
ಪ್ಯಾನ್ ಇಂಡಿಯಾ ಸ್ಟಾರ್, ಟಾಲಿವುಡ್ ನ ಸೂಪರ್ ಸ್ಟಾರ್ ಜೂ ಎನ್ ಟಿಆರ್ (Jr NTR) ಅವರು ಇಂದು (ಮಾರ್ಚ್ 08) ಬೆಂಗಳೂರಿಗೆ ಆಗಮಿಸಿದ್ದರು. ನೆರೆ ರಾಜ್ಯದ ಸ್ಟಾರ್ ನಟ-ನಟಿಯರು ಸಿನಿಮಾ ಪ್ರಚಾರಕ್ಕಾಗಿ ಮಾತ್ರ ಬೆಂಗಳೂರನ್ನು, ಕರ್ನಾಟಕವನ್ನು ನೆನಪು ಮಾಡಿಕೊಳ್ಳುತ್ತಾರೆ. ಆದರೆ ಜೂ ಎನ್ ಟಿಆರ್ ಅವರ ಯಾವ ಸಿನಿಮಾ ಕೂಡ ಸದ್ಯಕ್ಕೆ ಬಿಡುಗಡೆಯಾಗುತ್ತಿಲ್ಲ ಆದರೂ ಇಂದು ಹಠಾತ್ತನೇ ಅವರು ಬೆಂಗಳೂರಿಗೆ ಬಂದಿದ್ದರು. ಆಯೋಜಿತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲದೆ, ಕನ್ನಡದಲ್ಲಿಯೇ ಇತ್ತು.
ಕಿಮ್ಸ್ ಆಸ್ಪತ್ರೆಯ ಹೊಸ ಘಟಕದ ಉದ್ಘಾಟನೆಗಾಗಿ ಜೂ ಎನ್ ಟಿಆರ್ ಅವರು ಇಂದು ಬೆಂಗಳೂರಿಗೆ ಬಂದಿದ್ದರು. ಕಿಮ್ಸ್ ಜೊತೆಗೆ ಜೂ ಎನ್ ಟಿಆರ್ ಅವರಿಗೆ ಬಲು ಆಪ್ತ ಬಂಧವಿದೆ. 1983ರಲ್ಲಿ ಜೂ ಎನ್ ಟಿಆರ್ ಅವರ ತಾತ ಎನ್ ಟಿಆರ್ ಅವರೇ ಕಿಮ್ಸ್ ಗೆ ಅಡಿಗಲ್ಲು ಹಾಕಿದ್ದರು. ಜೂ ಎನ್ ಟಿಆರ್, 2009 ಭಾರಿ ರಸ್ತೆ ಅಪಘಾತಕ್ಕೆ ಈಡಾಗಿದ್ದರೂ ಸಹ ಅವರು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆದಿದ್ದರು. ಇದೇ ಕಾರಣಕ್ಕೆ ಇಂದು ಕಿಮ್ಸ್ ನ ಹೊಸ ಘಟಕದ ಉದ್ಘಾಟನೆಗೆ ಅವರು ಆಗಮಿಸಿದ್ದರು.
ಈ ವೇಳೆ ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ನಟ ಜೂ ಎನ್ ಟಿಆರ್, ‘ನನಗೆ ಕರ್ನಾಟಕಕ್ಕೆ ಬರುವುದೆಂದರೆ ಅಪ್ಪನ ಮನೆಯಿಂದ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತದೆ. ನನ್ನ ತಾಯಿಯದ್ದು ಕುಂದಾಪುರ. ನನ್ನ ತಾಯಿ ಕನ್ನಡ ಭಾಷೆ. ಕರ್ನಾಟಕಕ್ಕೆ ಬರುವುದೆಂದರೆ ನನಗೆ ವಿಶೇಷ ಪ್ರೀತಿ’ ಎಂದು ಜೂ ಎನ್ ಟಿಆರ್ ಹೇಳಿದರು. ಕಿಮ್ಸ್‌ನ ಸೇವೆಯನ್ನು ಕೊಂಡಾಡಿದ ಜೂ ಎನ್‌ಟಿಆರ್, ಕಿಮ್ಸ್‌ನವರು ‘ಪೇಷೆಂಟ್ ಈಸ್ ಪ್ಯಾರಾಮೌಂಟ್’ ಎಂಬ ಧ್ಯೇಯ ವಾಕ್ಯದೊಂದಿಗೆ ಸಲ್ಲಿಸುತ್ತಿರುವ ಸೇವೆಯನ್ನು ಬೆಲೆಕಟ್ಟಲಾರದ್ದು, ಅವರು ಈ ಉದ್ಯಮದಲ್ಲಿ ಹೆಚ್ಚಿನ ಎತ್ತರಕ್ಕೆ ಬೆಳೆಯಲಿ, ಅಪಾರ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಇದನ್ನೂ ಓದಿ:ಜೂ ಎನ್ ಟಿಆರ್ ಹಳೆ ಸಿನಿಮಾ ಸೀಕ್ವೆಲ್ ಗೆ ಕತೆ ರೆಡಿ, ಆದರೆ ನಟಿಸುತ್ತಾರಾ ನಟ?
ಮಹಿಳಾ ದಿನಾಚರಣೆಯ ಬಗ್ಗೆ ಮಾತನಾಡಿದ ಜೂ.ಎನ್.ಟಿಆರ್, ‘ಮಹಿಳೆಯರನ್ನು ಹೇಗೆ ನೋಡಬೇಕು, ಗೌರವ ಕೊಡಬೇಕು ಎಂದು ಪದೇ ಪದೇ ನೆನಪಿಸುವ ಪರಿಸ್ಥಿತಿ ಇದೆ ಎಂಬುದೇ ನನಗೆ ಬೇಸರ ತರುವ ವಿಷಯ. ಮಹಿಳೆಯರಿಗೆ ಪ್ರತ್ಯೇಕವಾಗಿ ಹೇಳಬೇಕಾದ ಅವಶ್ಯಕತೆಗಳು ಎಷ್ಟು. ಅದು ಸ್ವಾಭಾವಿಕವಾಗಿ ಬರಬೇಕು. ಅದೆಲ್ಲ ಮನೆಯಿಂದಲೇ ಪ್ರಾರಂಭ ಆಗಬೇಕು, ನನ್ನ ಇಬ್ಬರು ಗಂಡು ಮಕ್ಕಳು ಸಹ ಹೆಣ್ಣು ಮಕ್ಕಳನ್ನು ಗೌರವಿಸುವ ವ್ಯಕ್ತಿಗಳಾಗಿ ಬೆಳೆಯಲಿದ್ದಾರೆ ಎಂದು ನಾನು ಖಾತ್ರಿಪಡಿಸುತ್ತಿದ್ದೇನೆ’ ಎಂದು ಜೂ.
ರಸ್ತೆ ಸುರಕ್ಷತೆಯ ಬಗ್ಗೆಯೂ ಮಾತನಾಡಿದ ಜೂ ಎನ್ ಟಿಆರ್, ‘ರಸ್ತೆ ಅಪಘಾತದಿಂದ ಭಾರಿ ನಷ್ಟವನ್ನು ನಮ್ಮ ಕುಟುಂಬ ಅನುಭವಿಸಿದೆ. ನಾನು, ನನ್ನ ದೊಡ್ಡ ಅಣ್ಣ ಮತ್ತು ತಂದೆಯನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದೇನೆ. ನಾನು ಸಹ ಅಪಘಾತದಲ್ಲಿ ತೊಂದರೆ ಅನುಭವಿಸಿದ್ದೆ, ಜೀವವೇ ಹೋಗುವ ಸ್ಥಿತಿ ಇತ್ತು. ರಸ್ತೆ ಸುರಕ್ಷತೆ ಮತ್ತು ಡ್ರೈವಿಂಗ್ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಡ್ರೈವಿಂಗ್ ಮಾಡಬೇಕಾದರೆ ಕುಟುಂಬವನ್ನು ಮನಸ್ಸಿನಲ್ಲಿಟ್ಟುಕೊಂಡು ಡ್ರೈವ್ ಮಾಡಿ. ಆಗ ಎಚ್ಚರಿಕೆ ಇರುತ್ತದೆ. ಜವಾಬ್ದಾರಿ ಎಂಬುದು ಒಳಗಿನಿಂದಲೇ ಬರಲಿ, ಅದು ಹೇರಿಕೆ ಆಗುವುದು ಬೇಡ’ ಎಂದು ಜೂ ಎನ್ ಟಿಆರ್.
ಇನ್ನು ಅಭಿಮಾನಿಗಳ ಬಗ್ಗೆ ಮಾತನಾಡಿದ ಜೂ ಎನ್ ಟಿಆರ್, ‘ನಿಮ್ಮ ಪ್ರೀತಿಯನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೇನೆ. ಅಭಿಮಾನದ ಸಹೋದರರು ನೀವು. ನಿಮಗೆಲ್ಲರಿಗೂ ಕೋಟಿ-ಕೋಟಿ ಧನ್ಯವಾದ. ನಿಮ್ಮಲ್ಲಿ ಕೇಳಿಕೊಳ್ಳುವುದಿಷ್ಟೆ ಜಾಗೃತೆಯಾಗಿ ಮನೆಗೆ ಹೋಗಿ, ನಮ್ಮ ಮನೆಯಲ್ಲಿ ನಡೆದ ದುರ್ಘಟನೆ ನಿಮ್ಮ ಮನೆಯಲ್ಲಿ ನಡೆಯಬಾರದು, ನಿಮ್ಮ ಪ್ರೀತಿಗೆ, ಆಜನ್ಮ ಋಣದಲ್ಲಿರುತ್ತೇನೆ’ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ