ಕಾನ್ಫಿಡೆಂಟ್ ಗ್ರೂಪ್ ರಿಯಲ್ ಎಸ್ಟೇಟ್ ಸಂಸ್ಥೆಯ ಮಾಲೀಕ ಜೆಸಿ ರಾಯ್ (ಜೆಸಿ ರಾಯ್) ಇಂದು (ಜನವರಿ 30) ನಿಧನರಾದರು. ರಾಯರು, ಪದೇ ಪದೇ ಆಗುತ್ತಿದ್ದ ಐಟಿ ದಾಳಿಗಳಿಂದ ಬೇಸತ್ತು ಅಧಿಕಾರಿಗಳ ಎದುರೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಜೆಸಿ ರಾಯ್ ಅವರಿಗೆ ಸಿನಿಮಾ ಮತ್ತು ಟಿವಿಯೊಂದಿಗೆ ಹತ್ತಿರದ ಬಂಧ ಇತ್ತು.
ರಾಯ್ ಅವರು ಉದ್ಯಮಿ ಮಾತ್ರವೇ ಅಲ್ಲದೆ ಸಿನಿಮಾ ನಿರ್ಮಾಪಕರೂ ಆಗಿದ್ದರು. ಮಲೆಯಾಳಂನಲ್ಲಿ ಮೋಹನ್ನಾಲ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಕ್ಯಾಸನೋವ’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಅವರೇ ಸಂದರ್ಶನದಲ್ಲಿ ಹೇಳಿಕೊಂಡಿರುವಂತೆ ರಾಯರು 12 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರಂತೆ.
ಇನ್ನು ಟಿವಿಯೊಂದಿಗೆ ಅವರದ್ದು ಹತ್ತಿರದ ಬಂಧ. ಹಲವಾರು ರಿಯಾಲಿಟಿ ಶೋಗಳಿಗೆ ಅವರು ಪ್ರಮುಖ ಸ್ಪಾನ್ಸರ್ ಆಗಿದ್ದರು. ಬಿಗ್ಬಾಸ್ ಕನ್ನಡ 11ನೇ ಸೀಸನ್‌ಗೆ ಮೊದಲ ಬಹುಮಾನವಾದ 50 ಲಕ್ಷ ರೂಪಾಯಿಗಳನ್ನು ರಾಯರು ನೀಡಿದ್ದರು. ಅದಕ್ಕೂ ಮುಂಚೆ ಕಾನ್ಫಿಡೆಂಟ್ ಸ್ಟಾರ್ ಸಿಂಗರ್ ಸಿಂಗಿಂಗ್ ರಿಯಾಲಿಟಿ ಶೋಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡಿದ್ದರು. ಮಲಯಾಳಂ ಬಿಗ್ಬಾಸ್ ಸಹ ಸ್ಪಾನ್ಸರ್ ಆಗಿದ್ದರು ರಾಯರು. ದಕ್ಷಿಣ ಭಾರತದ ಸಿನಿಮಾಗಳಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾದ ಸೈಮಾಕ್ಕೆ ಎಂಟು ವರ್ಷಗಳ ಕಾಲ ಮುಖ್ಯ ಸ್ಪಾನ್ಸರ್ ಆಗಿದ್ದು ರಾಯರ ಕಾನ್ಫಿಡೆಂಟ್ ಗ್ರೂಪ್.
ಇದನ್ನೂ ಓದಿ:ಸಾವಿರಾರು ಕೋಟಿ ಒಡೆಯ ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಜೀವನದಲ್ಲಿ ಕಾನ್ಫಿಡೆಂಟ್ ಕಳೆದುಕೊಂಡಿದ್ಯಾಕೆ?
ರಾಯರು ರಿಯಾಲಿಟಿ ಶೋಗಳಿಗಷ್ಟೆ ಸ್ಪಾನ್ಸರ್ ಆಗಿದ್ದಕ್ಕೂ ಕಾರಣವಿತ್ತು. ಅವರೇ ಹೇಳಿಕೊಂಡಿರುವಂತೆ, ‘ಧಾರಾವಾಹಿಗಳಿಗೆ ನಾನು ಪ್ರಾಯೋಜಕತ್ವ ನೀಡುತ್ತಿದ್ದೇನೆ, ಆದರೆ ನಮ್ಮದು ರಿಯಾಲಿಟಿ (ರಿಯಲ್ ಎಸ್ಟೇಟ್) ಕಂಪನಿ, ನನ್ನದು ರಿಯಲ್ ಕಂಪನಿಯಾಗಿಲ್ಲ ನಾನು ರಿಯಾಲಿಟಿ ಶೋಗಳಿಗೆ ಸ್ಪಾನ್ಸರ್ ಮಾಡುತ್ತಿದ್ದೇನೆ. ಅದರಲ್ಲಿ ನಿಜವಾದ ಪ್ರತಿಭೆ ಇದ್ದವರಿಗೆ ಸಹಾಯ ಮಾಡಿದ ತೃಪ್ತಿ ನನಗೆ ಸಿಗುತ್ತಿತ್ತು, ಪ್ರತಿಭಾವಂತರಿಗೆ ಬೆಂಬಲ ನೀಡುವುದು ನನ್ನ ಉದ್ದೇಶವಾಗಿತ್ತು’ ಎಂದಿದ್ದರು ರಾಯರು.
‘ಹಲವಾರು ರಿಯಾಲಿಟಿ ಶೋಗಳಿಗೆ ಸ್ಪಾನ್ಸರ್ ನೀಡಿದ್ದೇನೆ. ಆದರೆ ಒಮ್ಮೆ ಕೂಡ ಬಹುಮಾನದ ಮೊತ್ತ ನೀಡುವುದನ್ನು ನಾನು ತಡ ಮಾಡಿಲ್ಲ. ಹೇಳಿದ ಹಣ, ಹೇಳಿದ ದಿನದಂದು ನೀಡಿದ್ದೇನೆ. ಒಂದೇ ಒಂದು ಕಪ್ಪು ಚುಕ್ಕೆಯೂ ನನ್ನ ಮೇಲೆ ಇಲ್ಲ’ ಎಂದು ರಾಯರು ಹೇಳಿದ್ದಾರೆ. ಸಿನಿಮಾಗಳ ಬಗ್ಗೆ, ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದ ರಾಯರು ಅವರು ಮ್ಯಾಜಿಕ್ ಟ್ರಿಕ್ಸ್ ಸಹ ಮಾಡುತ್ತಿದ್ದರಂತೆ. ಕೆಲವು ಪ್ರದರ್ಶನಗಳನ್ನು ಸಹ ಬಹಳ ಮುಂಚೆ ನೀಡಿದ್ದರಂತೆ. ಆದರೆ ಮದುವೆಯ ಬಳಿಕ ಅದೆಲ್ಲವನ್ನೂ ಬಿಟ್ಟೆ ಎಂದಿದ್ದರು ರಾಯರು.
ರಾಯರು ಕನ್ನಡ ಹಾಗೂ ಮಲಯಾಳಂ ಚಿತ್ರರಂಗದ ಹಲವರೊಟ್ಟಿಗೆ ಆತ್ಮೀಯ ಬಂಧ ಹೊಂದಿದ್ದರು. ಕನ್ನಡದ ಸ್ಟಾರ್ ನಟ ದಿವಂಗತ ಪುನೀತ್ ರಾಜ್ ಕುಮಾರ್ ಅವರ ಒಳ್ಳೆಯ ಸ್ನೇಹಿತ. ಕಿಚ್ಚ ಸುದೀಪ್ ಅವರ ಆಪ್ತರೂ ಸಹ ಆಗಿದ್ದರು ರಾಯರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ