ಬೆಂಗಳೂರು, ನವೆಂಬರ್ 28: ಕರ್ನಾಟಕ ಕಾಂಗ್ರೆಸ್ ಅಧಿಕಾರದ ಚರ್ಚೆ ತೀವ್ರಗೊಂಡಿರುವ ಸಂದರ್ಭದಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಗುರುವಾರ ಸಂಜೆ ದಿಢೀರ್ ಆಗಿ ಮುಂಬೈಗೆ ತೆರಳಿದ್ದಾರೆ. ಡಿಕೆ ಶಿವಕುಮಾರ್ ಅವರ ಮುಂಬೈ ಪ್ರವಾಸ, ತೀವ್ರ ಕುತೂಹಲ ಮೂಡಿಸಿದೆ. ಈ ಮಧ್ಯೆ, ನಾನು ಯಾವುದಕ್ಕೂ ಆತುರ ಪಡಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ದಿಢೀರ್ ಮುಂಬೈ ಭೇಟಿ ಸಂಚಲನ ಸೃಷ್ಟಿಸಿದ್ದು, ಖಾಸಗಿ ಕಾರ್ಯಕ್ರಮ, ಬೇರೆಯದೇ ತಂತ್ರವೋ ಎಂಬ ಪ್ರಶ್ನೆ ಮೂಡಿದೆ.
ಈ ಮಧ್ಯೆ, ಅಧಿಕಾರ ಹಂಚಿಕೆಗಾಗಿ ಕುರ್ಚಿ ಕದನ ಇದೀಗ ಅಂತಿಮ ಹಂತ ತಲುಪಿದೆ. ಈ ಸಮಸ್ಯೆಗೆ ಇತಿಶ್ರೀ ಹಾಡಲು ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಮಧ್ಯಪ್ರವೇಶಿಸಿದೆ. ನವೆಂಬರ್ 29 ರಂದು ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಸಂಧಾನ ಸಭೆ ನಡೆಯುವ ನಿರೀಕ್ಷೆಯಿದೆ. ಈ ಸಭೆಗೆ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರಿಗೂ ಬುಲಾವ್ ನೀಡಿದ ಮೂಲಗಳು ತಿಳಿಸಿವೆ.
ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಗ್ಗೆ ಸಕಾರಾತ್ಮಕ ಮತ್ತು ನಕಾರಾತ್ಮಕ ಅಭಿಪ್ರಾಯಗಳನ್ನು ಹಾಗೂ ಜಾತಿವಾರು ಅಂಕಿಅಂಶಗಳನ್ನು ಸಂಗ್ರಹಿಸಿದ್ದಾರೆ. ಡಿಕೆ ಮತ್ತು ಸಿಎಂ ಬಣಗಳ ಅಧಿಕಾರ ಹಂಚಿಕೆಯ ಬಗ್ಗೆ ಪರ ವಿರೋಧ ವಾದಗಳನ್ನು ಮಂಡಿಸಿ, ಶನಿವಾರ ನಡೆಯುವ ಸಭೆಯಲ್ಲಿ ಎಲ್ಲ ಗೊಂದಲಗಳಲ್ಲಿ ತೆರೆ ಬೀಳುವ ನಿರೀಕ್ಷೆಯಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ