
ಇಂಡಿಯನ್ ಪ್ರಿಮಿಯರ್ ಕಂಪನಿ 19 ನೇ ಸೀಸನ್ ಮಾರ್ಚ್ 28 ರಿಂದ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಹಾಲಿ ಚಾಂಪಿಯನ್ ಆರ್ಸಿಬಿ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ನಡುವೆ. ಈ ಪಂದ್ಯಕ್ಕೆ ಇನ್ನ 9 ದಿನಗಳು ಮಾತ್ರ ಉಳಿದಿವೆ. ಹೀಗಾಗಿ ಉಭಯ ತಂಡಗಳು ಮೈದಾನದಲ್ಲಿ ಬೆವರು ಹರಿಸುತ್ತಿವೆ. ಇತ್ತ ಆರ್ಸಿಬಿ ತಯಾರಿಯನ್ನು ಚುರುಕುಗೊಳಿಸಿದ್ದು, ತಂಡದ ಬ್ಯಾಟಿಂಗ್ ಜೀವಾಳ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ, ತಂಡವನ್ನು ಕೂಡಿಕೊಂಡ ಬಳಿಕ ಮೊದಲ ಬಾರಿಗೆ ನೆಟ್ಸ್‌ನಲ್ಲಿ ಬ್ಯಾಟ್ ಹಿಡಿದು ಅಬ್ಬರಿಸಿದ್ದಾರೆ.
ವಾಸ್ತವವಾಗಿ ಮೊನ್ನೆಯಷ್ಟೆ ಆರ್ಸಿಬಿ ತಂಡವನ್ನು ಸೇರಿಕೊಂಡಿರುವ ವಿರಾಟ್ ಕೊಹ್ಲಿ ಇಂದು ನಡೆದ ಅಭ್ಯಾಸದ ಶಿಬಿರದಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆದಿದ್ದಾರೆ. ಅಂತರರಾಷ್ಟ್ರೀಯ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಕೊಹ್ಲಿ ಈಗ ಏಕದಿನ ಸ್ವರೂಪದಲ್ಲಿ ಆಡುತ್ತಿದ್ದಾರೆ. ಅದರ ಪರಿಣಾಮವಾಗಿ ಕಳೆದ ಆವೃತ್ತಿಯಿಂದ ತಮ್ಮ ಬ್ಯಾಟಿಂಗ್‌ನಲ್ಲಿ ಬದಲಾವಣೆ ಮಾಡಿಕೊಂಡಿರುವ ಕೊಹ್ಲಿ ಸ್ಟ್ರೈಕ್ ರೇಟ್ ಹೆಚ್ಚು ಒತ್ತು ನೀಡುತ್ತಿದ್ದಾರೆ. ಹೀಗಾಗಿ ಕೊಹ್ಲಿ ಬ್ಯಾಟ್ ನಿಂದ ಬೌಂಡರಿ, ಸಿಕ್ಸರ್ ಗಳ ಮಳೆಯಾಗುತ್ತಿದೆ.