
ಕೋಲಾರ, ಮಾರ್ಚ್ 18: ಮೆಡಿಕಲ್ ಸ್ಟೋರ್ ಪರವಾನಗಿಗಾಗಿ 38,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೋಲಾರ ಜಿಲ್ಲಾ ಡ್ರಗ್ ಕಂಟ್ರೋಲರ್ ಸೇರಿ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕರ್ನಾಟಕ ದಲಿತ ಸಿಂಹ ಸೇನೆಯ ಮುಖಂಡ ಹೂಹಳ್ಳಿ ಪ್ರಕಾಶ್, ಕೃಷ್ಣಯ್ಯ ದೂರಿನ ಅನ್ವಯ ಲೋಕಾಯುಕ್ತ ಉಪ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪ್ರಕರಣ ಸಂಬಂಧ ಜಿಲ್ಲಾ ನಿಯಂತ್ರಕರಾದ ಶ್ಯಾಮಲಾ, ವಾಹನ ಚಾಲಕ ಮಹಂತೇಶ್ ಮತ್ತು ನಿವೃತ್ತ ಡಿ ರೂಪಾ ಶ್ರೀನಿವಾಸನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಮಾಲೂರು ತಾಲೂಕಿನ ಟೇಕಲ್ ಬಳಿ ಲಂಚ ಸ್ವೀಕಾರ ವೇಳೆ ಲೋಕಾಯುಕ್ತ ದಾಳಿ ನಡೆಸಿದ್ದು, ಈ ವೇಳೆ ಅಧಿಕಾರಿಗಳನ್ನು ಕಂಡು ಎಡಿಸಿ ಶ್ಯಾಮಲಾ ಹಾಗೂ ಮತ್ತಿಬ್ಬರು ಎಸ್ಕೇಪ್ ಆಗಿದ್ದರು. ಇವರ ಕಾರನ್ನು ಬೆನ್ನಟ್ಟಿದ್ದ ಲೋಕಾಯುಕ್ತ ಪೊಲೀಸರು ಮೂವರನ್ನೂ ಅಂತಿಮವಾಗಿ ಬಂಧಿಸಿದ್ದಾರೆ. ಆದರೆ ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆಂದು ಪಡೆದಿದ್ದ 35 ಸಾವಿರ ರೂಪಾಯಿ ಲಂಚದ ಹಣವನ್ನು ಮಾರ್ಗ ಮಧ್ಯದಲ್ಲಿ ಇವರು ಬಿಸಾಡಿದ್ದಾರೆ. ವೇಳೆ ವಿಷಯ ಬೆಳಕಿಗೆ ಬಂದಿದ್ದು, ಹಣಕ್ಕಾಗಿ ತಡರಾತ್ರಿವರೆಗೂ ಲೋಕಾಯುಕ್ತ ಅಧಿಕಾರಿಗಳು ಹುಡುಕಾಡಿರುವ ಪ್ರಸಂಗವೂ ವಿಚಾರಣೆ ನಡೆದಿದೆ. ಆದರೆ ಎಸೆದ ದುಡ್ಡು ಸಿಗದ ಕಾರಣ, ಹಣ ಸ್ವೀಕರಿಸುವ ವಿಡಿಯೋ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಲಂಚ ಪಡೆಯುವಾಗ ಲೋಕಾಯುಕ್ತ ಟ್ರ್ಯಾಪ್; ಸಿಕ್ಕಿಬೀಳುತ್ತಿದ್ದಂತೆ ಕೈ ಕೊಯ್ದುಕೊಂಡು ಮಹಿಳಾ ಪಿಡಿಯೋ ಹೈಡ್ರಾಮಾ!
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲೋಕಾಯುಕ್ತ ಡಿವೈಎಸ್ಪಿ ವೆಂಕಟೇಶ್, ಮೆಡಿಕಲ್ ಸ್ಟೋರ್ ನವೀಕರಣಕ್ಕಾಗಿ 38,000 ಲಂಚಕ್ಕೆ ಜಿಲ್ಲಾ ಡ್ರಗ್ ಕಂಟ್ರೋಲರ್ ಬೇಡಿಕೆ ಇಟ್ಟಿದ್ದ ಹಿನ್ನೆಲೆ ದಾಳಿ ನಡೆಸಲಾಗಿದೆ. ಆದರೆ ಲಂಚವಾಗಿ ಸ್ವೀಕರಿಸಿದ ಹಣವನ್ನು ಅಧಿಕಾರಿ ಮಾರ್ಗದಲ್ಲಿ ಬಿಸಾಡಿದ್ದಾರೆ. ಆ ದುಡ್ಡಿಗಾಗಿ ಹುಡುಕಾಟ ನಡೆಸಿದ್ದೇವೆ. ಹೀಗಿದ್ದರೂ ಲಂಚ ಕೇಳಿರುವ ಆಡಿಯೋ ಮತ್ತು ಹಣ ಸ್ವೀಕರಿಸುವ ವಿಡಿಯೋ ಸಾಕ್ಷ್ಯ ನಮ್ಮ ಬಳಿ ಇದ್ದು, ಅವುಗಳ ಆಧಾರದಲ್ಲಿ ತನಿಖೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.