
ಬೆಂಗಳೂರು, ಮಾರ್ಚ್ 17: ಆಧುನಿಕ ಕನ್ನಡ ಸಾಹಿತ್ಯದ ಸರ್ವಜ್ಞ, ಸಾಹಿತ್ಯ ದಿಗ್ಗಜ ಡಿ.ವಿ. ಗುಂಡಪ್ಪನವರು ಕೇವಲ ಸಾಹಿತಿಯಷ್ಟೇ ಅಲ್ಲದೆ ಪತ್ರಕರ್ತರ ಹಿತರಕ್ಷಣೆಗೆ 95 ವರ್ಷಗಳ ಹಿಂದೆಯೇ ಸಂಘಟನೆಯನ್ನು ಕಟ್ಟಿದ ದೂರದರ್ಶಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ.
ಅಲ್ಲಿ ನಡೆದ ಬೆಂಗಳೂರು ಜಿಲ್ಲಾ ಘಟಕದ ನೂತನ ಕಚೇರಿ ಪೂಜೆ ಹಾಗೂ ಡಿ.ವಿ.ಜಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಡಿ.ವಿ.ಜಿ ಅವರು ಅಂದು ಹಾಕಿಕೊಟ್ಟ ಅಡಿಪಾಯದ ಮೇಲೆ ಇಂದು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ ಹೆಮ್ಮರವಾಗಿ ಬೆಳೆದಿದೆ. ಸುಮಾರು 10,000 ಸದಸ್ಯರನ್ನು ಹೊಂದಿರುವ ಇದು ದೇಶದ ಅತಿದೊಡ್ಡ ಸಂಘಟನೆಗಳಲ್ಲಿದೆ. ಹಿರಿಯ ಪತ್ರಕರ್ತ ಖಾದ್ರಿ ಶಾಮಣ್ಣ ಸಮಿತಿಯ ಶಿಫಾರಸಿನ ಹುಬ್ಬಳ್ಳಿಯಲ್ಲಿ ನಡೆದ ಸಮ್ಮೇಳನದಲ್ಲಿ ಈ ಸಂಘಕ್ಕೆ ಮರುನಾಮಕರಣ ಮಾಡಲಾಯಿತು ಎಂದು ಹೇಳುವ ಮೂಲಕ ಇತಿಹಾಸವನ್ನು ತಗಡೂರು ಸ್ಮರಿಸಿದ್ದಾರೆ.
ಕರ್ನಾಟಕ ಭೂ ಕಬಳಿಕೆ ನಿಷೇಧ ನ್ಯಾಯಾಲಯದ (ಕಂದಾಯ) ಸದಸ್ಯ ಕೆ.ಎಚ್. ಅಶ್ವತ್ಥನಾರಾಯಣ ಮಾತನಾಡಿ, ಡಿ.ವಿ.ಸಂಸ್ಕೃತ ಶಿಕ್ಷಣಶಾಲೆಯವರೆಗೆ ಓದಿದ್ದರೂ ಕನ್ನಡ, ಇಂಗ್ಲಿಷ್ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅವರು ಹೊಂದಿದ್ದ ಪಾಂಡಿತ್ಯ ಅಪ್ರತಿಮವಾದುದು. ಅವರ ‘ಮಂಕುತಿಮ್ಮನ ಕಗ್ಗ’ ಕೃತಿಯು ಸಮಾಜದ ಪ್ರತಿಯೊಂದು ಸಮಸ್ಯೆಗೆ ಪರಿಹಾರ ನೀಡುವ ಶಕ್ತಿ ಹೊಂದಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ದೇಶಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಹೇಗೋ, ಪತ್ರಕರ್ತರು ಮತ್ತು ಸಾಮಾನ್ಯ ಜನರ ಬದುಕಿಗೆ ಡಿ.ವಿ.ಜಿ ಅವರ ‘ಮಂಕುತಿಮ್ಮನ ಕಗ್ಗ’ ಸಂವಿಧಾನದಂತಿದೆ ಎಂದು ಕೊಂಡಾಡಿದ್ದಾರೆ.
ಇದನ್ನೂ ಓದಿ: SSLC ಪರೀಕ್ಷೆ ಬರೆಯುವ ಮಕ್ಕಳಿಗೆ ಮಿಡಿದ ಕಂಡಕ್ಟರ್ ಮನ, ವಿಡಿಯೋ ವೈರಲ್
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಹಿರಿಯ ಪತ್ರಕರ್ತ ಭೋಪಯ್ಯ ಭಾಗವಹಿಸಿದ್ದರು. ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್, ಬೆಂಗಳೂರು ನಗರ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಸದಸ್ಯರು. ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷರಾದ ಎಸ್.ಸೋಮಶೇಖರ ಗಾಂಧಿ ಸ್ವಾಗತಿಸಿದರು. ಬೆಂಗಳೂರು ನಗರ ಜಿಲ್ಲೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ರವೀಶ್ ವಂದನಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಘಟಕದ ಕಚೇರಿಯಲ್ಲಿ ವಿದ್ಯುಕ್ತವಾಗಿ ಪೂಜೆ ಸಲ್ಲಿಸಿದ ನೂತನ ಪದಾಧಿಕಾರಿಗಳು ಸಂಘದ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.