ಕನಕೋತ್ಸವದಲ್ಲಿ ಗಾಯಕ ನವೀನ್ ಸಜ್ಜು ಜೊತೆ ಡಿಸಿಎಂ ಡಿಕೆಶಿ ಪತ್ನಿ ಉಷಾ ಹೆಜ್ಜೆ ಹಾಕಿದ್ದು, ಈ ವೇಳೆ ಅವರು ನಾಚಿದ ಪ್ರಸಂಗ ಗಮನ ಸೆಳೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ , 2027ರಲ್ಲಿ ಅದ್ಧೂರಿ ಉತ್ಸವ ನಡೆಸುವ ಬಗ್ಗೆ ಘೋಷಣೆಗಳನ್ನು ಮಾಡಿದರು.

ಕನಕಪುರದಲ್ಲಿ ಆಯೋಜಿಸಿದ್ದ ಕನಕೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ನವೀನ್ ಸಜ್ಜು ಅವರು ಡಿಕೆ ಶಿವಕುಮಾರ್ ಪತ್ನಿ ಜೊತೆಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿ ಗಮನ ಸೆಳೆಯಿತು. ಜೊತೆಗೆ ವೇಳೆ ಡಿಕೆಶಿ ಖುಷಿಯಿಂದ ನಕ್ಕರು. ಈ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ನವೀನ್ ಸಜ್ಜು ತಮ್ಮ ಗಾಯನದಿಂದಲೇ ಎಲ್ಲರ ಮನಗೆದ್ದರು. ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾ ಶಿವಕುಮಾರ್ ಅವರೊಂದಿಗೆ ಡ್ಯಾನ್ಸ್ ಮಾಡಿರುವುದು ಕಾರ್ಯಕ್ರಮದ ಆಕರ್ಷಕ ಕ್ಷಣವಾಗಿ ಮೂಡಿಬಂದಿತು.

ಕಾರ್ಯಕ್ರಮದ ವೇಳೆ ನವೀನ್ ಸಜ್ಜು ಅವರು ತಮ್ಮ ಲೋ ನವೀನ ಸಿನೆಮಾದ ಹಾಡಾದ ‘ಕೈ ತೊಳ್ಕೊಂಡು ಮುಟ್ಟಂಗ ಅವಳೇ ನನ್ನ ಹುಡುಗಿ’ ಹಾಡನ್ನು ಹಾಡುತ್ತ ವೇದಿಕೆಯಿಂದ ಕೆಳಗಿಳಿದು ಸಭಿಕರ ಮಧ್ಯೆ ಬಂದರು. ಹಾಡು ಹಾಡುತ್ತ ಮುಂದೆ ಬರುತ್ತಿದ್ದಂತೆ ಉಷಾ ಶಿವಕುಮಾರ್ ಅವರನ್ನು ಡಾನ್ಸ್ ಮಾಡುವಂತೆ ಕರೆದರು. ಈ ವೇಳೆ ಡಿಕೆಶಿಪ್ನಿ ನಾಚಿ ನೀರಾದ ದೃಶ್ಯ ಎಲ್ಲರ ಗಮನ ಸೆಳೆಯಿತು. ಬಳಿಕ ನವೀನ್ ಸಜ್ಜು ಅವರು ಉಷಾ ಅವರ ಎದುರು ನಿಂತು ಹಾಡನ್ನು ಮುಂದುವರೆಸಿದರು.

ಈ ಸಂದರ್ಭ ಡಿ.ಕೆ. ಶಿವಕುಮಾರ್ ಪಕ್ಕದಲ್ಲಿ ಕುಳಿತಿದ್ದ ಉಷಾ ಅವರನ್ನು ಉದ್ದೇಶಿಸಿ, “ಮೇಡಂ ಅವರೊಂದು ಮುತ್ತನ್ನ ಕೊಡಬೇಕಂತೆ” ಎಂದು ನವೀನ್ ಸಜ್ಜು ಹಾಸ್ಯಭರಿತವಾಗಿ ಹೇಳಿದಾಗ, ಆ ಮಾತಿಗೆ ಡಿ.ಕೆ. ಶಿವಕುಮಾರ್ ನಗುತ್ತಲೇ ಪ್ರತಿಕ್ರಿಯಿಸಿದರು. ವೇದಿಕೆಯಲ್ಲಿ ಹಾಸ್ಯ, ಸಂಗೀತ ಮತ್ತು ಆತ್ಮೀಯತೆ ಮೇಳೈಸಿತು. ನಂತರ ನವೀನ್ ಸಜ್ಜು ಅವರು ಉಷಾ ಶಿವಕುಮಾರ್ ಅವರ ಕೈ ಹಿಡಿದು ಹಾಡಿನ ತಾಳಕ್ಕೆ ಸಣ್ಣ ಸ್ಟೆಪ್‌ಗಳನ್ನು ಹಾಕಿದರು. ಈ ದೃಶ್ಯಕ್ಕೆ ಸಭಿಕರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕನಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ಉತ್ಸವದ ಮಹತ್ವವನ್ನು ವಿವರಿಸುವ ಜೊತೆಗೆ ಭವಿಷ್ಯದ ದೊಡ್ಡ ಯೋಜನೆಗಳ ಬಗ್ಗೆ ಸ್ಪಷ್ಟ ಸಂದೇಶ ನೀಡಿದರು. “ಕನಕೋತ್ಸವ ಮಾಡುತ್ತಿದ್ದೀಯಾ ಅಥವಾ ಕರ್ನಾಟಕ ಉತ್ಸವ ಮಾಡುತ್ತಿದ್ದೀಯಾ ಎಂದು ಹಲವರು ಸಚಿವರು ನನಗೆ ಫೋನ್ ಮಾಡಿ ಕೇಳಿದರು” ಎಂದು ಡಿಕೆಶಿ ಹೇಳುತ್ತ, “2027ರಲ್ಲಿ ಕನಕಪುರದಲ್ಲಿ ಕರ್ನಾಟಕ ಉತ್ಸವವನ್ನು ಅದ್ಧೂರಿಯಾಗಿ ನಡೆಸೋಣ” ಎಂದು ಘೋಷಿಸಿದರು.

ಮೇಕೆದಾಟು ಪಾದಯಾತ್ರೆಯನ್ನು ನೆನಪಿಸಿಕೊಂಡ ಡಿಕೆಶಿ, “ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷಣೆಯೊಂದಿಗೆ ಪಾದಯಾತ್ರೆ ನಡೆಸಿದ್ದೀರಿ. ಆ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ನ್ಯಾಯಾಲಯವು ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂದು ತೀರ್ಪು ನೀಡಿದೆ” ಎಂದು ಹೇಳಿದರು. ಈ ಹೋರಾಟದ ಫಲವಾಗಿ, ಮೇಕೆದಾಟು ಯೋಜನೆಗೆ ತಮ್ಮ ಮಗನ ಕೈಯಿಂದಲೇ ಪೂಜೆ ಮಾಡುವ ಭಾಗ್ಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಕನಕಪುರದಲ್ಲಿ ಶೀಘ್ರದಲ್ಲೇ ಮೆಡಿಕಲ್ ಕಾಲೇಜಿಗೆ ಭೂಮಿಪೂಜೆ ಮಾಡುವುದಾಗಿ ಡಿಕೆಶಿ ಘೋಷಿಸಿದರು. “ಯಾರೂ ಕೂಡ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಹೋಗಿ ಲಕ್ಷಾಂತರ ಹಣ ಖರ್ಚು ಮಾಡಬಾರದು. ಆಂಬುಲೆನ್ಸ್ ಚಾಲಕರು ಅಡ್ಜಸ್ಟ್‌ಮೆಂಟ್ ಮಾಡಿಕೊಂಡು ದೊಡ್ಡ ಆಸ್ಪತ್ರೆಗಳಿಗೆ ಕಳುಹಿಸುವುದು ನಡೆಯಬಾರದು” ಎಂದು ಎಚ್ಚರಿಸಿದರು. “ನನ್ನ ಕೊನೆಯ ಆಸೆ ತಾಲೂಕು ಮಟ್ಟದಲ್ಲಿ ಸರ್ಕಾರಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪಿಸುವುದು. ಅದು ಕನಕಪುರದಲ್ಲೇ ಇರಬೇಕು” ಎಂದು ಡಿಕೆಶಿ ಹೇಳಿದರು. ರಾಮನಗರದಲ್ಲಿ ಈ ವಿಚಾರವಾಗಿ ಗಲಾಟೆ ನಡೆದಿದ್ದರೂ, ರಾಮನಗರ ಹಾಗೂ ಕನಕಪುರ ಎರಡೂ ಕಡೆ ಮೆಡಿಕಲ್ ಕಾಲೇಜು ಸ್ಥಾಪಿಸುವುದಾಗಿ ಸಚಿವ ಸುರೇಶ್ ತಿಳಿಸಿದ್ದಾರೆ ಎಂದು ತಿಳಿಸಿದರು.

ಮುಂದಿನ ಚುನಾವಣೆಗೆ ರಾಯಸಂದ್ರ ಬಳಿ ನಾಮಪತ್ರ ಸಲ್ಲಿಸುವ ವೇಳೆಗೆ ಮೆಡಿಕಲ್ ಕಾಲೇಜು ಕಾಮಗಾರಿ ಪ್ರಾರಂಭಿಸುವುದಾಗಿ ಭರವಸೆ ನೀಡಿದ ಡಿಕೆಶಿ, “ಇಲ್ಲಿನ ಮಕ್ಕಳು ಬೆಂಗಳೂರು ಮಕ್ಕಳೊಂದಿಗೆ ಸ್ಪರ್ಧಿಸುವಷ್ಟು ಅವಕಾಶಗಳು ಸಿಗಬೇಕು. ಆಗ ಮಾತ್ರ ನನಗೆ ಸಮಾಧಾನ, ಆತ್ಮಕ್ಕೆ ಶಾಂತಿ ಸಿಗುತ್ತದೆ” ಎಂದು ಹೇಳಿದರು. ಮುಂದಿನ ಕನಕಪುರದ ಕನಕೋತ್ಸವವು ಕೇವಲ ಸ್ಥಳೀಯ ಉತ್ಸವವಾಗದೆ, ಇಡೀ ಕರ್ನಾಟಕದ ಉತ್ಸವವಾಗಬೇಕು ಎಂಬುದು ನನ್ನ ಆಶಯ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

Source link
ಕನಕೋತ್ಸವದಲ್ಲಿ ಗಾಯಕ ನವೀನ್ ಸಜ್ಜು ಜೊತೆಗೆ ನಾಚುತ್ತಲೇ ಹೆಜ್ಜೆ ಹಾಕಿದ ಪತ್ನಿ ಉಷಾ, ಡಿಕೆಶಿ ಫುಲ್ ಎಂಜಾಯ್