
ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಸ್ತಿತ್ವಕ್ಕೇ ಧಕ್ಕೆ ತರಬಹುದು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಪಿಸಿಬಿಗೆ ಸುಮಾರು 200 ಕೋಟಿ ರೂಪಾಯಿ ನಷ್ಟವಾಗಲಿದೆ. ಶ್ರೀಲಂಕಾದಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಡಲು ಪಾಕಿಸ್ತಾನವು ಐಸಿಸಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಒಂದು ವೇಳೆ ಭಾರತದೊಂದಿಗಿನ ಪಂದ್ಯವನ್ನು ಬಹಿಷ್ಕರಿಸಿದರೆ, ಪಾಕಿಸ್ತಾನಕ್ಕೆ ನೀಡುವ ಆದಾಯದ ಪಾಲಿನಲ್ಲಿ 5.75% (ಸುಮಾರು 34.51 ಮಿಲಿಯನ್ ಡಾಲರ್) ಅನ್ನು ಐಸಿಸಿ ತಡೆಹಿಡಿಯಬಹುದು. ಸ್ವಂತ ಇಚ್ಛೆಯಿಂದ ಪಂದ್ಯವನ್ನು ತ್ಯಜಿಸುವುದರಿಂದ ಪಾಕಿಸ್ತಾನಕ್ಕೆ ಯಾವುದೇ ವಿಮೆ ಅಥವಾ ಕಾನೂನು ರಕ್ಷಣೆ ಸಿಗುವುದಿಲ್ಲ.
ಪಾಕಿಸ್ತಾನಕ್ಕೆ ಕಾದಿದೆ ಗಂಡಾಂತರ
ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಪಾಕಿಸ್ತಾನವು ಐಸಿಸಿಯಿಂದ ಕೋಟ್ಯಂತರ ರೂಪಾಯಿ ದಂಡ ಮತ್ತು ನಿಷೇಧದಂತಹ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಭವಿಷ್ಯದಲ್ಲಿ ಪಾಕಿಸ್ತಾನದ ಪಂದ್ಯಗಳನ್ನು ಪ್ರಸಾರ ಮಾಡಲು ಬ್ರಾಡ್‌ಕಾಸ್ಟರ್‌ಗಳು ಹಿಂದೇಟು ಹಾಕುತ್ತಾರೆ. ಇದು ಪಾಕ್ ಕ್ರಿಕೆಟ್‌ನ ಆದಾಯದ ಮೇಲೆ ವರ್ಷಗಳ ಕಾಲ ಪರಿಣಾಮ ಬೀರಲಿದೆ.
ಭಾರತದೊಂದಿಗಿನ ಪಂದ್ಯವನ್ನು ಕೈಬಿಡುವುದು, ಪಾಕಿಸ್ತಾನ ಕ್ರಿಕೆಟ್ ತನ್ನ ಕಾಲಿಗೆ ತಾನೇ ಕೊಡಲಿಯಿಂದ ಹೊಡೆದುಕೊಂಡಂತೆ. ವಿಶ್ವಕಪ್ ಪಾಯಿಂಟ್ಸ್ ಟೇಬಲ್‌ಗಿಂತಲೂ ಹೆಚ್ಚಾಗಿ, ಈ ಆರ್ಥಿಕ ಹೊಡೆತವು ಪಾಕಿಸ್ತಾನವನ್ನು ಇನ್ನಷ್ಟು ಕಾಡಲಿದೆ.