ಬೆಳಗಾವಿ, (ಡಿಸೆಂಬರ್ 09): ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಇಂದು (ಡಿಸೆಂಬರ್ 09) ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಅಂತ್ಯಗೊಂಡಿದ್ದು, ಅಧಿವೇಶನದಲ್ಲಿ ವಿಪಕ್ಷಗಳಿಗೆ ಉತ್ತರ ನೀಡಬೇಕಾದ ಬಗ್ಗೆ ಚರ್ಚೆಯಾಗಿದೆ. ಪ್ರಮುಖವಾಗಿ ಸಭೆಯಲ್ಲಿ ಸ್ವಪಕ್ಷದ ಶಾಸಕರೇ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು… ಗ್ಯಾರಂಟಿ ಯೋಜನೆಗಳನ್ನು ಮಾತ್ರ ನಂಬಿದರೆ ಆಗದು. ಗ್ಯಾರಂಟಿ ಯೋಜನೆ ಬಿಟ್ಟು ನಮಗೆ ಅಭಿವೃದ್ಧಿ ಯೋಜನೆಗಳನ್ನು ಕೊಡಿ. ಜನರ ಗ್ಯಾರಂಟಿ ಯೋಜನೆಗಳ ಬಗ್ಗೆ ಶ್ಲಾಘಿಸಿ ಮಾತನಾಡುತ್ತಿಲ್ಲ. ಗ್ಯಾರಂಟಿಗಳನ್ನು ನಂಬಿಕೊಂಡು ಚುನಾವಣೆ ಎದುರಿಸಲು ಸಾಧ್ಯವಿಲ್ಲ. ದೇವಸ್ಥಾನ, ಸಭಾಭವನ ನಿರ್ಮಾಣ, ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಸಭೆಯಲ್ಲಿ ಶಾಸಕರು ನಿಲುಗಡೆ ಹೊಂದಿದ್ದಾರೆ.
ಈ ಸಭೆಯಲ್ಲಿ ಶಾಸಕರ ಅಹವಾಲು ಆಲಿಸಲು ಸಿಎಂ, ಡಿಸಿಎಂ ಅವಕಾಶ ನೀಡಿದ್ದು, ಈ ವೇಳೆ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ನಂಜೇಗೌಡ ಮಾತನಾಡಿ, ನೀವು ಅನೌನ್ಸ್ ಮಾಡಿದ ಅನುದಾನ ಸರಿಯಾಗಿ ಬಂದಿಲ್ಲ. ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿಲ್ಲ, ಗ್ಯಾರಂಟಿ ಒಂದೇ ಸಾಲದು. ಅಭಿವೃದ್ಧಿ ಮಾಡಬೇಕು. ಗ್ಯಾರಂಟಿ ಅಂದ್ರೆ ಆಗಲ್ಲ ಎಂದು ಮಾಲೂರು ಕ್ಷೇತ್ರದ ಕಾಂಗ್ರೆಸ್ ನ ನಂಜೇಗೌಡ ಅಸಮಾಧಾನ ಹೊರಹಾಕಿದ್ದಾರೆ.ಇನ್ನು ನಂಜೇಗೌಡರ ಮಾತಿಗೆ ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ ಸಹ ಧ್ವನಿಗೂಡಿಸಿದ್ದು, ಅಧಿಕಾರಿಗಳು ಯಾರಿಗೂ ಹೆದರುತ್ತಿಲ್ಲ. ಎಲ್ಲಾ ಅರ್ಜಿಗಳನ್ನು ಕಳುಹಿಸುತ್ತಾರೆ ಶಾಸಕರ ಕಡತಗಳನ್ನೇ ಪೆಂಡಿಂಗ್ ಇಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
MLC ಸುಧಾಮ್ ದಾಸ್ ಮಾತನಾಡಿ, ಸರ್ಕಾರದ ವಿರುದ್ಧವೇ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ, ಅಧಿಕಾರಿಗಳನ್ನು ಕೇಳೋರು ಯಾರೂ ಇಲ್ಲದಂತೆ ಆಗಿದೆ. ಹೀಗೆ ಮುಂದುವರಿದರೆ ಕಷ್ಟ.