
ಬೆಂಗಳೂರು, ಏಪ್ರಿಲ್ 08: ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ನ ಹಿರಿಯ ರಾಜಕಾರಣಿ. ಐಸಿಸಿಯ ಅಧ್ಯಕ್ಷರೂ ಆಗಿರುವ ಖರ್ಗೆ ಅದ್ಯಾಕೋ ಗೊತ್ತಿಲ್ಲ ಬೇಕು ಅಂತಲೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ಮೊನ್ನೆ ಭಾನುವಾರ ಅಸ್ಸಾನ್ನ ನಿಲಾಂಬಜಾರ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕುರಾನ್‌ನಲ್ಲಿ ನಮಾಜ್ ಮಾಡುವಾಗ ವಿಷಕಾರಿ ಹಾವನ್ನು ಕಂಡರೆ ಅದನ್ನು ಕೊಲ್ಲಬೇಕು ಎಂದು ಹೇಳಿದ್ದಾರೆ. ಆರ್‌ಎಸ್‌ಎಸ್ ಅಥವಾ ಬಿಜೆಪಿ ಕೂಡ ಅದೇ ರೀತಿಯ ಹಾವು, ಅವನನ್ನು ಕೊಲ್ಲದಿದ್ದರೆ ನೀವು ಬದುಕಲು ಸಾಧ್ಯವಿಲ್ಲ ಎಂದಿದ್ದು, ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಖರ್ಗೆ ಮೇಲೆ ಬಿಜೆಪಿಗರು ಮುಗಿ ಬಿದ್ದಿದ್ದು, ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.
ಅಷ್ಟಕ್ಕೂ ಮಲ್ಲಿಕಾರ್ಜುನ ಖರ್ಗೆ ಈ ರೀತಿಯ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಇವರು ನೀಡಿದ್ದ ಕೆಲ ಹೇಳಿಕೆಗಳು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಮಾತಿಗೂ ಡಾಂಟ್ ಕೇರ್; ‘ಕೈ’ ಮನೆಯಲ್ಲಿ ನಿಲ್ಲದ ಬಾಣಗಳ ವಾರ್
‘ಗುಜರಾತಿಗರು ಅನಕ್ಷರಸ್ಥರು’
ವಿಧಾನಸಭೆ ಚುನಾವಣೆ ನಿಮಿತ್ತಕೇರಳದ ಇಡುಕ್ಕಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮೊನ್ನೆ ಮೊನ್ನೆಯಷ್ಟೇ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ, ಗುಜರಾತ್ ಜನರು ಅನಕ್ಷರಸ್ಥರು. ಹೀಗಾಗಿ ನರೇಂದ್ರ ಮೋದಿ ಜನರನ್ನು ಸುಲಭವಾಗಿ ದಾರಿ ತಪ್ಪಿಸಬಹುದು, ಆದರೆ ಕೇರಳದ ಜನರು ಹೆಚ್ಚು ಸಂವೇದನಾಶೀಲ ಮತ್ತು ವಿದ್ಯಾವಂತರು. ಹೀಗಾಗಿ ಅವರನ್ನು ಯಾರೂ ಮೋಸಗೊಳಿಸಲು ಸಾಧ್ಯವಿಲ್ಲ ಎಂದಿದ್ದರು. ಯಾವಾಗ ತಮ್ಮ ಹೇಳಿಕೆ ತೀವ್ರ ವಿವಾದವಾಗಿ ಟೀಕೆಗೆ ಗುರಿಯಾಯ್ತೋ ಎಚ್ಚೆತ್ತ ಖರ್ಗೆ ತಮ್ಮ ಮಾತಿಗೆ ವಿಷಾದವನ್ನೂ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಕೇರಳದಲ್ಲಿ ನಡೆದ ಚುನಾವಣಾ ಭಾಷಣದಲ್ಲಿ ನನ್ನ ಕೆಲವು ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ನೋಡಲಾಗುತ್ತಿದೆ. ಆದಾಗ್ಯೂ, ನಾನು ಹೃತ್ಪೂರ್ವಕ ವಿಷಾದವನ್ನು ವ್ಯಕ್ತಪಡಿಸುತ್ತೇನೆ. ಗುಜರಾತ್ ಜನರ ಭಾವನೆಗಳಿಗೆ ಧಕ್ಕೆಯುಂಟುಮಾಡುವುದು ನನ್ನ ಉದ್ದೇಶವೇ ಅಲ್ಲ. ಅವರ ಮೇಲೆ ನನಗೆ ಸದಾ ಗೌರವವಿದೆ ಮತ್ತು ಅದು ಮುಂದುವರಿಯುತ್ತದೆ ಎಂದು ಹೇಳುವ ಮೂಲಕ ವಿವಾದ ಸುಖಾಂತ್ಯಗೊಳಿಸಲು ಯತ್ನಿಸಿದರು.
‘ಮೋದಿ ವಿಷ ಸರ್ಪ ಇದ್ದಂತೆ’
2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆಯೂ ಖರ್ಗೆ ಭಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ ಇದ್ದಂತೆ, ವಿಷದ ಹಾವನ್ನು ನೆಕ್ಕಿದ್ರೆ ಸತ್ತು ಹೋಗ್ತಾರೆ. ದೇಶಕ್ಕೆ ಬಿಜೆಪಿಯವರ ಕೊಡುಗೆ ಏನು ಅಂತಾ ಹೇಳಲಿ, ನಿಮ್ಮ ಮನೆಯಲ್ಲಿ ದೇಶಕ್ಕಾಗಿ ಒಂದೂ ನಾಯಿ ಕೂಡ ಸತ್ತಿಲ್ಲ ಎಂದಿದ್ದರು. ಇದಕ್ಕೆ ಕೌಂಟರ್ ನೀಡಿದ್ದ ಮೋದಿ, ನಾನು ಶಿವನ ಕೊರಳಿನ ಸರ್ಪವಾಗಲು ಇಷ್ಟಪಡುತ್ತೇನೆ ಎಂದಿದ್ದು ಕೂಡ ಭಾರಿ ಸುದ್ದಿಯಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.