ಮಂಡ್ಯ, ಡಿಸೆಂಬರ್ 20: ಮಂಡ್ಯ (ಮಂಡ್ಯ) ಜಿಲ್ಲೆಯ ಮದ್ದೂರು ತಾಲೂಕಿನ ಹೊಂಬಾಳೆಗೌಡನ ದೊಡ್ಡಿ ಗ್ರಾಮದಲ್ಲಿ ಸತೀಶ್ ಹಾಗೂ ಸೌಮ್ಯ ದಂಪತಿಯ ಮನೆಯಲ್ಲಿದ್ದ ನಿಗೂಢ ರಕ್ತದ ಕಲೆಗಳ ಪ್ರಕರಣದ ಸತ್ಯಾಸತ್ಯತೆ ಕೊನೆಗೂ ಬಯಲಾಗಿದೆ. ಎಫ್.ಎಸ್.ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿ ಬಹಿರಂಗಗೊಂಡಿದ್ದು, ಮನೆಯೊಳಗೆ ಹರಿದಿದ್ದ ರಕ್ತವು ಮನೆ ಮಾಲೀಕ ಸತೀಶ್ ಅವರದ್ದೇ ದೃಢಪಟ್ಟಿದೆ! ಅಕ್ಟೋಬರ್ 28ರಂದು ಸತೀಶ್ ದಂಪತಿಯ ಮನೆಯ ಹಾಲ್, ಬಾತ್ರೂಂ, ಟಿವಿ ಹಾಗೂ ಫ್ಯಾನ್‌ಗಳ ಮೇಲಿನ ರಕ್ತದ ಕಲೆಗಳು ಕಾಣಿಸಿಕೊಂಡು ಗ್ರಾಮದೆಲ್ಲೆಡೆ ಆತಂಕ ಸೃಷ್ಟಿಸಿತ್ತು. ಅಲ್ಲಿ ಯಾವುದೋ ಪ್ರಾಣಿ ರಕ್ತವಿರಬಹುದು ಎಂಬ ಶಂಕೆಯಿತ್ತು. ಆದರೆ ಪ್ರಾಥಮಿಕ ತನಿಖೆಯಲ್ಲೇ ಅದು ಮನುಷ್ಯನ ರಕ್ತ ಎಂಬುದು ಗೊತ್ತಾಗಿತ್ತು.
ಎಫ್‌ಎಸ್‌ಎಲ್ ವರದಿಯಿಂದ ಬಯಲಾಯ್ತು ರಹಸ್ಯ
ಈ ಪ್ರಕರಣದ ಗಂಭೀರತೆಯನ್ನು ಗಮನಿಸಿ ಬೆಸಗರಹಳ್ಳಿ ಠಾಣಾ ಪೊಲೀಸರು, ಎಫ್‌ಎಸ್‌ಎಲ್ ಮತ್ತು ಶ್ವಾನದಳದ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಇದೀಗ ಬಂದಿರುವ ವರದಿಯಲ್ಲಿ, ಆ ರಕ್ತವು ಮನೆ ಮಾಲೀಕ ಸತೀಶ್ ಅವರದೇ ಎಂದು ಉಲ್ಲೇಖಿಸಲಾಗಿದೆ.
ಗೊತ್ತಾಗದಂತೆ ಹರಿದಿದ್ಹೇಗೆ ನೆತ್ತರು?
ಪೊಲೀಸ್ ತನಿಖೆಯಲ್ಲಿ ತಿಳಿದುಬಂದಂತೆ, ಸತೀಶ್ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ, ರಕ್ತ ತೆಳುಗೊಳಿಸುವ (ಬ್ಲಡ್ ಥಿನ್ನರ್) ಮಾತ್ರ ಸೇವಿಸುತ್ತಾರೆ. ಅವರಿಗೆ ದೇಹದ ಮೇಲೆ ಸೂಜಿ ಗಾತ್ರದ ಸಣ್ಣ ಗಾಯವಾಗಿದ್ದು, ಅದು ಅವರಿಗೆ ತಿಳಿಯದಂತೆ ರಕ್ತ ಚಿಮ್ಮಿ ಮನೆಯೊಳಗೆ ಹರಿದಿದೆ. ಆದರೆ ಇದರ ಅರಿವು ಅವರಿಗೂ ಆಗಿಲ್ಲದೇ ಇದ್ದುದರಿಂದ ಯಾರೋ ದುಷ್ಕೃತ್ಯ ಎಸಗಿರಬಹುದು, ಅಥವಾ ಮಾಟ ಮಂತ್ರಕ್ಕಾಗಿ ರಕ್ತ ಚೆಲ್ಲಿರಬಹುದು ಎಂಬ ಅನುಮಾನಗಳು ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಮೂಡಿದ್ದವು. ಏಕೆಂದರೆ, ಕೇವಲ ಒಂದು ಕಡೆಯಲ್ಲದೆ ಮನೆ ಹಾಲ್, ಬಾತ್ರೂಂ, ಟಿವಿ ಹಾಗೂ ಫ್ಯಾನ್‌ಗಳ ಮೇಲೆ ರಕ್ತದ ಕಲೆ ಕಾಣಿಸುತ್ತಿತ್ತು. ಹೀಗಾಗಿ ಸಹಜವಾಗಿಯೇ ಅನುಮಾನಗಳು ಇರಬಹುದು. ಇದರಿಂದ ಗ್ರಾಮದಲ್ಲಿ ಕೆಲಕಾಲ ಭಯ ಮತ್ತು ಕುತೂಹಲ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಮಂಡ್ಯ: ನೆತ್ತರ ನಿಗೂಢತೆಗೆ ನಡುಗಿದ ದಂಪತಿ, ಮನೆಯಲ್ಲಿ ಎಲ್ಲಿ ನೋಡಿದರೂ ರಕ್ತದ ಕಲೆ!
ಆದರೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ ಬಳಿಕ ಇದೀಗ ರಕ್ತ ಸಂಪೂರ್ಣವಾಗಿ ಬಯಲಾಗಿದ್ದರೆ, ಯಾವುದೇ ಅಪರಾಧ ಅಥವಾ ಹೊರಗಿನ ದುರುದ್ದೇಶ ಇಲ್ಲ ಎಂಬುದು ಸ್ಪಷ್ಟವಾಗಿದೆ. ಎಫ್‌ಎಸ್‌ಎಲ್ ವರದಿಯಿಂದ ಸತೀಶ್ ದಂಪತಿ ಮತ್ತು ಗ್ರಾಮಸ್ಥರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 7:48 am, ಶನಿ, 20 ಡಿಸೆಂಬರ್ 25