ಬೆಂಗಳೂರು, ಅಕ್ಟೋಬರ್ 25: ಕರ್ನಾಟಕ ಕಾಂಗ್ರೆಸ್ (ಕಾಂಗ್ರೆಸ್) ಪಕ್ಷದಲ್ಲಿ ನವೆಂಬರ್ ಕ್ರಾಂತಿ, ಅಧಿಕಾರ ಹಂಚಿಕೆ, ಸಂಪುಟ ಪುನಾರಚನೆ ವಿಚಾರ ಜೋರಾಗಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ತನ್ನದೇ ಸಚಿವ ಕೃಷ್ಣಭೈರೇಗೌಡ (ಕೃಷ್ಣ ಬೈರೇಗೌಡ) ಅಚ್ಚರಿಯ ಹೇಳಿಕೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ ಎಂದು ಹೇಳಿದ್ದಾರೆ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಅರ್ಹತೆಗೂ ಮೀರಿ ಅವಕಾಶಗಳನ್ನು ಪಕ್ಷ ನೀಡಿದೆ. ನನ್ನನ್ನು ಗುರುತಿಸಿ ಸಾಕಷ್ಟು ಅವಕಾಶಗಳನ್ನು ಕೊಟ್ಟಿರುವುದಕ್ಕೆ ಆಭಾರಿಯಾಗಿದ್ದೇನೆ. ಸಚಿವ ಸ್ಥಾನದ ತ್ಯಾಗಕ್ಕೆ ಸಿದ್ದ ಎಂದು ಅವರು ಹೇಳಿದರು.
ರಾಜ್ಯ ರಾಜಕೀಯದಲ್ಲಿ, ವಿಶೇಷವಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಂತರಿಕ ಕಲಹ ಜೋರಾಗಿರುವ ಸಂದರ್ಭದಲ್ಲಿ ಕೃಷ್ಣಭೈರೇಗೌಡರು ಈ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕೆಲವು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಚಿವರಿಗೆ ಔತಣಕೂಟ ಏರ್ಪಡಿಸಿದ್ದರು. ಸಂಪುಟ ಪುನಾರಚನೆ ಸಂಬಂಧ ಚರ್ಚೆಗಾಗಿಯೇ ಈ ಔತಣಕೂಟ ಏರ್ಪಟ್ಟಿತ್ತು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ಆದರೆ, ಈ ಚರ್ಚೆಯನ್ನು ಮುಖ್ಯಮಂತ್ರಿಗಳು ಹಾಗೂ ಇತರ ಕಾಂಗ್ರೆಸ್ ನಾಯಕರು ನಿರಾಕರಿಸಿದ್ದರು.
26 ಲಕ್ಷ ಭಕ್ತರಿಂದ ಹಾಸನಾಂಬೆ ದರ್ಶನ: ಕೃಷ್ಣಭೈರೇಗೌಡ
ಈ ಬಾರಿ 26 ಲಕ್ಷ ಭಕ್ತರು ಹಾಸನಾಂಬ ದೇವಿ ದರ್ಶನ ಪಡೆದಿದ್ದಾರೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಬೆಂಗಳೂರಿನಲ್ಲಿ ಮಾಹಿತಿ ನೀಡಿದ್ದಾರೆ. ಹಾಸನಾಂಬ ದೇವಿ ಅಂದರೆ ಹಸನ್ಮುಖಿ, ಪ್ರಸನ್ನತೆಯ ಸಂಕೇತ. ದೇವಿಯ ದರ್ಶನ ಪಡೆದ ಭಕ್ತರು ಸಂತೋಷದಿಂದ ಹೋಗಿದ್ದಾರೆ. ದರ್ಶನ ಪಡೆದ 26 ಲಕ್ಷ ಭಕ್ತರು ಶೇ 60ರಷ್ಟು ಮಹಿಳೆಯರು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಡ್ಯ: ಮತ್ತೊಬ್ಬ ಪ್ರಭಾವಿ ಒಕ್ಕಲಿಗ ನಾಯಕನ ಪುತ್ರ ರಾಜಕೀಯಕ್ಕೆ ಎಂಟ್ರಿ
ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಯೋಜನೆ ಶಕ್ತಿಯಿಂದಾಗಿಯೂ ಹೆಚ್ಚಿನ ಭಕ್ತರು ಬರಲು ಸಾಧ್ಯವಾಗಿದೆ. ದೇವರು ಯಾರ ಮನೆಯ ಸ್ವತ್ತು ಕೂಡ ಅಲ್ಲ. ಸಾಮಾನ್ಯರೆಲ್ಲರಿಗೂ ದರ್ಶನ ಸಿಗುವಂತೆ ಮಾಡಿದ್ದೇವೆ ಎಂದು ಕೃಷ್ಣಭೈರೇಗೌಡ ಹೇಳಿದರು.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ