ಕೊಡಗು, ಮಾರ್ಚ್ 01: ಆ ವಿದ್ಯಾರ್ಥಿನಿ ಈಗಷ್ಟೇ ಪಿಯುಸಿ ಪರೀಕ್ಷೆ ಬರೆದಿದ್ದಳು. ಇನ್ನೆರಡು ತಿಂಗಳು ರಜೆಯನ್ನ ಆರಾಮವಾಗಿ ಕಳೆಯುವ ಆಸೆಯಲ್ಲಿದ್ದಳು. ನಿನ್ನೆ ಕೂಡ ಅಪ್ಪ-ಅಮ್ಮನ ಜೊತೆಗೆ ಬೇಗ ಮನೆ ಸೇರುವ ಆಸೆಯಲ್ಲಿದ್ದಳು. ಆದರೆ ಕಾಡಾನೆ (ಆನೆ) ರೂಪದಲ್ಲಿ ಬಂದ ಯಮರಾಯ ಆ ಮುಗ್ಧ ಯುವತಿಯನ್ನ ಬಲಿ (ಸಾವು) ಪಡೆದಿದೆ. ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಗುಡ್ಡಗಾಡು ಗ್ರಾಮ ಬೆಟ್ಟತ್ತೂರಿನಲ್ಲಿ ಘಟನೆ ನಡೆದಿದೆ.
ಕ್ಷಣಾರ್ಧದಲ್ಲಿ ವಿದ್ಯಾರ್ಥಿನಿಯ ಜೀವ ತೆಗೆದ ಕಾಡಾನೆ
ಕೊಡಗು ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ತಾರಕಕ್ಕೇರಿದೆ. ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ದಾರುಣ ಬಲಿಯಾಗಿದ್ದಾಳೆ. ಮಡಿಕೇರಿ ತಾಲೂಕಿನ ಗುಡ್ಡಗಾಡು ಗ್ರಾಮ ಬೆಟ್ಟತ್ತೂರಿನಲ್ಲಿ ನಿನ್ನೆ ಸಂಜೆ ನಡೆದ ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಪೂಜ್ಯ ಸಾವನ್ನಪ್ಪಿದ್ದಾಳೆ. ಸಂಜೆ ತನ್ನ ತಂದೆ ತಾಯಿ ಜೊತೆ ಬೈಕ್ ನಲ್ಲಿ ಬಂದ ಪೂಜ್ಯ, ಬೈಕ್ ನಿಂದ ಇಳಿದಿದ್ದೇ ತಡ ಅಷ್ಟರಲ್ಲಿ ಕತ್ತಲಲ್ಲಿ ಹಿಂಬದಿಯಿಂದ ದಾಳಿ ನಡೆಸಿದ ಕಾಡಾನೆ, ಪೂಜ್ಯಳ ದೇಹವನ್ನ ತುಳಿದು ಸ್ಥಳದಲ್ಲೇ ಸಾಯಿಸಿದೆ. ಮಗಳ ಕಿರುಚಾಟ ಕಂಡು ತಾಯಿ ಎಷ್ಟು ಬೊಬ್ಬೆ ಹೊಡೆದರೂ ಪ್ರಯೋಜನವಾಗಿಲ್ಲ, ಕ್ಷಣಾರ್ಧದಲ್ಲಿ ಕಾಡಾನೆ ವಿದ್ಯಾರ್ಥಿನಿಯ ಜೀವ ತೆಗೆದಿದೆ.
ಇದನ್ನೂ ಓದಿ: ವಿರಾಜಪೇಟೆ: ಕಿರಿದಾದ ರಸ್ತೆಯಲ್ಲಿ ಶಾಲಾ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಪತ್ನಿ ಮತ್ತು ಮಗಳ ಬೈಕ್ ನಿಂದ ಇಳಿಸಿ ಬೈಕ್ ನಿಲ್ಲಿಸಲು ಸ್ವಲ್ಪ ದೂರು ಹೋಗಿದ್ದ ತಂದೆ ಚಂಗಪ್ಪ ಅವರಿಗೆ ಪತ್ನಿ ಮತ್ತು ಮಗಳ ಕಿರುಚಾಟ ಕೇಳಿ ಓಡಿ ಬಂದಿದ್ದಾರೆ. ಅಷ್ಟರಲ್ಲಾಗಲೇ ಅನಾಹುತ ನಡೆದು ಹೋಗಿತ್ತು. ಮಗಳ ರಕ್ತಸಿಕ್ತ ದೇಹವನ್ನ ಅಪ್ಪಿಕೊಂಡು ಪತ್ನಿ ದೇವಕಿ ರೋಧಿಸುತ್ತಿದ್ದರು. ಈ ಭಾಗದಲ್ಲಿ ಈ ಒಂಟಿ ಆನೆ ನಿರಂತರವಾಗಿ ನಡೆಯುತ್ತಿದೆ. ಜನರು ಕಾಡಾನೆಯಿಂದ ಈ ಹಿಂದೆ ಹಲವು ಬಾರಿ ತಪ್ಪಿಸಿಕೊಂಡಿದ್ದರು. ಆದರೆ ಇಂದು ಪೂಜ್ಯಳ ಅದೃಷ್ಟ ಸರಿ ಇರಲಿಲ್ಲ.
ಸರ್ಕಾರದಿಂದ 20 ಲಕ್ಷ ರೂ ಪರಿಹಾರ
ಮಡಿಕೇರಿ ಡಿಎಫ್ ಒ ಅಭಿಷೇಕ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಕಾಡನೆಯನ್ನ ಸೆರೆ ಹಿಡಿಯಲು ಕ್ರಮಕೈಗೊಳ್ಳುವುದಾಗಿ ಭರವಸೆ ಇದೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ 20 ಲಕ್ಷ ರೂ ಪರಿಹಾರ ದೊರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಈ ನಾಲ್ಕು ಜಿಲ್ಲೆಗಳಲ್ಲಿ ಅತಿ ಹೆಚ್ಚು ಜನ ಸಾಯುವುದೇ ಕಾಡು ಪ್ರಾಣಿಗಳ ದಾಳಿಯಿಂದ!
ಕಾಡಾನೆಗಳು ಮಾನವರು ವಾಸಿಸುವ ಪ್ರದೇಶಗಳಿಗೆ ಬಾರದಂತೆ ತಡೆಯಲು ಅನಿವಾರ್ಯವಾದ ಕ್ರಮವಾಗಿದೆ. ಇಲ್ಲದಿದ್ದರೆ ಇಂತಹ ಅನ್ಯಾಯದ ಸಾವುಗಳು ಮುಂದುವರಿಯುತ್ತವೆ. ಒಟ್ಟಾರೆ ಕಾಡು ನಾಡು ಸಂಘರ್ಷದಲ್ಲಿ ಅಮಾಯಕ ವಿದ್ಯಾರ್ಥಿನಿ ಬಲಿ ಮಾತ್ರ ದುರಂತವೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.