ಮಿಥುನ ರಾಶಿಗೆ ಗುರು ಗ್ರಹದ ಪ್ರವೇಶ
2025ರ ಡಿಸೆಂಬರ್ 5ನೇ ತಾರೀಕಿನಂದು ಗುರು ಗ್ರಹವು ಕರ್ಕಾಟಕ ರಾಶಿಯಿಂದ ಮತ್ತೆ ಮಿಥುನ ರಾಶಿಗೆ ಪ್ರವೇಶವಾಗಲಿದೆ. 2025ರ ಅಕ್ಟೋಬರ್ 18ನೇ ತಾರೀಕು ಕರ್ಕಾಟಕ ರಾಶಿಯಲ್ಲಿ ತನ್ನ ಪರಮೋಚ್ಚ ಸ್ಥಿತಿಯಲ್ಲಿ ಸಂಚಾರ ಆರಂಭಿಸಿದ ಬೃಹಸ್ಪತಿ ಮತ್ತೆ ಮಿಥುನಕ್ಕೆ ಪ್ರವೇಶಿಸಿ, ಮುಂದಿನ ವರ್ಷ, ಅಂದರೆ 2026ನೇ ಇಸವಿಯ ಜೂನ್ 1ನೇ ತಾರೀಕಿನ ತನಕ ಅದೇ ರಾಶಿಯಲ್ಲಿ ಇರಲಿದೆ. ಈ ಮೂಲಕ ಮತ್ತೆ ಗುರುವಿನ ಬಲವನ್ನು ಪಡೆದುಕೊಳ್ಳುವ ರಾಶಿಗಳು ಅಂದರೆ ವೃಷಭ, ಸಿಂಹ, ತುಲಾ, ಧನುಸ್ಸು ಹಾಗೂ ಕುಂಭ. ಇನ್ನು ಹೀಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕಾದ ರಾಶಿಗಳು ಅಂದರೆ ಮಿಥುನ, ಕರ್ಕಾಟಕ, ವೃಶ್ಚಿಕ ಹಾಗೂ ಮಕರದವರು.
ಗುರು ಗ್ರಹವು ಸಾಮಾನ್ಯವಾಗಿ ಒಂದು ರಾಶಿಯಲ್ಲಿ ಒಂದು ವರ್ಷಗಳ ಕಾಲ ಸಂಚಾರ ಮಾಡುತ್ತದೆ. ಆದರೆ ಅತಿಚಾರ ಸಂಚಾರದ ಸಮಯದಲ್ಲಿ ವೇಗವಾಗಿ ಅದರ ಮುಂದಿನ ರಾಶಿಗೆ ತೆರಳುತ್ತದೆ. ಇದೇ ರೀತಿಯಲ್ಲಿ ಮುಂದಿನ ವರ್ಷ, 2026ರಲ್ಲೂ ಆಗಲಿದೆ. ಇನ್ನು ಧನುಸ್ಸು ಹಾಗೂ ಮೀನ ರಾಶಿಗಳು ಗುರುವಿನ ಸ್ವಕ್ಷೇತ್ರ ಆಗುತ್ತದೆ. ಕರ್ಕಾಟಕ ರಾಶಿಯು ಉಚ್ಚ ಕ್ಷೇತ್ರವಾಗುವುದು. ಮಕರ ರಾಶಿಗೆ ಗುರು ಪ್ರವೇಶ ಮಾಡಿದರೆ ಅದು ನೀಚ ಕ್ಷೇತ್ರವಾಗುವುದು.
ಮೇಷದಿಂದ ಮೀನ ರಾಶಿಯ ತನಕ ಯಾರಿಗೆ ಯಾವ ಫಲ ದೊರೆಯಲಿದೆ
ಮೇಷ: ಆರೋಗ್ಯದಲ್ಲಿ ಏಳುಪೇರು ಆಗಲಿದೆ. ಯಾವುದನ್ನು ನೀವು ಪ್ರತಿಷ್ಠೆಯಾಗಿ ಭಾವಿಸಿರುತ್ತೀರೋ ಅದನ್ನು ಕಾಪಾಡಿಕೊಳ್ಳಲು ಸಾಧ್ಯ ಆಗದೇ ಹೋಗುವುದರಿಂದ ಮಾನಸಿಕವಾಗಿ ಕುಗ್ಗುವಂತೆ ಆಗಲಿದೆ. ಸೋದರ- ಸೋದರಿಯರ ಬದುಕು, ಅವರ ವರ್ತನೆ ನಿಮ್ಮ ಚಿಂತೆಗೆ ಈಡು ಮಾಡಲಿದೆ. ಹಣಕಾಸು ತೀವ್ರವಾಗಿ, ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಕುಟುಂಬದ ಸದಸ್ಯರ ಕಷ್ಟಕ್ಕೆ ನೀವು ಕೊಟ್ಟಿರುವ ಸಾಲವನ್ನು ಅವರು ಸರಿಯಾದ ಸಮಯಕ್ಕೆ ಹಿಂತಿರುಗಿಸದಿದ್ದರೆ, ಅದರ ಜವಾಬ್ದಾರಿ ನಿಮ್ಮ ಮೇಲೆ ಬೀಳಲಿದೆ. ನಿಮ್ಮ ಶ್ರಮದ ಫಲ ಪರರ ಪಾಲಾಗಲಿದೆ.
ವೃಷಭ: ಕಾರು, ಫ್ಲ್ಯಾಟ್, ಮನೆ, ಸೈಟು ಇಂಥವು ಖರೀದಿ ಮಾಡುವಂಥ ಯೋಗ ಇದೆ. ದಂಪತಿ ಮಧ್ಯೆ ಅನ್ಯೋನ್ಯತೆ, ಪ್ರೀತಿ, ಸಾಮರಸ್ಯ ಹೆಚ್ಚಾಗಲಿದೆ. ವಿವಾಹ ವಯಸ್ಕರಾಗಿದ್ದರೆ, ಮದುವೆಗೆ ಸೂಕ್ತ ಸಂಬಂಧದ ಹುಡುಕಾಟದಲ್ಲಿ ಇರುವವರಿಗೆ ನಿರೀಕ್ಷೆಯಂತೆ ವಧು/ವರ ಸಿಗುವ ಯೋಗ ಇದೆ. ಹಣಕಾಸಿನ ಹರಿವು ಸರಾಗವಾಗಿ ಆಗಲಿದೆ. ನಿಮ್ಮ ಮಾತಿನ ಮೂಲಕ ಕೆಲಸ- ಕಾರ್ಯಗಳು ಆಗುವಷ್ಟು ಪ್ರಭಾವಿ ಆಗಿರುತ್ತದೆ. ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಬಹಳ ಉತ್ತಮವಾದ ಸಮಯ ಇದಾಗಿರುತ್ತದೆ. ವೃತ್ತಿ, ಉದ್ಯೋಗ, ಸಂತಾನ, ವಿದೇಶ ಪ್ರಯಾಣ ಹೀಗೆ ನಾನಾ ವಿಚಾರಗಳಲ್ಲಿ ಯಶಸ್ಸು ನಿಮ್ಮ ಕೈ ಹಿಡಿಯಲಿದೆ.
ಮಿಥುನ: ಸಾಂಸಾರಿಕ ಜೀವನ, ಆರೋಗ್ಯ ಮತ್ತು ಉದ್ಯೋಗ ನಿಮಗೆ ಆತಂಕವನ್ನು ತಂದೊಡ್ಡಲಿದೆ. ಒಂದು ವೇಳೆ ನಿಶ್ಚಿತಾರ್ಥ ಆಗಿದ್ದರೆ ಎಂದಾಗ ಹೇಳಿಕೆ- ಚಾಡಿ ಮಾತುಗಳಿಗೆ ಕಿವಿಗೊಡಬೇಡಿ. ಏಕೆಂದರೆ ವಿವಾಹ ನಿಶ್ಚಿತಾರ್ಥ ಮುರಿದು ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಿವಿಗೆ ಕೆಲವು ಅನಾರೋಗ್ಯ ಸಮಸ್ಯೆ ತೀವ್ರವಾಗಿ ಕಾಡಬಹುದು. ಇದರ ಜೊತೆಗೆ ಮಧುಮೇಹ, ದೇಹದ ತೂಕವನ್ನು ಸರಿಯಾಗಿ ನಿರ್ವಹಿಸುವುದು ಮುಖ್ಯವಾಗುತ್ತದೆ. ದಂಪತಿ ಮಧ್ಯೆ ಕೂಡ ಸಣ್ಣ ಪುಟ್ಟ ವಿಚಾರಕ್ಕೂ ಜಗಳ- ಕದನಗಳು ಆಗುತ್ತವೆ. ಇನ್ನು ಮಕ್ಕಳ ಶಿಕ್ಷಣ, ಮದುವೆ, ಉದ್ಯೋಗ ಈ ವಿಚಾರಗಳು ಸಹ ಅನಿಶ್ಚಿತತೆಗೆ ಸಿಲುಕಿಕೊಂಡು ಮಾನಸಿಕ ನೆಮ್ಮದಿ ಹಾಳಾಗುತ್ತದೆ.
ಕರ್ಕಾಟಕ: ಆರೋಗ್ಯ ಸಮಸ್ಯೆಗಳು ಹಾಗೂ ಶತ್ರುಗಳು ನಿಮ್ಮ ವಿರುದ್ಧ ಮಾಡುವ ಷಡ್ಯಂತ್ರ- ಕಿರಿಕಿರಿಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಅಂತಲೇ ಹೆಚ್ಚಿನ ಸಮಯ ಹೋಗಲಿದೆ. ಖರ್ಚು- ವೆಚ್ಚ ವಿಪರೀತ ಹೆಚ್ಚಾಗಲಿದೆ. ಕೋರ್ಟ್-ಕಚೇರಿಗಳಿಗೆ ಅಲೆದಾಟ, ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಅಂತಲೇ ಹಣದ ಖರ್ಚು ಇಂಥವುಗಳಿಂದ ಮಾನಸಿಕ ನೆಮ್ಮದಿ ಇಲ್ಲದಂತಾಗುತ್ತದೆ. ದೇಹದಲ್ಲಿನ ಕೊಲೆಸ್ಟ್ರಾಲ್ ಹೆಚ್ಚಾಗಿ, ಅದರ ಅಡ್ಡ ಪರಿಣಾಮಗಳಿಂದ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸರ್ಕಾರಿ ಉದ್ಯೋಗಿಗಳಾಗಿದ್ದರೆ, ಇಲಾಖೆಯ ವಿಚಾರಣೆಗಳು ನಿಮ್ಮ ವಿರುದ್ಧ ನಡೆಯುತ್ತಾ ಇದ್ದಲ್ಲಿ ಶಿಕ್ಷೆ ಆಗಬಹುದು. ಅಥವಾ ಹೊಸ ವಿಚಾರಣೆಗಳನ್ನು ಎದುರಿಸುವಂತೆ ಆಗಲಿದೆ.
ಸಿಂಹ: ನಿಮಗೆ ಬರಬೇಕಾದ ಸಾಲ ವಸೂಲಿ ಅಥವಾ ನೀವು ಕೆಲಸ ಮಾಡಿಯೂ ಬಾರದಿರುವ ಹಣ ಕೈ ಸೇರುವ ಯೋಗ ಇದೆ. ಈ ಹಿಂದೆ ನೀವು ಮಾಡಿರುವ ಹೂಡಿಕೆಗಳು ಒಳ್ಳೆ ಲಾಭ ನೀಡಲಿವೆ. ಒಂದು ಸೈಟು ಅಥವಾ ಮನೆ ಖರೀದಿಗಾಗಿ ಅಡ್ವಾನ್ಸ್ ನೀಡಿ, ಒಂದಲ್ಲಾ ಒಂದು ಕಾರಣದಿಂದ ಅದರ ನೋಂದಣಿ ಮತ್ತು ಪೂರ್ತಿ ಹಣವನ್ನು ಚುಕ್ತಾ ಮಾಡುವುದಕ್ಕೆ ಸಮಸ್ಯೆ ಆಗುತ್ತಾ ಇದ್ದರೆ ಆ ತೊಂದರೆಗಳಿಂದ ಹೊರಗೆ ಬರಲು ಸಾಧ್ಯವಾಗಲಿದೆ. ತೀವ್ರತರದ ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ಅದಕ್ಕೆ ಸೂಕ್ತ ಔಷಧೋಪಚಾರ ದೊರೆಯಲಿದೆ. ವ್ಯಾಜ್ಯ- ಜಗಳಗಳನ್ನು ಸಂಧಾನದ ಮೂಲಕ ಪರಿಹರಿಸಿಕೊಳ್ಳಲು ಅವಕಾಶಗಳು ದೊರೆಯಲಿವೆ. ನಾನಾ ರೀತಿಯ ಶುಭ ನಂತರ.
ಕನ್ಯಾ: ನಿಮ್ಮ ಸ್ಥಾನ-ಮಾನಗಳನ್ನು ಉಳಿಸಿಕೊಳ್ಳುವ ಕಡೆಗೆ ಗಮನವನ್ನು ನೀಡಿ. ನಿಮ್ಮಲ್ಲಿ ಕೆಲವರು ಕೋಲು ಕೊಟ್ಟು ಹೊಡೆಸಿಕೊಂಡರು ಎಂಬ ಮಾತಿನಂತೆ ಸಮಸ್ಯೆಗಳನ್ನು ನೀವಾಗಿಯೇ ಮೈ ಮೇಲೆ ಹಾಕಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ, ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವಂಥವರು ಮಾತಿನ ಮೇಲೆ ನಿಗಾ ಇಡುವುದು ಮುಖ್ಯ. ನಿಮ್ಮ ವೈರಿಗಳು ಅಥವಾ ಪ್ರತಿಸ್ಪರ್ಧಿಗಳ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಲಿದ್ದಾರೆ. ದೇವತಾ ಕಾರ್ಯಗಳಲ್ಲಿ ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ಮೇಲೆ ಇತರರಿಗೆ ಇರುವ ವಿಶ್ವಾಸಾರ್ಹತೆ, ಗೌರವ ಉಳಿಸಿಕೊಳ್ಳಲು ಹರಸಾಹಸ ಪಡ. ಉದ್ಯೋಗ, ವೃತ್ತಿ ಜೀವನದಲ್ಲಿ ಭಾರಿ ಏರಿಳಿತ ಅನುಭವಕ್ಕೆ ಬರಲಿದೆ.
ತುಲಾ: ನಿಮಗಿರುವ ವರ್ಚಸ್ಸು ಮತ್ತು ವಿಶ್ವಾಸಾರ್ಹತೆ ಇವುಗಳನ್ನು ಹೆಚ್ಚು ಮಾಡಿಕೊಳ್ಳಲು ಹಲವು ಅವಕಾಶಗಳು ದೊರೆಯಲಿವೆ. ಯಾವುದಾದರೂ ಒಂದು ಕಾರಣದಿಂದ ದಂಪತಿ ಮಧ್ಯೆ ವಿರಸ ಇದ್ದಲ್ಲಿ ಹಾಗೂ ಮಕ್ಕಳಿಂದ ದೂರವಿರುವ ಸನ್ನಿವೇಶ ಎದುರಾಗಿದೆ ಇದಕ್ಕೆ ಕಾರಣ ಆಗಿರುವ ಘಟಕಗಳನ್ನು ಸರಿಪಡಿಸಲು ಅವಕಾಶ ದೊರೆಯಲಿದೆ. ನಿಮ್ಮಲ್ಲಿ ಕೆಲವರು ಬ್ರ್ಯಾಂಡ್ ಆಗಿರುವಂತಹ ಕೆಲವು ವ್ಯಾಪಾರ- ವ್ಯವಹಾರ ಸಂಸ್ಥೆಗಳನ್ನು ಖರೀದಿಸುವ ಯೋಗ ಕೂಡ ಇದೆ. ನಿಮ್ಮಲ್ಲಿ ಕೆಲವರಿಗೆ ಸಂಘ- ಸಂಸ್ಥೆಗಳಿಂದ ಗೌರವ, ಸನ್ಮಾನ, ಧಾರ್ಮಿಕ- ಸಾಮಾಜಿಕ ಸಂಘಟನೆಗಳಿಗೆ ಪದಾಧಿಕಾರಿ ನೇಮಕ ಆಗುವ ಯೋಗ ಇದೆ. ಒಟ್ಟಾರೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಮಯ ಇದಾಗಿರಲಿದೆ.
ವೃಶ್ಚಿಕ: ನಾನಾ ಆರೋಪ- ನಿಂದೆಗಳನ್ನು ಹೊರ. ಯಾವ ವ್ಯವಹಾರ- ವ್ಯಾಪಾರಗಳು ಲಾಭದಾಯಕ ಆಗಬಹುದು ಎಂಬ ನಿರೀಕ್ಷೆಯಲ್ಲಿ ಇರುತ್ತೀರೋ ಅಂಥವು ಕೋರ್ಟ್-ಕಚೇರಿ ಮೆಟ್ಟಿಲೇರುವಂತೆ ಆಗಬಹುದು. ಅಥವಾ ಸರ್ಕಾರದ ಮಟ್ಟದಲ್ಲಿ ನಾನಾ ಕಿರಿಕಿರಿಗಳನ್ನು ಅನುಭವಿಸುವಂತೆ ಆಗಲಿದೆ. ಯಾವುದೇ ಕಾರಣಕ್ಕೂ ಈ ಅವಧಿಯಲ್ಲಿ ಉದ್ಯೋಗ ಬದಲಾವಣೆಯನ್ನೋ ಅಥವಾ ರಾಜೀನಾಮೆ ನೀಡಿ ವ್ಯಾಪಾರವೋ- ವ್ಯವಹಾರವನ್ನೋ ಶುರು ಮಾಡುವುದಕ್ಕೆ ಮುಂದಾಗಬಾರದು. ಗುರು-ಹಿರಿಯರನ್ನು ಗೌರವದಿಂದ ನೋಡಿ. ಒಂದು ವೇಳೆ ಅವರನ್ನು ತಿರಸ್ಕಾರದಿಂದ ನೋಡುವುದು, ಅವರಿಗೆ ಬೇಸರ ಮಾಡುವುದು ಇಂಥದ್ದು ಮಾಡಿದ್ದು ಆರೋಗ್ಯ, ಉದ್ಯೋಗ, ಹಣಕಾಸು ವಿಚಾರ ಎಲ್ಲದರಲ್ಲೂ ಸಮಸ್ಯೆ ವಿಪರೀತಕ್ಕೆ ಹೋಗುತ್ತದೆ.
ಧನುಸ್ಸು: ವಿವಾಹಕ್ಕೆ ಪ್ರಯತ್ನ ಮಾಡುತ್ತಿರುವ ವಿವಾಹ ವಯಸ್ಕರಿಗೆ ಮದುವೆ ನಿಶ್ಚಯ ಆಗುವ ಅಥವಾ ಮದುವೆಯೇ ಆಗಿಬಿಡುವ ಸಾಧ್ಯತೆ ಇದೆ. ಪಾರ್ಟನರ್ ಶಿಪ್ ವ್ಯವಹಾರ ಮಾಡುತ್ತಿರುವವರಿಗೆ ಆದಾಯ- ಲಾಭ ಆಗಲಿದೆ. ಸೈಟು ಖರೀದಿ, ಮನೆ ನಿರ್ಮಾಣ, ಫ್ಲ್ಯಾಟ್ ಕೊಳ್ಳುವುದು, ಕಾರು ಖರೀದಿ ಮಾಡುವುದು, ಕಟ್ಟಿರುವ ಮನೆಯನ್ನೇ ನಿರ್ಮಾಣ ಮಾಡುವುದು ಇಂಥ ಎಲ್ಲ ಪ್ರಯತ್ನಗಳು ಯಶಸ್ಸನ್ನು ಕಾಣುತ್ತವೆ. ನಿಮಗೆ ಆ ಉದ್ದೇಶ ಇಲ್ಲದಿದ್ದರೂ ಅನಾಯಾಸವಾಗಿ ಕೆಲವು ಅನುಕೂಲ ಒದಗಿ ಬಂದು, ದಿಢೀರ್ ಆಗಲು ಸಾಧ್ಯವಾಗಲಿದೆ. ನಿಮ್ಮಲ್ಲಿ ಕೆಲವರಿಗೆ ತಾತ್ಕಾಲಿಕವಾಗಿ ಆದರೂ ವಿದೇಶ ಪ್ರಯಾಣ ಕೈಗೊಳ್ಳುವ ಯೋಗ ಒದಗಿ ಬರಲಿದೆ.
ಮಕರ: ಈ ಅವಧಿಯಲ್ಲಿ ನಿಮ್ಮ ಕೆಲಸದ ಒತ್ತಡಗಳು ವಿಪರೀತ ಬೀಳಲಿದೆ ಹಾಗೂ ಜವಾಬ್ದಾರಿಗಳು ಸಹ ಹೆಚ್ಚಾಗಲಿವೆ. ಆರೋಗ್ಯದ ಸಮಸ್ಯೆಗಳು, ನಿಮ್ಮ ವೃತ್ತಿಯಲ್ಲಿ ಇರುವವರಿಗೆ ನಾನಾ ರೀತಿಯ ಕಿರಿಕಿರಿಗಳು ಅನುಭವಿಸುವಂತೆ ಆಗಲಿದೆ. ನೀವು ಮಾಡುತ್ತಿರುವ ಕೆಲಸಕ್ಕೆ ತಕ್ಕ ಫಲ ಸಮಯಕ್ಕೆ ಸಿಗದಿರುವುದು ಸಹ ಬೇಸರಕ್ಕೆ ಕಾರಣ ಆಗಲಿದೆ. ಕುಟುಂಬದ ಸದಸ್ಯರ ಬೇಡಿಕೆಗಳು ಹೆಚ್ಚಾಗಿ ಖರ್ಚು ಜಾಸ್ತಿಯಾಗಿ, ಹಣಕಾಸು ಹೊಂದಿಸುವುದಕ್ಕೆ ಅವಸ್ಥೆ ಪಡುವಂತೆ ಆಗಲಿದೆ. ಆರೋಗ್ಯದಲ್ಲಿ ಮೇಲಿಂದ ಮೇಲೆ ಸಮಸ್ಯೆಗಳು ತಲೆದೋರಲಿವೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಮಾತು ಕೇಳುವುದು ಮುಖ್ಯ. ಹೊಸ ಹೂಡಿಕೆ, ವ್ಯವಹಾರದಲ್ಲಿ ಆತುರದ ನಿರ್ಧಾರವನ್ನು ಹೊಸದನ್ನು ತೆಗೆದುಕೊಳ್ಳಬಾರದು.
ಕುಂಭ: ಕಳೆದ ಒಂದೂವರೆ ತಿಂಗಳಿನಿಂದ ಆದ ತೊಂದರೆ, ಹಿಂಸೆ, ಮಾನಸಿಕ ಕಿರಿಕಿರಿ, ಅವಮಾನ, ಆರೋಗ್ಯದಲ್ಲಿನ ಸಮಸ್ಯೆಗಳು ದೂರವಾಗಲಿವೆ. ಆತ್ಮವಿಶ್ವಾಸ ಜಾಸ್ತಿ ಆಗಲಿದೆ. ಐದನೇ ಮನೆಯಲ್ಲಿ ಗುರುವಿನ ಸಂಚಾರ ನಿಮಗೆ ಬಹುಮಟ್ಟಿಗೆ ಅನುಕೂಲ. ನಿಂತು ಹೋಗಿದ್ದ ಕೆಲಸ- ಕಾರ್ಯಗಳು ಮತ್ತೆ ಚಾಲನೆ ಪಡೆದುಕೊಳ್ಳುತ್ತವೆ. ಉದ್ಯೋಗದಲ್ಲಿ ಗೌರವ ಮತ್ತು ಹೊಸ ಜವಾಬ್ದಾರಿಗಳು ದೊರೆಯುತ್ತವೆ. ಹಣಕಾಸಿನ ಸ್ಥಿತಿ ಸುಧಾರಣೆ ಕಾಣುತ್ತದೆ. ಕುಟುಂಬದಲ್ಲಿ ಸಂತಸದ ವಾತಾವರಣ. ಮಕ್ಕಳ ಪ್ರಗತಿ ಮತ್ತು ಶಿಕ್ಷಣ ಸಂಬಂಧಿತ ವಿಚಾರಗಳಲ್ಲಿ ಸುಧಾರಣೆ ಆಗಲಿದೆ. ಆಧ್ಯಾತ್ಮಿಕ ಚಟುವಟಿಕೆಗಳ ಮೇಲೂ ಆಸಕ್ತಿ. ಸಂತಾನಕ್ಕೆ ಪ್ರಯತ್ನಿಸುತ್ತಿರುವವರಿಗೂ ಇದು ಉತ್ತಮ ಸಮಯ.
ಮೀನ: ಸಾಲ ಮಾಡಿಯಾದರೂ ಸೈಟು ಖರೀದಿ, ಮನೆ ಖರೀದಿ, ಕಾರು ಖರೀದಿ ಮುಂತಾದವುಗಳನ್ನು ಮಾಡಬೇಕು. ಅದೇ ಕಾರಣಕ್ಕೆ ನಿಮ್ಮ ಸಾಮರ್ಥ್ಯವನ್ನು ಮೀರಿ ಸಾಲ ಮಾಡಿಕೊಳ್ಳುವಂತೆ ಆಗಲಿದೆ. ಸ್ನೇಹಿತರ ಜೊತೆಗೆ ಒಳ್ಳೆ ಸ್ನೇಹ- ಬಾಂಧವ್ಯ ಉಳಿಸಿಕೊಳ್ಳುವುದು ಬಹಳ ಮುಖ್ಯವಾದ ಸವಾಲಾಗಿ ಪರಿಣಮಿಸುತ್ತದೆ. ಮಾತಿನ ಮೇಲೆ ನಿಗಾ ಇರಿಸಿಕೊಳ್ಳಿ. ನಿಮ್ಮ ಬಳಿ ಯಾರೇ ಸಹಾಯ ಕೇಳಿಕೊಂಡು ಬಂದರೂ ಹಿಯಾಳಿಸುವುದು, ಮೂಡಲಿಸುವುದು ಇಂಥ ಕೆಲಸ ಮಾಡಬೇಡಿ. ನನಗೆ ಎಲ್ಲ ಗೊತ್ತು, ನಾನು ಮಾಡಿದ್ದೆ ಸರಿ ಎಂಬ ಧೋರಣೆ ನಿಮಗೆ ಕೆಲವು ಸಮಸ್ಯೆಗಳನ್ನು ತಂದೊಡ್ಡಲಿದೆ.
ಮಿಥುನ, ಕರ್ಕಾಟಕ, ವೃಶ್ಚಿಕ, ಮಕರ ಈ ರಾಶಿಯವರು ಕೆಲವು ಪರಿಹಾರ
– ಗುರುವಾರದಂದು ಹಳದಿ ಬಟ್ಟೆ ಅಥವಾ ಹಳದಿ ತಿಲಕ ಧರಿಸಿ.
– ಬಾಳೆಗಿಡಕ್ಕೆ ಅಥವಾ ತುಳಸಿಗೆ ಪ್ರತಿದಿನ ನೀರು ಹಾಕಿ.
– ಗುರುವಾರದಂದು ಇಡೀ ದಿನ ಲಘು ಉಪಹಾರ ಸೇವನೆ ಮಾಡುವುದು ಅಥವಾ ಸಂಪೂರ್ಣ ಉಪವಾಸ (ನಿಮ್ಮ ಆರೋಗ್ಯ ಹಾಗೂ ದೈಹಿಕ ಸಾಮರ್ಥ್ಯ ನೋಡಿಕೊಂಡು ನಿರ್ಧಾರ ಮಾಡಿಕೊಳ್ಳಿ)
– ಬ್ರಾಹ್ಮಣರಿಗೆ ಅಥವಾ ವೃದ್ಧರಿಗೆ ಹಳದಿ ಪದಾರ್ಥಗಳಾದ ಕಡಲೆಬೇಳೆ/ ಹಾಲು / ಹಣ್ಣು ದಾನ ಮಾಡಿ.
– ದತ್ತಾತ್ರೇಯ ಅಥವಾ ಸಾಯಿ ಬಾಬಾ ಮಂದಿರಕ್ಕೆ ಭೇಟಿ ನೀಡಿ.
– ಪ್ರತಿ ಗುರುವಾರ ಸಾಧ್ಯವಿದ್ದರೆ ಭಗವದ್ಗೀತೆಯ 12ನೇ ಅಧ್ಯಾಯ ಪಾರಾಯಣ ಮಾಡಿ.
– ಗುರುವಾರದ ದಿನ ಹಳದಿ ಬಟ್ಟೆಯಲ್ಲಿ ಕಡಲೆಕಾಳನ್ನು (ಮೂರು ಹಿಡಿಯಷ್ಟು) ಹಾಕಿ, ಬಟ್ಟೆಯಿಂದ ಕಟ್ಟಿದ ನಂತರ ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ದಕ್ಷಿಣೆ ಸಹಿತ ದಾನ ಮಾಡಿ.
ಲೇಖನ- ಸ್ವಾತಿ ಎನ್.ಕೆ.