
ಹುಬ್ಬಳ್ಳಿ, ಮಾರ್ಚ್ 11: ಕಳೆದ ಫೆಬ್ರವರಿ ತಿಂಗಳ ವೇತನ ಇನ್ನೂ ಪಾವತಿ ಆಗದ ಹಿನ್ನೆಲೆ ಪೊಲೀಸ್ ಸಿಬ್ಬಂದಿ ಪರದಾಟ ನಡೆಸಬೇಕಾದ ಪ್ರಸಂಗ ಎದುರಾಗಿದೆ. ತಿಂಗಳ ಆರಂಭದಲ್ಲಿಯೇ ಜಮೆ ಆಗುತ್ತಿದ್ದ ವೇತನ ಇಲ್ಲಿಯವರೆಗೂ ಜಮೆ ಆಗಿಲ್ಲ. ಹೀಗಾಗಿ ಸಾವಿರಾರು ಮಂದಿ ಪೊಲೀಸ್ ಸಿಬ್ಬಂದಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಳ ವಿಳಂಬದಿಂದ ಮನೆ ಬಾಡಿಗೆ, ಬ್ಯಾಂಕ್ ಸಾಲದ ಕಂತುಗಳು, ಮಕ್ಕಳ ಶಿಕ್ಷಣ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಮತ್ತು ಎಸ್‌ಪಿ ವ್ಯಾಪ್ತಿಯಲ್ಲಿರುವ 3,200 ಸಿಬ್ಬಂದಿಗೂ ಇನ್ನೂ ವೇತನ ಬಂದಿಲ್ಲ.
ಬಿ.ವೈ. ವಿಜಯೇಂದ್ರ ಕಿಡಿ
ವಿಜಯೇಂದ್ರ ಪೋಸ್ಟ್
ಪೊಲೀಸ್ ಸಿಬ್ಬಂದಿಗೆ ಸರ್ಕಾರ ಇನ್ನೂ ವೇತನ ಪಾವತಿಸದ ವಿಚಾರವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿ ಕಾರಿದ್ದಾರೆ. ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಅವರು, ಈ ಬಾರಿ 4.48 ಲಕ್ಷ ಕೋಟಿ ರೂ ಗಾತ್ರದ ಅತಿ ದೊಡ್ಡ ಬಜೆಟ್ ಮಂಡಿಸಿ ರಾಜ್ಯದ ಆರ್ಥಿಕತೆ ದೃಢಪಟ್ಟಿದೆ ಎನ್ನುವ ಮರೀಚಿಕೆಯಲ್ಲಿ ವಿಹರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಆದರೆ ಬಜೆಟ್ ಪುಸ್ತಕದಲ್ಲಿ ನೀವು ಬರೆದುಕೊಂಡ ಅಂಕಿ-ಸಂಖ್ಯೆಗಳ ಆಚೆಗೆ, ಮಾಧ್ಯಮ ಪ್ರಪಂಚದ ಕಟುಸತ್ಯವನ್ನು ವರದಿ ಬಯಲು ಮಾಡಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಯುವ ಪೊಲೀಸ್ ಸಿಬ್ಬಂದಿಗಳಿಗೆ ಹಿಂದಿನ ತಿಂಗಳ ವೇತನವನ್ನು ನೀಡಲು ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದರೆ ನಿಮ್ಮ ಬಜೆಟ್ ಎಷ್ಟು ಅವಾಸ್ತವಿಕವಾಗಿದೆ ಎಂದು ಹೇಳಬೇಕೇ? ಪೊಲೀಸ್ ಸಿಬ್ಬಂದಿಗೆ ವೇತನ ನೀಡಲು ನಿಮ್ಮ ಸರ್ಕಾರದ ಬಳಿ ಹಣವಿಲ್ಲ, ಆದರೂ ನಿಮ್ಮ ಒಣ ಪ್ರತಿಷ್ಠೆಯ ಮಾತುಗಳಿಗೆ ಬರವಿಲ್ಲದಿರುವುದು ನಾಚಿಕೆಗೇಡಿನ ಸಂಗತಿಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಆಸ್ತಿ ತೆರಿಗೆ ಪಾವತಿಗೂ EMI?; ಜಿಬಿಎಯಿಂದ ಬೆಂಗಳೂರಿಗರಿಗೆ ಸಿಗುತ್ತಾ ಗುಡ್ ನ್ಯೂಸ್?
ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ವಿಜಯನಗರ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಾವಿರಾರು ಪೊಲೀಸರು ಸಂಬಳವಿಲ್ಲದೆ ಕಂಗಾಲಾಗಿದ್ದಾರೆ. ಸುಳ್ಳು ಪ್ರಚಾರಕ್ಕೆ ಕೋಟಿ ಕೋಟಿ ಸುರಿಯುವ ಈ ಕಾಂಗ್ರೆಸ್ ಸರ್ಕಾರಕ್ಕೆ, ಹಗಲಿರುಳು ಶ್ರಮಿಸುವ ನಮ್ಮ ರಕ್ಷಕರಿಗೆ ಹಣವಿಲ್ಲ. ಇದು ಕೇವಲ ತಾಂತ್ರಿಕ ವಿಳಂಬವಲ್ಲ, ರಾಜ್ಯದ ಆರ್ಥಿಕ ದಿವಾಳಿತನದ ಮತ್ತೊಂದು ಸಾಕ್ಷಿ. ಒಂದು ಕಡೆ ದಾಖಲೆ ಮೊತ್ತದ ಬಜೆಟ್ ಘೋಷಣೆ, ಮತ್ತೊಂದು ಕಡೆ ಸಂಬಳಕ್ಕಾಗಿ ಪೊಲೀಸರ ಪರದಾಟ . ಈ ವೈರುಧ್ಯವೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ. ಬಜೆಟ್ ನಲ್ಲಿ ಅಂಕಿ-ಅಂಶಗಳ ಮೂಲಕ ಮರಳು ಮಾಡುವ ನಿಮ್ಮ ಅನಗತ್ಯ, ಅವಾಸ್ತವಿಕ ಸರ್ಕಸ್ ಬಯಲಾಗಿದೆ. ಕಾಗದದ ಮೇಲಿನ ಘೋಷಿತ ಅಂಕಿ-ಅಂಶ, ಜನರ ಸ್ವಾಭಿಮಾನದ ಬದುಕು ಮುಖ್ಯ. ನಿಮಗೆ ಯಾವುದೇ ಕಾರಣವಿರಲಿ, ಈ ಕೂಡಲೇ ರಾಜ್ಯದ ಪೊಲೀಸ್ ಸಿಬ್ಬಂದಿಯ ಬಾಕಿ ವೇತನ ಬಿಡುಗಡೆ ಮಾಡಿ ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.