ಕೊಪ್ಪಳ, ಜನವರಿ 8: ಕೊಪ್ಪಳದ ಗವಿ ಮಠದ ಮಹಾದಾಸೋಹ ಈ ಬಾರಿ ಹೊಸ ದಾಖಲೆ ಬರೆದಿದ್ದು, ಅಪಾರ ಪ್ರಮಾಣದ ಅನ್ನದಾನ ಹಾಗೂ ಪ್ರಸಾದ ಸಂಗ್ರಹದೊಂದಿಗೆ ಭಕ್ತರಲ್ಲಿ ಭಾರೀ ಸಂಭ್ರಮ ಮೂಡಿಸಿದೆ. ಗವಿ ಮಠದ ಪ್ರಮುಖ ವೈಶಿಷ್ಟ್ಯವಾಗಿರುವ ದಾಸೋಹವು ಈ ವರ್ಷ ಜನವರಿ 1 ರಿಂದ ಪ್ರಾರಂಭವಾಗಿದ್ದು, ಕಳೆದ ಎಂಟು ದಿನಗಳಿಂದ ನಿರಂತರವಾಗಿ ನಡೆಯುತ್ತಿದೆ. ಈ ಬಾರಿ ಗವಿ ಮಠದ ದಾಸೋಹದಲ್ಲಿ ದಾಖಲೆ ಪ್ರಮಾಣದ ಆಹಾರ ಸಂಗ್ರಹವಾಗಿದೆ. ಒಟ್ಟು 18 ಲಕ್ಷಕ್ಕೂ ಅಧಿಕ ರೊಟ್ಟಿಗಳು ಸಂಗ್ರಹವಾಗಿದ್ದು, ಇದು ಇತಿಹಾಸದಲ್ಲೇ ಅತ್ಯಧಿಕ ಸ್ಥಿರವಾಗಿದೆ. ಜೊತೆಗೆ 25 ಕ್ವಿಂಟಾಲ್ ಬುಂದಿ, 175 ಕ್ವಿಂಟಾಲ್ ಮೈಸೂರು ಪಾಕ್, 62 ಕ್ವಿಂಟಾಲ್ ಶೇಂಗಾ ಹೋಳಿಗೆ, 467 ಕ್ವಿಂಟಾಲ್ ಮಾದಲಿ, 5 ಕ್ವಿಂಟಾಲ್ ಜಿಲೇಬಿ ಹಾಗೂ ಸುಮಾರು 6 ಲಕ್ಷ ಮಿರ್ಚಿ ಸೇರಿದಂತೆ ವಿವಿಧ ಖಾದ್ಯಗಳು ದಾಸೋಹಕ್ಕೆ ಹರಿದು ಬಂದಿವೆ.
ಇದುವರೆಗೆ ನಡೆದ ದಾಸೋಹದಲ್ಲಿ ಸುಮಾರು 8 ಲಕ್ಷ ರೊಟ್ಟಿಗಳ ವಿತರಣೆ, ಪ್ರಸಾದ ತಯಾರಿಗಾಗಿ 650 ಕ್ವಿಂಟಾಲ್ ಅಕ್ಕಿ ಬಳಕೆಯಾಗಿದೆ. ಕಳೆದ ಹಲವು ದಿನಗಳಿಂದ ಸಾವಿರಾರು ಸ್ವಯಂಸೇವಕರು ದಾಸೋಹದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ