
ಒಂದು ಸಿನಿಮಾ ರಿಲೀಸ್ ಆಗಿ ಹಿಟ್ ಆದ ಬಳಿಕ ಕೆಲವರು ನಿರ್ದೇಶಕರ ಮೇಲೆ ಕೃತಿಚೌರ್ಯದ ಆರೋಪ ಹೊರಿಸಿದ ಉದಾಹರಣೆ ಇದೆ. ಕೆಲವು ನಿಜವಾದ, ಕೆಲವು ಸುಳ್ಳಾಗಿದೆ. ಈಗ ಇತ್ತೀಚೆಗೆ ರಿಲೀಸ್ ಆಗಿ ಹಿಟ್ ಆದ ಸಿನಿಮಾ ಮೇಲೆ ‘ಮಾರಿಗೋಲ್ಡ್’ ಸಿನಿಮಾ ನಿರ್ದೇಶಕ ರಾಘವೇಂದ್ರ ನಾಯಕ್ ದೀರ್ಘ ಪೋಸ್ಟ್ ಬರೆದಿದ್ದಾರೆ. ಅವರು ಆರೋಪ ಮಾಡಿದ್ದು ‘ಲವ್ ಮಾಕ್ಟೇಲ್ 3’ ಚಿತ್ರದ ಮೇಲೆ ಇರಬಹುದು ಎಂಬ ಚರ್ಚೆ ಕೂಡ ನಡೆದಿದೆ.
‘ಸಿನಿಮಾ ಬರಹಗಾರರೇ ಮತ್ತು ಭವಿಷ್ಯದ ನಿರ್ದೇಶಕರೇ, ನನ್ನದೊಂದು ಸಣ್ಣ ಕಿವಿಮಾತು: ನೀವು ಯಾವುದೇ ಕಥೆಯನ್ನು ಸಿದ್ಧಪಡಿಸಿದಾಗ, ನಂತರ ಅದನ್ನು SWA (ಚಿತ್ರಕಥೆಗಾರರ ಸಂಘ) ನಲ್ಲಿ ನೋಂದಾಯಿಸಿಕೊಳ್ಳಿ. ಕಥೆ ಮತ್ತು ಚಿತ್ರಕಥೆ ಸಿದ್ಧವಾಗುವ ಪ್ರತಿ ಕಡತವನ್ನೂ (ಫೈಲ್) ನಿಮ್ಮ ಸ್ವಂತ ಇಮೇಲ್ ಕಳುಹಿಸಿ ಸುರಕ್ಷಿತವಾಗಿಟ್ಟುಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ, ನೀವು ಯಾರಿಗಾದರೂ ಕಥೆಯನ್ನು ವಿವರಿಸುವ (ನಿರೂಪಣೆ) ಮೊದಲು ಅದರ ಆಡಿಯೋ ರೆಕಾರ್ಡ್ ಮಾಡಿಕೊಳ್ಳುವ ತರಬೇತಿ. ಕಥೆ ಹೇಳುವ ಮುನ್ನ ನಡೆಸುವ ಸಂಭಾಷಣೆ ಹಾಗೂ ಕಥೆ ಮುಗಿದ ನಂತರದ ಚರ್ಚೆಗಳೂ ಅದರಲ್ಲಿ ಇರಲಿ. ಮೀಟಿಂಗ್ ಮುಗಿದ ಕೂಡಲೇ ಆ ಆಡಿಯೋ ಫೈಲ್ ಅನ್ನು ನಿಮಗೆ ನೀವೇ ಇಮೇಲ್ ಮಾಡಿಕೊಳ್ಳಿ. ಆಗ ನೀವು ನಾಯಕನಿಗಾಗಲಿ, ನಿರ್ಮಾಪಕರಿಗಾಗಲಿ ಅಥವಾ ನಿರ್ದೇಶಕರಿಗಾಗಲಿ ಕಥೆ ವಿವರಿಸಿರುವಿರಿ ಎಂಬುದಕ್ಕೆ ಭದ್ರವಾದ ದಾಖಲೆ ಇರುತ್ತದೆ’ ಎಂದು ರಾಘವೇಂದ್ರ ನಾಯಕ್ ಬರಹ ಆರಂಭಿಸಿದ್ದಾರೆ.
‘ಇಂತಹ ಮುನ್ನೆಚ್ಚರಿಕೆ ವಹಿಸಿದ ಕಾರಣ ಇಂದು ನನಗೆ ದೊಡ್ಡ ದ್ರೋಹವಾಗಿದೆ. ನನ್ನ ಕಥೆ ಇಡೀ ದ್ವಿತೀಯಾರ್ಧವನ್ನು (ಸೆಕೆಂಡ್ ಹಾಫ್) ಯೂನಿಯನ್ ಸಿನಿಮಾ ಮಾಡಿ ಬಿಡುಗಡೆಗೊಳಿಸಿದ್ದಾರೆ; ಆ ಸಿನಿಮಾ ಈಗ ಯಶಸ್ವಿಯಾಗಿ ಪ್ರದರ್ಶನವನ್ನೂ ಕಾಣುತ್ತಿದೆ. ಈ ನನ್ನ ಕಥೆಯು ನನ್ನ ಆಪ್ತ ವಲಯದ ಬಹಳಷ್ಟು ನಿರ್ಮಾಪಕರಿಗೆ, ತಂತ್ರಜ್ಞರಿಗೆ ಮತ್ತು ಆಸಕ್ತರಿಗೆ ತಿಳಿದಿದೆ. ಕನ್ನಡದ ಖ್ಯಾತ ನಿರ್ದೇಶಕರು ಮತ್ತು ನಿರ್ಮಾಪಕರು ಈ ಕಥೆಯನ್ನು ಸಿನಿಮಾ ಮಾಡಲು ನಿರ್ಧರಿಸಿ, ನನಗೆ ಮುಂಗಡ ಸಂಭಾವನೆಯನ್ನೂ ನೀಡಿದ್ದರು. ಇದೇ ನಿರ್ಮಾಪಕ-ನಿರ್ದೇಶಕರ ಜೊತೆಗೂಡಿ ಎರಡು ವರ್ಷಗಳ ಹಿಂದೆಯೇ ನಾನು ಆ ‘ನಿರ್ದೇಶಕ, ನಿರ್ಮಾಪಕ ಕಮ್ ನಟ’ನಿಗೆ ಕಥೆ ಹೇಳಿದ್ದೇನೆ’ ಎಂದು ಅವರು ಆರೋಪಿಸಿದ್ದಾರೆ.
‘ನನ್ನ ಬಳಿ ಆ ಕಥೆ ನನ್ನದೇ ಎನ್ನುವುದಕ್ಕೆ ಸೂಕ್ತ ದಾಖಲೆಗಳಿವೆ, “ನಾನು ಅವರಿಗೆ ಈ ಕಥೆಯನ್ನೇ ಹೇಳಿದ್ದೇನೆ” ಎನ್ನುವುದಕ್ಕೆ ಪೂರಕ ದಾಖಲೆಗಳಿಲ್ಲ. ಈ ತಾಂತ್ರಿಕ ನಾನು ಅಸಹಾಯಕನಾಗಿ ಸುಮ್ಮನಿರಬೇಕಾಗಿದೆ. ಭವಿಷ್ಯದಲ್ಲಿ ಬೇರೆ ಯಾವ ಬರಹಗಾರರಿಗೂ ಇಂತಹ ಮೋಸ ಆಗಬಾರದು ಎಂಬ ಸದಾಶಯದಿಂದ ಮತ್ತು ಅವರು ಮುನ್ನೆಚ್ಚರಿಕೆ ವಹಿಸಲು ಈ ಪೋಸ್ಟ್ ಹಾಕುತ್ತಿದ್ದಾರೆ. ದಯವಿಟ್ಟು ಬರಹಗಾರರೇ, ನಿಮ್ಮ ಕಲ್ಪನೆಗೆ ಕನ್ನ ಬೀಳದಂತೆ ಜಾಗ್ರತೆ ವಹಿಸಿ. ನಿಮಗೆ ಶುಭವಾಗಲಿ’ ಎಂದು ಅವರು ಬರಹ ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ: ಭಾನುವಾರ ಭರ್ಜರಿ ಗಳಿಗೆ ಮಾಡಿದ ‘ಲವ್ ಮಾಕ್ಟೇಲ್ 3’ ಸಿನಿಮಾ; ಒಟ್ಟಾರೆ ಕಲೆಕ್ಷನ್ ಎಷ್ಟು?
ಇತ್ತೀಚೆಗೆ ರಿಲೀಸ್ ಆಗಿ ಹಿಟ್ ಆದ ಕನ್ನಡದ ಸಿನಿಮಾ ಎಂದರೆ ಅದು ‘ಲವ್ ಮಾಕ್ಟೇಲ್ 3’. ಜೊತೆಗೆ, ನಿರ್ದೇಶಕ, ನಿರ್ಮಾಪಕ ಕಮ್ ನಟ ಎಂದರೆ ಅದು ಡಾರ್ಲಿಂಗ್ ಕೃಷ್ಣ ಇರಬಹುದು ಎಂದು ಹೇಳಿದ್ದಾರೆ. ಇದಕ್ಕೆ ಕೃಷ್ಣ ಅವರ ಕಡೆಯಿಂದ ಯಾವ ರೀತಿಯ ಸ್ಪಷ್ಟನೆ ಬರುತ್ತದೆ ಎಂದು ನೋಡಬೇಕಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.