Headlines

ಉತ್ತರ ಕನ್ನಡದ ನದಿ ತಿರುವು ಯೋಜನೆಗಳಿಗೆ ವಿರೋಧ ಯಾಕೆ?: ಪ್ರಮುಖ 11 ಕಾರಣ ಇಲ್ಲಿವೆ

ಉತ್ತರ ಕನ್ನಡದ ನದಿ ತಿರುವು ಯೋಜನೆಗಳಿಗೆ ವಿರೋಧ ಯಾಕೆ?: ಪ್ರಮುಖ 11 ಕಾರಣ ಇಲ್ಲಿವೆ


ಬೆಂಗಳೂರು, ಡಿಸೆಂಬರ್ 11: ಉತ್ತರ ಕನ್ನಡದ ಬೇಡ್ತಿ, ಅಘನಾಶಿನಿ ನದಿ ತಿರುವು ಯೋಜನೆ ಹಾಗೂ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗಳನ್ನು ಕೈಬಿಡುವಂತೆ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸಿಎಂಗೆ ಸೂಚಿಸಿದೆ. ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿತ್ತು. ಆ ಬೆನ್ನಲ್ಲೇ ಈ ಯೋಜನೆಗಳು ಯಾಕೆ ಬೇಡ ಎಂಬ ಕಾರಣ ಸಮೇತ ವಿವರಣೆ ನೀಡಿದೆ.

1. ಹೆಚ್ಚುವರಿ ನೀರಿನ ಲಭ್ಯತೆ ಇರದಿರುವರು

ಬೇಡ್ತಿ-ಅಘನಾಶಿನಿ ನದಿಗಳಲ್ಲಿ ಜುಲೈನಿಂದ ಸಪ್ಟೆಂಬರ್ ತಿಂಗಳ ಮಳೆಗಾಲದ ಅವಧಿಯಲ್ಲಿ ಮಾತ್ರ ಮಳೆನೀರಿನ ಪ್ರವಾಹ ಇರುತ್ತದೆ. ಉಳಿದ ಒಂಬತ್ತು ತಿಂಗಳು ಇರುವ ನೀರಿನ ಹರಿವು ತೀರಾ ಕಡಿಮೆ, ಹೀಗಾಗಿ, ಹೆಚ್ಚುವರಿ ನೀರಿದೆ ಎಂಬ ಲೆಕ್ಕವೇ ತಪ್ಪು.

2. ಸ್ವಾಭಾವಿಕ ಪ್ರವಾಹ (ಪರಿಸರ ಹರಿವು) ನಾಶ

ಬೇಡ್ತಿ ಮತ್ತು ಅಘನಾಶಿನಿ ನದಿಗಳು ಉತ್ತರ ಕನ್ನಡ – ಅಲ್ಲಿಯ ಘಟ್ಟದ ​​ಮೇಲಿನ ಹಾಗೂ ಕೆಳಗಿನ ಪ್ರದೇಶಗಳ ಜನವಸತಿ, ಕೃಷಿಭೂಮಿ, ಕಾಡು, ಗೋಮಾಳ ಕೆರೆಗಳು ಇವುಗಳಿಗೆ ನಿರಂತರ ನೀರು ಒದಗಿಸುವ ಜಲಮೂಲ. ಈ ಯೋಜನೆಗಳಿಂದ ಈ ನದಿಗಳಲ್ಲಿ ಹರಿಯಬೇಕಾದ ಕನಿಷ್ಠ ಸ್ವಾಭಾವಿಕ ಪ್ರವಾಹವೂ (ಪರಿಸರ ಹರಿವು) ಕಣ್ಮರೆಯಾಗಿ, ಹೊಳೆ- ತೊರೆ-ಕೆರೆಗಳ ಅಂತರ್ಜಲ ಮರುಪೂರಣ ಕುಸಿಯುತ್ತದೆ. ಆಮೂಲಕ ನದಿ ಕಣಿವೆ ಪ್ರದೇಶಗಳಲ್ಲಿ ಗಂಭೀರ ನೀರಿನ ಕೊರತೆ ಉಂಟಾಗಲಿದೆ.

3. ಪಶ್ಚಿಮಘಟ್ಟ ಜೀವವೈವಿಧ್ಯ ನಾಶ ಹಾಗೂ ವನ್ಯ ಜೀವಿ-ಮಾನವ ಸಂಘರ್ಷ

ದಕ್ಷಿಣಭಾರತದ ಪರಿಸರ ಮತ್ತು ಜಲಮೂಲ ತಾಣವಾದಘಟ್ಟದ ​​ಹೃದಯಭಾಗದಂತಿರುವ ಉತ್ತರ ಕನ್ನಡ ಜಿಲ್ಲೆ ಬೇಡ್ತಿ ಹಾಗೂ ಅಘನಾಶಿನಿ ತಪ್ಪಲುಗಳಲ್ಲಿ ಸುರಂಗಗಳು, ಕಾಲುವೆಗಳು, ಅಣೆಕಟ್ಟು ಪಶ್ಚಿಮ ನದಿಗಳ ಕಾಮಗಾರಿಗಳು, ಅನನ್ಯ ಕಾಡು-ಗೋಮಾಳ-ಕೃಷಿಭೂಮಿ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತವೆ, ಅತ್ಯಮೂಲ್ಯ ಜೀವವೈವಿಧ್ಯಗಳು ನಾಶವಾಗುತ್ತವೆ. ಅರಣ್ಯ ಛಿದ್ರೀಕರಣಗೊಂಡು ವನ್ಯಜೀವಿ ಆವಾಸಸ್ಥಾನಗಳು ಮತ್ತಷ್ಟು ನಾಶವಾಗಿ, ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಾಗುತ್ತದೆ.

4. ಭೂಕುಸಿತದ ಅಪಾಯ ಹೆಚ್ಚು

ಬೃಹತ್ ಯೋಜನೆಗಳ ಕಾಮಗಾರಿಗಳಿಂದ ಮಲೆನಾಡಿನ ಇಳಿಜಾರಿನ ಗುಡ್ಡ-ಕಣಿವೆಗಳ ಕಾಡು ಛಿದ್ರವಾಗಿ, ಅತ್ಯಮೂಲ್ಯ ಮೇಲ್ಮಣ್ಣು ನಾಶ ವಸ್ತು. ಇದರಿಂದ ಮಳೆಗಾಲದಲ್ಲಿ ಭಾರಿ ಭೂಕುಸಿತದ ಸಾಧ್ಯತೆಗಳು ಹೆಚ್ಚಾಗುತ್ತವೆ.

5. ಕರಾವಳಿ ಪರಿಸರದ ನಾಶ

ಈ ಯೋಜನೆಗಳಿಂದ ಈ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾದಾಗ, ಅಂಕೋಲಾ ಪ್ರದೇಶದ ಗಂಗಾವಳಿ (ಬೆಡ್ತಿ ನದಿಯ ಕೆಳಹರಿವಿನ) ಹಾಗೂ ಕುಮಟಾ ನದಿಯ ಅಘನಾಶಿನಿ ನದಿ ತಪ್ಪಲಿನ ಪ್ರದೇಶಗಳ ಅಳಿವೆಗಳಿಗೆ ನೀರಿನ ಕೊರತೆಯಾಗಿ, ಅಲ್ಲಿನ ಕಾಂಡ್ಲಾ ಕಾಡು ನಾಶವಾಗುತ್ತದೆ. ಆ ಮೂಲಕ ಜಲಚರಗಳ ವಂಶಾಭಿವೃದ್ಧಿ ತಾಣ ವಿನಾಶವಾಗುತ್ತದೆ. ಇದರಿಂದ, ತಲೆದೋರಿರುವ ಕರಾವಳಿಯ ಮತ್ಯಕ್ಷಾಮ, ಇನ್ನಷ್ಟು ಬಿಗಡಾಯಿಸಿ, ಮೀನುಗಾರರ ಜೀವನೋಪಾಯ ಮಾಯವಾಗುತ್ತದೆ.

ಇದನ್ನೂ ಓದಿ: ಉತ್ತರ ಕನ್ನಡದ ನದಿ ತಿರುವು ಯೋಜನೆಗಳನ್ನ ಕೈಬಿಡಿ; ಸಿಎಂ ಸಿದ್ದರಾಮಯ್ಯಗೆ ಮನವಿ

6. ಕರಾವಳಿಯ ಒಳಪ್ರದೇಶಗಳಿಗೆ ಉಪ್ಪುನೀರು ನುಗ್ಗುವಿಕೆ

ನದಿಯ ಹರಿವು ಕಡಿಮೆಯಾದಾಗ ಸಮುದ್ರದ ಉಪ್ಪು ನೀರು ನದಿಗಳ ಮೂಲಕ ಕರಾವಳಿಯ ಒಳಪ್ರದೇಶಗಳಿಗೆ ನುಗ್ಗುತ್ತಿದೆ. ಆಗ, ಗದ್ದೆ-ತೋಟಗಳ ಮಣ್ಣು ಹಾಗೂ ಬಾವಿ-ಕೆರೆಗಳಂಥ ಕುಡಿಯುವ ನೀರಿನ ಮೂಲ ಎಲ್ಲದರಲ್ಲೂ ಉಪ್ಪಿನ ಪ್ರಮಾಣ ಹೆಚ್ಚುತ್ತಿದೆ. ಇದರಿಂದ ಭೂಮಿ ಫಲವತ್ತತೆ ನಾಶವಾಗಿ ಬೇಸಾಯ ಕಷ್ಟವಾಗುತ್ತದೆ. ಕುಡಿಯುವ ನೀರಿನ ಕೊರತೆ ಗಂಭೀರವಾಗಿದೆ.

7. ಮಣ್ಣು / ಪೋಷಕಾಂಶ ಸಾಗಣೆ ನಾಶ

ನದಿ ಪ್ರವಾಹವು ಮಣ್ಣು, ಪೋಷಕಾಂಶ ಮತ್ತು ಜೈವಿಕ ವಸ್ತುಗಳನ್ನು ಸಾಗಿಸಿ ಕರಾವಳಿಯ ಅಳಿವೆ, ದಿನ್ನೆ, ಕಡಲತೀರದ ಫಲವತ್ತತೆ. ನದಿತಿರುವು ಯೋಜನೆಗಳಿಂದ ನದಿಯ ಸಹಜಪ್ರವಾಹ ಕಡಿಮೆಯಾಗಿ, ಕರಾವ ಪ್ರದೇಶಕ್ಕೆ ತಲುಪಬೇಕಾದ ಪೋಷಕಾಂಶಗಳ ಪ್ರಮಾಣ ಕುಗ್ಗ ಫಲವತ್ತತೆ ಕಡಿಮೆಯಾಗಿ ಉತ್ತರ ಕನ್ನಡದ ಕರಾವಳಿ ಮೀನುಗಾರಿಕೆ ಹಾಗೂ ಕೃಷಿ ಇಳುವರಿ ಕುಸಿಯುತ್ತದೆ.

8. ಹೆಚ್ಚಿರುವ ಹೂಳಿನ ಸಮಸ್ಯೆ ಹಾಗೂ ನಿರ್ವಹಣಾ ವೆಚ್ಚ

ಘಟ್ಟಪ್ರದೇಶದ ಮೇಲ್ಮಣ್ಣು ಬಹುಸೂಕ್ಷ್ಮವಾದದ್ದು. ಇದರ ಸ್ವರೂಪದಿಂದಾಗಿ (Geomorphology) ಕಾಲುವೆಗಳು ಹಾಗೂ ಜಲಾಶಯಗಳಲ್ಲಿ ಹೂಳು ವೇಗವಾಗಿ ತುಂಬುತ್ತದೆ. ಆಗ, ನಿರಂತರ ಹೂಳು ತೆಗೆಯುವ (ಡ್ರೆಡ್ಜಿಂಗ್) ಕಾಮಗಾರಿಗಳಿಗೆ ಹಣ ವ್ಯಯಿಸುವ ಅನಿವಾರ್ಯತೆಗೆ ಎದುರಾಗುತ್ತದೆ.

9. ಸ್ಥಳೀಯ ಜೀವನೋಪಾಯಕ್ಕೆ ನೇರ ಹೊಡೆತ

ಬೇಡ್ತಿ- ಅಘನಾಕಶಿನಿ ನದಿ ತಪ್ಪಲಿನ ಹಲವಾರು ಬೇಸಾಯಗಾರರು, ಸಣ್ಣ ರೈತರು, ಗೌಳಿ, ಸಿದ್ದಿ, ಒಕ್ಕಲಿಗ, ಕುಣಬಿ, ಹಾಲಕ್ಕಿ, ತೆರನ ವನವಾಸಿಗಳು, ಮೀನುಗಾರರು ಇವರೆಲ್ಲರ ಜೀವನೋಪಾಯಕ್ಕೆ ಭಂಗ ಬರಲಿದೆ. ಹಾಗೂ ಮೀನುಗಾರಿಕೆಯ ಇಳುವರಿ, ಅರಣ್ಯ ಕಿರುಉತ್ಪನ್ನಗಳ ಸಂಗ್ರಹಣೆ, ಚಿಪ್ಪು ಮೀನು ಇತ್ಯಾದಿ ಜಲಚರ ಸಂಕುಲಗಳು ಇಳುವರಿ ಎಲ್ಲವೂ ಕುಸಿದು ನೈಸರ್ಗಿಕ ಸಂಪನ್ಮೂಲ ಆಧಾರಿತ ಜೀವನೋಪಾಯಗಳ ನೋಪಾಯಗಳು ನಾಶವಾಗುತ್ತವೆ.

10. ಉತ್ತರ ಕರ್ನಾಟಕಕ್ಕೆ ಸುಸ್ಥಿರ ನೀರಾವರಿ ಪದ್ಧತಿಗಳೂ ಬೇಕಿವೆ

ಉತ್ತರ ಕರ್ನಾಟಕದ ಒಳನಾಡಿನ ಎರೆಮಣ್ಣಿಗೆ ನೀರು ಹಿಡಿದಿಡುವ ಸಾಮರ್ಥ್ಯ ಹೆಚ್ಚು. ಅಲ್ಲಿ ಸುರಿಯುವಷ್ಟೇ ಮಳೆ ಹಾಗೂ ಸ್ಥಳೀಯ ಕೆರೆಗಳು ಜಲಾನಯನ ಅಭಿವೃದ್ಧಿ ತತ್ವದಡಿ ಯಶಸ್ವೀ ನೀರಾವರಿಗೆ ಸಾವಿರಾರು ಯಶೋಗಾಥೆಗಳನ್ನು ನೀಡಲಾಗಿದೆ. ಆದರೆ, ನೀರಾವರಿ ಕಾಲುವೆಗಳಲ್ಲಿ ಭಾರಿ ಪ್ರಮಾಣದ ನೀರು ಹರಿಸಿ ನೀರಾವರಿ ಮಾಡಿದ ಕೃಷಿಪ್ರದೇಶಗಳಲ್ಲಿ ಮಾತ್ರ ಭೂಮಿ ಚೌಳಾಗಾಗಿ, ಕ್ಷಾರಗೊಂಡು ಫಲವತ್ತತೆ ಕುಸಿದು ಬೇಸಾಯ ದುಸ್ತರವಾಗುತ್ತಿರುವ ವಿದ್ಯಮಾನವನ್ನು ಹಲವೆಡೆ ಪರಿಶೀಲಿಸಲಾಗಿದೆ. ಹೀಗಾಗಿ, ನದಿತಿರುವು ಯೋಜನೆಗಳು ಬಯಲುನಾಡಿನ ನೀರಾವರಿಯಾಗಲೀ ಅಥವಾ ರೈತರಿಗಾಗಲೀ ನೈಜಸಹಾಯ ಮಾಡುತ್ತಿಲ್ಲ ಎಂಬ ಅಂಶವನ್ನು ಮನಗಾಣಬೇಕಿದೆ.

ಇದನ್ನೂ ಓದಿ: ಬೇಡ್ತಿ – ವರದಾ ನದಿ ಜೋಡಣೆ ಯೋಜನೆ ಕೈಬಿಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ ಬೇಡ್ತಿ ಮತ್ತು ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ

11.ಮಲೆನಾಡಿನ ತೋಟಗಾರಿಕಾ ಬೆಳೆಗಳಿಗೆ ಸುಸ್ಥಿರ ನೀರಾವರಿ

ಮಲೆನಾಡಿನ ಬಹುಪಾಲು ತೋಟಗಾರಿಕಾ ಪ್ರದೇಶಗಳಿಗೆ ಈಗಲೂ ಸರಿಯಾದ ನೀರಾವರಿ ಸೌಲಭ್ಯವಿಲ್ಲ. ಸ್ಥಳೀಯ ನದಿತೊರೆಗಳನ್ನು ಜಲನಯನ ಅಭಿವೃದ್ಧಿ ತತ್ವದಡಿ ರೈತರಿಗೆ ಸುಸ್ಥಿರ ನೀರಾವರಿ ಯೋಜನೆ ರೂಪಿಸಬೇಕಾಗಿದೆ. ಈ ಯೋಜನೆ ಯಾವ ಕಾಮಗಾರಿಗಳಿಲ್ಲದೆ ಸ್ಥಳೀಯ ತೊರೆಗಳ ನೀರನ್ನು ಮಿತವಾಗಿ ಬಳಸುವ ಪರಿಸರಸ್ನೇಹಿ ನೀರಾವರಿ ಯೋಜನೆಗಳು ರೂಪುಗೊಳ್ಳಲಿವೆ.

ಈ ಎಲ್ಲ ಕಾರಣಗಳಿಗಾಗಿ, ಕೇಂದ್ರ ರಾಜ್ಯ ಸರ್ಕಾರಗಳು ಬೇಡ್ತಿ ಹಾಗೂ ಅಘನಾಶಿನಿ ನದಿ ತಿರುವು ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಆಗ್ರಹ ವ್ಯಕ್ತಪಡಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *