲಾಟರಿ ನಿಷೇಧ ಕಾಯ್ದೆಯಡಿ 78 ಪ್ರಕರಣಗಳು ದಾಖಲಾಗಿದ್ದು, 2024ರಲ್ಲಿ 54ಕ್ಕೆ ಇಳಿಕೆಯಾಗಿದೆ. ಆದರೆ ಕಳೆದ ವರ್ಷ 2025ರ ನವೆಂಬರ್ ವರೆಗೆ ರಾಜ್ಯದಲ್ಲಿ 64 ಪ್ರಕರಣಗಳು ದಾಖಲಾಗಿವೆ. ಬಂಧಿತರ ವಿರುದ್ಧ ಕರ್ನಾಟಕ ಲಾಟರಿ ಮತ್ತು ಬಹುಮಾನ ಸ್ಪರ್ಧೆಗಳ ನಿಯಂತ್ರಣ ಹಾಗೂ ತೆರಿಗೆ ಕಾಯ್ದೆಯ ಸೆಕ್ಷನ್‌ಗಳು 4(1), 5 ಮತ್ತು 7ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.