ಬೆಂಗಳೂರು, ಡಿಸೆಂಬರ್ 6: ಇಂಡಿಗೋ (ಇಂಡಿಗೋ) ವಿಮಾನ ಹಾರಾಟ ರದ್ದಾಗಿರುವ ಪರಿಣಾಮವಾಗಿ ಖಾಸಗಿ ಬಸ್ ಟಿಕೆಟ್ ದರ ಭಾರೀ ಏರಿಕೆಯಾಗಿದೆ. ಖಾಸಗಿ ಬಸ್ಸುಗಳು ಜನರಿಂದ ಅತ್ಯಂತ ದುಬಾರಿ ಮೊತ್ತ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಪ್ರಯಾಣಿಕರ ತುರ್ತು ಬೇಡಿಕೆಯ ಅನಿವಾರ್ಯತೆಯನ್ನು ಗಮನಿಸಿದ ಖಾಸಗಿ ಬಸ್ ಟಿಕೆಟ್ ದರವನ್ನು ದುಪ್ಪಟ್ಟು–ಮೂರುಪಟ್ಟು ಹೆಚ್ಚಿಸಿ ವಸೂಲಿ ಮಾಡುತ್ತಿರುವುದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಬೆಂಗಳೂರು – ಮುಂಬೈ ಬಸ್ ಟಿಕೆಟ್ ದರ ಎಷ್ಟು?
ಬೆಂಗಳೂರಿನಿಂದ ಮುಂಬೈ ಮಾರ್ಗದಲ್ಲಿ ಸಾಮಾನ್ಯವಾಗಿ ಎಸಿ ಸ್ಲೀಪರ್ ಬಸ್ಗಳ ಟಿಕೆಟ್ ದರ 1200 ರೂ.ನಿಂದ 1400 ರೂ. ವರೆಗೆ ಇತ್ತು. ಆದರೆ ಇಂಡಿಗೋ ಫ್ಲೈಟ್ ಕ್ಯಾನ್ಸಲ್ ಆಗಿದ್ದು ಅದೇ ಮಾರ್ಗದ ಬಸ್ಗಳಲ್ಲಿ ಈಗ ಆರಂಭದ ದರವೇ 3200 ರೂ, 3800 ರೂ, 4999 ರೂ, 6500 ರೂ. ಆಗಿದೆ. ಕೆಲ ಬಸ್ಗಳಲ್ಲಿ ಗರಿಷ್ಠ ದರ ₹10,000 ತಲುಪಿದೆ.
ಹಬ್ಬದ ದಿನಗಳಲ್ಲಿಯೂ ಸಹ ಹೆಚ್ಚು ಎಂದರೆ 4000 ರೂ. ಮಾತ್ರ ಟಿಕೆಟ್ ಮಾತ್ರ ದರ ವಸೂಲಿ ಮಾಡುವ ಖಾಸಗಿ ಬಸ್, ಈಗ ವಿಮಾನ ಬಿಕ್ಕಟ್ಟಿನ ಸನ್ನಿವೇಶವನ್ನು ಜನಪ್ರಿಯ ಮನಬಂದಂತೆ ದರ ಹೆಚ್ಚಿಸಿರುವುದು ಕಂಡುಬಂದಿದೆ. ಖಾಸಗಿ ಬಸ್ಸುಗಳು ‘ಹಗಲು ದರೋಡೆ ಮಾಡುತ್ತಿವೆ’ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಈ ಅನಿಯಂತ್ರಿತ ಬಸ್ ಟಿಕೆಟ್ ದರ ವಿಧಿಸುವ ವಿರುದ್ಧ ಅಧಿಕಾರಿಗಳ ಕ್ರಮ ಕೈಗೊಳ್ಳಲು ಆಗ್ರಹವಿದೆ.
ಇಂಡಿಗೋ ವಿಮಾನ ಬಿಕ್ಕಟ್ಟು ಐದನೇ ದಿನವಾದ ಶನಿವಾರ ಸಹ ಮುಂದುವರಿದಿದ್ದು, ಬೆಂಗಳೂರಷ್ಟೇ ಅಲ್ಲದೆ ಮುಂಬೈನಲ್ಲೂ ವಿಮಾನಗಳ ಸಂಚಾರ ರದ್ದಾಗಿದೆ. ಪ್ರಯಾಣಿಕರು ಪರದಾಡಿದ್ದಾರೆ. ಮುಂಬೈನಲ್ಲಿ 109 ಇಂಡಿಗೋ ವಿಮಾನಗಳು ಸಂಚಾರ ರದ್ದಾಗಿವೆ. ದೆಹಲಿಯಲ್ಲಿ 86, ಹೈದರಾಬಾದ್ನಲ್ಲಿ 69, ಬೆಂಗಳೂರಿನಲ್ಲಿ 50, ಪುಣೆಯಲ್ಲಿ 42 ಹಾಗೂ ಅಮಹದಾಬಾದ್ನಲ್ಲಿ 19 ವಿಮಾನಗಳು ಸ್ಥಗಿತಗೊಂಡಿವೆ.
ಇದನ್ನೂ ಓದಿ: ಇಂಡಿಗೋ ಮಾಲೀಕ ಯಾರು? ಅವರ ಬಳಿ ಎಷ್ಟಿದೆ ಆಸ್ತಿ? ದಿಢೀರ್ ಬಿಕ್ಕಟ್ಟಿಗೆ ಕಾರಣ ಏನು ಗೊತ್ತೇ? ಇಲ್ಲಿದೆ ಸಮಗ್ರ ಮಾಹಿತಿ
ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ಸುಗಳು ದರ ಏರಿಕೆ ಮಾಡಿವೆ. ಮತ್ತೊಂದೆಡೆ, ಪ್ರಯಾಣಿಕರ ಪರದಾಟವನ್ನೇ ಬಂಡವಾಳ ಮಾಡಿಕೊಂಡ ಇತರ ಏರ್ಲೈನ್ಸ್ ಕೂಡ ಟಿಕೆಟ್ ದರ ಹೆಚ್ಚಿಸಿವೆ. 20 ಸಾವಿರ ರೂಪಾಯಿಯಿಂದ 75 ಸಾವಿರ ರೂಪಾಯಿವರೆಗೆ ದರ ಏರಿಕೆಯಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ