
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ 369 ವಾರ್ಡ್ಗಳಿಗೆ ಮೀಸಲಾತಿಯನ್ನು ರಾಜ್ಯ ಸರ್ಕಾರ ನಿಗದಿಪಡಿಸಿ ಕರಡು ಅಧಿಸೂಚನೆ ಪ್ರಕಟಿಸಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ಹಿನ್ನಲೆಯಲ್ಲಿ, ವಾರ್ಡ್ ವಾರು ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ನಿಗದಿಪಡಿಸಲಾಗಿದೆ.
ಕಳೆದ ಡಿಸೆಂಬರ್ 19ರಂದು ರಾಜ್ಯ ಸರ್ಕಾರ, ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್ಗಳಿಗೆ ಮೀಸಲಾತಿ ನಿಗದಿಪಡಿಸುವ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿ, ಅದರಂತೆ ಮೀಸಲಾತಿ ಪಟ್ಟಿ ಸಿದ್ಧಪಡಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿತ್ತು. ಸರ್ಕಾರದ ಸೂಚನೆಯಂತೆ ಈಗಾಗಲೇ ಪ್ರತಿ ವಾರ್ಡ್ನ ಜನಸಂಖ್ಯೆ ಆಧಾರದಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳು ಹಾಗೂ ಮಹಿಳಾ ಮೀಸಲಾತಿಯನ್ನು ಒಳಗೊಂಡ ಕರಡು ಪಟ್ಟಿ ಸಿದ್ಧಪಡಿಸಲಾಗಿದೆ.