
ಮಂಗಳೂರು, ಮಾರ್ಚ್ 17: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ (ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ) ರಾಜ್ಯದ ಶ್ರೀಮಂತ ದೇಗುಲಗಳಲ್ಲಿ ಒಂದು. ಕೋಟ್ಯಂತರ ರೂ ಆದಾಯ ತಂದು ಕೊಡುವ ಈ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸೂಕ್ತ ಮೂಲಭೂತ ಸೌಲಭ್ಯಗಳಿಲ್ಲ ಎಂಬುದು’ ಲಭ್ಯತೆಯ ಆರೋಪ.
ಭಕ್ತರ ಆರೋಪವೇನು?
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪ್ರಸಿದ್ಧ ನಾಗ ಕ್ಷೇತ್ರ ಅಂತಾನೆ ಕರೆಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿರುವ ಈ ದೇವಸ್ಥಾನಕ್ಕೆ ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಸಾಕಷ್ಟು ಸಂಖ್ಯೆಯ ಭಕ್ತರು ಬರ್ತಾರೆ. ಆದರೆ ಇತಿಹಾಸ ಪ್ರಸಿದ್ಧವಾಗಿರುವ ಈ ದೇವಸ್ಥಾನದಲ್ಲಿ ವ್ಯವಸ್ಥೆಗಳು ಮಾತ್ರ ಇತಿಹಾಸ ಕಾಲದ್ದೆ ಎಂಬುದು ಭಕ್ತರ ಆರೋಪ.
ಇದನ್ನೂ ಓದಿ: ಕುಕ್ಕೆ ಹಾಗೂ ಕೊಲ್ಲೂರು ದೇವಾಲಯಗಳಿಗೆ ಹೋಗುವ ಭಕ್ತರಿಗೆ ಗುಡ್ ನ್ಯೂಸ್ ನೀಡಿದ ಸಿದ್ದರಾಮಯ್ಯ
ದೇವಳದ ಸಮಗ್ರ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲ್ಯಾನ್ ಯೋಜನೆ ಜಾರಿಗೊಳಿಸಿ 17 ವರ್ಷವಾದರೂ ಇನ್ನೂ ಪೂರ್ಣವಾಗಿಲ್ಲ ಎಂಬುದಕ್ಕೆ ಸರ್ಕಾರದ ವ್ಯವಸ್ಥೆ ಕೈಗನ್ನಡಿಯಾಗಿದೆ. ಒಟ್ಟು 604 ಕೋಟಿ ರೂ ಕಾಮಗಾರಿಯಲ್ಲಿ ಅಂದಾಜು ಎರಡು ಹಂತಗಳನ್ನು ಪೂರ್ಣಗೊಳಿಸಿದ್ದು, ಈಗ ಮೂರನೇ ಹಂತದ ಕಾಮಗಾರಿಗಳು,ಪಟ್ಟಿ ಸಿದ್ದಗೊಳಿಸಿ ಪಿಡಬ್ಲ್ಯುಡಿ ಇಲಾಖೆಯಿಂದ ಅನುಮೋದನೆ ಪಡೆದು ಸರ್ಕಾರಕ್ಕೆ ಸಲ್ಲಿಸಲಾಗಿದ್ದರೂ ಸಹ ಹಸಿರು ಸಿಗ್ನಲ್‌ಗಳಿಲ್ಲ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 600 ಕೋಟಿ ರೂ.ಎಫ್‌ಡಿ ಇದ್ದರೂ, ವಾರ್ಷಿಕ 150 ಕೋಟಿಗೂ ಹೆಚ್ಚು ಆದಾಯವಿದ್ದರೂ ಸಹ ಈ ಹಣವನ್ನು ದೇವಳದ ಅಭಿವೃದ್ಧಿ ಕಾರ್ಯಗಳಿಗೆ ಉದ್ದೇಶಿಸಲಾಗಿದೆ ಸರ್ಕಾರ, ಹಣಕಾಸು ಇಲಾಖೆ ಅನುಮೋದನೆ ಕಡ್ಡಾಯವಾಗಿದೆ. ಹೀಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ, ಕ್ರಿಯಾಶಕ್ತಿ ಇಲ್ಲದೆ, ಅಪೂರ್ಣ ತೀರ್ಮಾನಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂಬ ಆರೋಪವಿದೆ.
ಏನೆಲ್ಲಾ ನಿರ್ಮಾಣವಾಗಬೇಕು?
ದೇವಳದಲ್ಲಿ ಸರ್ಪ ಸಂಸ್ಕಾರ ಸೇವೆ ಬಹಳಷ್ಟು ಪ್ರಸಿದ್ಧಿ ಪಡೆದಿದ್ದು ಪ್ರಸ್ತುತ ದಿನವೊಂದಕ್ಕೆ 175 ಭಕ್ತರಿಗೆ ಮಾತ್ರ ಸೇವೆ ನಡೆಸಲು ಅವಕಾಶವಿದ್ದು, ಎರಡು ತಿಂಗಳ ಕಾಲ ಬುಕ್ಕಿಂಗ್‌ಗೆ ಕಾಯಬೇಕಾದ ಪರಿಸ್ಥಿತಿಯಿದೆ. ಹೀಗಾಗಿ ಸರ್ಪ ಸಂಸ್ಕಾರ ಯಾಗಶಾಲೆಯ ನಿರ್ಮಾಣವಾಗಬೇಕಿದೆ. ಒಂದು ಸಾವಿರ ಮಂದಿ ಆಶ್ಲೇಷ ಬಲಿ ಪೂಜೆ ಸಲ್ಲಿಸಲು ಪೂಜಾ ಮಂದಿರವೂ ನಿರ್ಮಾಣವಾಗಬೇಕಿದೆ. ಸದ್ಯ 25 ವರ್ಷದ ಹಿಂದಿನ ಭೋಜನಶಾಲೆಯಿದ್ದು ಇನ್ನು ಮುಂದೆ ಏಕಕಾಲದಲ್ಲಿ ಐದು ಸಾವಿರ ಮಂದಿ ಕೂತು ಊಟ ಮಾಡುವ ಭೋಜನ ಶಾಲೆ ನಿರ್ಮಾಣವಾಗಬೇಕಿದೆ.
ಇದನ್ನೂ ಓದಿ: ಕರ್ನಾಟಕದ ದೇವಾಲಯಗಳ ಆದಾಯದಲ್ಲಿ ಭಾರೀ ಏರಿಕೆ: ದಕ್ಷಿಣ ಕನ್ನಡದ ಈ ದೇಗುಲ ಫಸ್ಟ್
ಸದ್ಯ ದೇವಳದಲ್ಲಿ ವಸತಿ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಸೀಸನ್ ಸಮಯದಲ್ಲಿ ಭಕ್ತರು ರಥಬೀದಿಯಲ್ಲಿ ಮಲಗಬೇಕಾದ ಪರಿಸ್ಥಿತಿಯಿದೆ. ಹೀಗಾಗಿ 604 ಕೋಟಿ ರೂಗಳ ಮಾಸ್ಟರ್ ಪ್ಲ್ಯಾನ್‌ನಲ್ಲಿ ಪಾರಂಪರಿಕ ರಥಬೀದಿ, 800 ಕೊಠಡಿಗಳ ವಸತಿಗೃಹ, ಶೌಚಾಲಯ, ಗೆಸ್ಟ್ ಹೌಸ್, ಸುತ್ತು ಪೌಳಿ ದುರಸ್ತಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಸದ್ಯ ಈ ಬಾರಿಯ ಬಜೆಟ್ ನಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಾಧಿಕಾರ ರಚಿಸುವ ಬಗ್ಗೆ ಸರ್ಕಾರ ಘೋಷಣೆ ಮಾಡಿದ್ದು, ಇನ್ನಾದರೂ ಸಮರ್ಪಕವಾಗಿ ಅಭಿವೃದ್ಧಿ ಕಾರ್ಯಗಳು ಆಗುತ್ತಾ ಅಂತಾ ಕಾದು ನೋಡಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.