ಗದಗ, (ಜನವರಿ 22): ಇಂದಿನ ದಿನಗಳಲ್ಲಿ ಅಪರೂಪವಾಗುತ್ತಿರುವ ಪ್ರಾಮಾಣಿಕತೆಗೆ ಲಕ್ಕುಂಡಿ ಗ್ರಾಮ ಪಂಚಾಯಿತಿ (ಲಕ್ಕುಂಡಿ ಗ್ರಾ.ಪಂ.) ಬೆಲೆ ನೀಡಿದೆ. ಹೌದು…ಲಕ್ಕುಂಡಿ ಗ್ರಾಮದಲ್ಲಿ ರಿತ್ತಿ ಕುಟುಂಬದ ಮನೆಯ ಪಾಯ ಅಗೆಯುವ ವೇಳೆ ಚಿನ್ನದ ನಿಧಿ ಸಿಕ್ಕಿದ್ದು, ಕೂಡಲೇ ಪ್ರಜ್ವಲ್ ಎಂಬ ಬಾಲಕ ಅದನ್ನು ಸರ್ಕಾರಕ್ಕೆ ಒಪ್ಪಿಸಿ ಪ್ರಮಾಣಿಕತೆ ಮೆರೆದಿದ್ದಾನೆ. ಇದೀಗ ಈ ಪ್ರಮಾಣಿಕತೆಗೆ ಲಕ್ಕುಂಡಿ ಗ್ರಾಮ ಪಂಚಾಯಿತಿ ರಿತ್ತಿ ಕುಟುಂಬಕ್ಕೆ ನಿವೇಶನ ನೀಡಿದೆ. ಇಂದು (ಜನವರಿ 22) ಲಕ್ಕುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಚಪ್ಪ ಪೂಜಾರಿ ನೇತೃತ್ವದಲ್ಲಿ ನಡೆದ ವಿಶೇಷ ಸಭೆಯಲ್ಲಿ ರಿತ್ತಿ ಕುಟುಂಬಕ್ಕೆ 30 ಬೈ 40 ಅಳತೆಯ ಜಾಗವನ್ನು ನೀಡಲಾಗಿದೆ. ಇದಕ್ಕೆ ರಿತ್ತಿ ಕುಟುಂಬ ಫುಲ್ ಖುಷ್ ಆಗಿದ್ದು, ಆ ಸಂತೋಷವನ್ನು ಟಿವಿ9 ಮೂಲಕ ವ್ಯಕ್ತಪಡಿಸಿದೆ.