ಕನ್ನಡ, ಸಂಸ್ಕೃತ, ಹಿಂದಿಯಲ್ಲಿ ‘ಪದ್ಮಗಂಧಿ’ ಟ್ರೇಲರ್: ಕಮಲದ ಹೂವಿನ ಕುರಿತ ಸಿನಿಮಾ

ಕನ್ನಡ, ಸಂಸ್ಕೃತ, ಹಿಂದಿಯಲ್ಲಿ ‘ಪದ್ಮಗಂಧಿ’ ಟ್ರೇಲರ್: ಕಮಲದ ಹೂವಿನ ಕುರಿತ ಸಿನಿಮಾ


ಸುಚೇಂದ್ರ ಪ್ರಸಾದ (ಸುಚೇಂದ್ರ ಪ್ರಸಾದ್) ಅವರಿಗೆ ಚಿತ್ರರಂಗದಲ್ಲಿ ಇರುವ ಅಪಾರ ಅನುಭವ. ನಟನೆಗಾಗಿಯೇ ತೆರೆಹಿಂದಿನ ಕೆಲಸಗಳನ್ನು ಕೂಡ ಅವರು ಚೆನ್ನಾಗಿ ಬಲ್ಲರು. ಈಗ ಅವರು ‘ಪದ್ಮಗಂಧಿ’ (ಪದ್ಮಗಂಧಿ) ಸಿನಿಮಾಗೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ. ವಿಶೇಷ ಏನೆಂದರೆ, ಈ ಸಿನಿಮಾ ಕನ್ನಡದ ಜೊತೆಗೆ ಸಂಸ್ಕೃತ ಮತ್ತು ಹಿಂದಿ ಭಾಷೆಯಲ್ಲಿ ಕೂಡ ಮೂಡಿಬರುತ್ತಿದೆ. ಇತ್ತೀಚೆಗೆ ಮೂರು ಭಾಷೆಗಳಲ್ಲಿ ಟ್ರೇಲರ್ ಮತ್ತು ಗೀತೆಗಳನ್ನು ಬಿಡುಗಡೆ ಮಾಡಲಾಗಿದೆ. ಕಮಲದ ಹೂವಿನ ಬಗ್ಗೆ ಇಡೀ ‘ಪದ್ಮಗಂಧಿ’ ಸಿನಿಮಾ ಇರಲಿದೆ ಎಂಬುದು ವಿಶೇಷ.

ಮಾಜಿ ಎಂಎಲ್‌ಸಿ, ಅಂಕಣಗಾರ್ತಿ, ಸಂಸ್ಕೃತ ಭಾಷೆಯ ಬಗ್ಗೆ ಅಧ್ಯಯನ ನಡೆಸುತ್ತಿರುವ ನಿವೃತ ಪ್ರೊಫೆಸರ್ ಎಸ್.ಆರ್. ಲೀಲಾ ಅವರ ಧ್ವನಿಯಲ್ಲಿ ‘ಪದ್ಮಗಂಧಿ’ ಸಿನಿಮಾ ಮೂಡಿಬರುತ್ತಿದೆ. ಅವರೇ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಕೆಲಸಗಳು ಮುಗಿದಿದ್ದು, ಶೀಘ್ರದಲ್ಲೇ ರಿಲೀಸ್ ಆಗಲಿದೆ. ‘ಸುಚಿತ್ ಫಿಲ್ಮ್ಸ್’ ಮೂಲಕ ವೆಂಕಟ್ ಗೌಡ ಅವರು ಬಿಡುಗಡೆ ಮಾಡಲಿದ್ದಾರೆ.

‘ಪದ್ಮಗಂಧಿ’ ಸಿನಿಮಾದ ಪಾತ್ರವರ್ಗದ ಬಗ್ಗೆ ಚಿತ್ರತಂಡದ ಮಾಹಿತಿ ಹಂಚಿಕೊಂಡಿದೆ. ಕುಮಾರಿ ಮಹಾಪದ್ಮ ಅವರು ಈ ಸಿನಿಮಾದಲ್ಲಿ ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದಾರೆ. ಗುರುಮಾತೆ ಪಾತ್ರದಲ್ಲಿ ಉಡುಪಿಯ ಪರಿಪೂರ್ಣ ಚಂದ್ರಶೇಖರ್ ಅವರು ಅಭಿನಯಿಸಿದ್ದಾರೆ. ಡಾ. ದೀಪಕ್ ಪರಮಶಿವನ್ ಅವರು ಸಂಗೀತ ನೀಡಿದ್ದಾರೆ. ಮನು ಯಾಪ್ಲಾರ್, ನಾಗರಾಜ್ ಅದ್ವಾನಿ, ಗಿರಿಧರ್ ದಿವಾನ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಎನ್. ನಾಗೇಶ್ ನಾರಾಯಣಪ್ಪ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

‘ಪದ್ಮಗಂಧಿ’ ಸಿನಿಮಾದ ಟ್ರೇಲರ್:

ಶತಾವಧಾನಿ ಡಾ. ಆರ್. ಗಣೇಶ್, ಮುಕ್ತಿನಾಗ ದೇವಸ್ಥಾನದ ಧರ್ಮಾಧಿಕಾರಿ ಡಾ. ಗೌರಿ ಸುಬ್ರಹ್ಮಣ್ಯ, ಡಾ. ಪ್ರೇಮಾ, ಡಾ. ಹೇಮಂತ್ ಕುಮಾರ್, ಆಚಾರ್ಯ ಮೃತ್ಯುಂಜಯ ಶಾಸ್ತ್ರಿ, ಜಿ.ಎಲ್. ಭಟ್ (ಶಿಲ್ಪಜ್ಞ), ಪಂಡಿತ ಪ್ರಸನ್ನ ವೈದ್ಯ, ಡಾ. ದೀಪಕ್ ಪರಮಶಿವನ್, ಹೇಮಂತ ಕುಮಾರ ಜಿ. ಅವರು ಕೂಡ ‘ಪದ್ಮಗಂಧಿ’ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ‘ಇದರಿಂದ ಮಕ್ಕಳು ಎಷ್ಟು ನಲುಗಬಹುದು ಎಂದು ಯೋಚಿಸಿದಾಗ ಮನಸ್ಸು ವಿಚಲಿತವಾಗುತ್ತದೆ’: ಸುಚೇಂದ್ರ ಪ್ರಸಾದ್

ನಿರ್ಮಾಪಕಿ ಎಸ್.ಆರ್. ಲೀಲಾ ಅವರು ಈ ಸಿನಿಮಾ ಬಗ್ಗೆ ಮಾತಾಡಿದ್ದಾರೆ. ‘ಈ ಚಿತ್ರವು ಆದಿಯಿಂದ ಅಂತ್ಯದವರೆಗೂ ಪದ್ಮಗಂಧಿಯ ಪರಿಮಳ ಪಸರಿಸುತ್ತದೆ. ದೈವಿಕ ಗಂಧ ಮೆತ್ತಿಕೊಂಡಿರುವ ಕಮಲದ ಹೂವಿನ ಬಗ್ಗೆಯೇ ಕಥೆ ಇದೆ. ನಮ್ಮಲ್ಲಿ ದೈವಿಕ ಅನುಭೂತಿ ಸ್ಪುರಿಸುವ ಕಮಲ ಪುಷ್ಪದ ಬಗ್ಗೆ ಆಳವಾಗಿ ಅರಿವಿನ ಪರಧಿಯನ್ನು ವಿಸ್ತರಿಸಿಕೊಳ್ಳುತ್ತಿದೆ, ಅದರ ಅಗಾಧತೆ ಮೊಗೆದರೂ ಮುಗಿಯದ ಅಕ್ಷಯ ಪಾತ್ರದಂತೆ ಭಾಸವಾಗತೊಡಗಿದೆ. ಇದೆಲ್ಲವನ್ನು ಸಂಶೋಧಿಸಿ ವಿಷಯಗಳನ್ನು ಸನ್ನಿವೇಶಗಳಲ್ಲಿ ಕಟ್ಟಿಕೊಡಲಾಗಿದೆ. ನಿರ್ದೇಶಕರು ನನ್ನ ಮನಸ್ಸಿನಲ್ಲಿ ಇರುವಂತೆ ತೆರೆ ಮೇಲೆ ತೋರಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *