ಕೋಲ್ಕತ್ತಾ, ಡಿಸೆಂಬರ್ 20: ಪ್ರಧಾನಿ ನರೇಂದ್ರ ಮೋದಿ ಇಂದು (ಶನಿವಾರ) ತೃಣಮೂಲ ಕಾಂಗ್ರೆಸ್ (ಟಿಎಂಸಿ) ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಡಳಿತವು ನುಸುಳುಕೋರರನ್ನು ರಕ್ಷಿಸಲು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ನಾಡಿಯಾ ಜಿಲ್ಲೆಯ ತಾಹೆರ್‌ಪುರದಲ್ಲಿ ದೂರವಾಣಿ ಮೂಲಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ನುಸುಳುಕೋರರು ಬಂಗಾಳದಲ್ಲಿ ಟಿಎಂಸಿಯ ಬೆಂಬಲವನ್ನು ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಟಿಎಂಸಿಯ ‘ಮಹಾ ಜಂಗಲ್ ರಾಜ್’ ಕೊನೆಗೊಳ್ಳಲಿದೆ ಎಂದು ಪ್ರತಿಪಾದಿಸಿದ ಪ್ರಧಾನಿ ಮೋದಿ, ರಾಜಕೀಯದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಒಲೈಕೆಯ ಆಳ್ವಿಕೆ ನಡೆಸುತ್ತಿದೆ ಎಂದು ಹೇಳಿದರು. ಟಿಎಂಸಿ ಬಿಜೆಪಿಯನ್ನು ವಿರೋಧಿಸಬಹುದು. ಆದರೆ ಬಿಹಾರದ ಚುನಾವಣಾ ಫಲಿತಾಂಶಗಳು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಬಾಗಿಲು ತೆರೆದಿವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೊಲ್ಕತ್ತಾದ ಮೆಸ್ಸಿ ಕಾರ್ಯಕ್ರಮದಲ್ಲಿ ನಡೆದ ಗಲಭೆಗೆ ಬಂಗಾಳದ ಕ್ರೀಡಾ ಸಚಿವರು ರಾಜೀನಾಮೆ
“ಬಿಹಾರದ ಜಂಗಲ್ ರಾಜ್ ಅನ್ನು ತೊಡೆದುಹಾಕಲಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕೆಟ್ಟ ಹವಾಮಾನದಿಂದಾಗಿ ನಾಡಿಯಾವನ್ನು ತಲುಪಲು ಸಾಧ್ಯವಾಗದಿದ್ದಕ್ಕಾಗಿ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ, ಬಿಜೆಪಿ ಯಾವುದೇ ಬೆಲೆ ತೆತ್ತಾದರೂ ಪಶ್ಚಿಮ ಬಂಗಾಳದ ಅಭಿವೃದ್ಧಿಯನ್ನು ಮಾಡುತ್ತಿದೆ ಎಂದು ಹೇಳಿದರು. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿದ ಅವರು ವಿಶೇಷವಾಗಿ ಹಿಂದುಳಿದಿರುವ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಬಿಜೆಪಿ ಬಯಸುತ್ತದೆ ಎಂದು ಹೇಳಿದರು.
ಇದಕ್ಕೂ ಮೊದಲು, ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ರಣಘಾಟ್‌ನಲ್ಲಿ ಪ್ರಧಾನಿ ಮೋದಿ ಬಹು ಅಭಿವೃದ್ಧಿ ಕಾರ್ಯಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಸುಮಾರು 3,200 ಕೋಟಿ ರೂ. ಮೌಲ್ಯದ ಎರಡು ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಕೂಡ ಸೇರಿವೆ. ಇದರಲ್ಲಿ NH-34 ರ 66.7 ಕಿಮೀ ಉದ್ದದ ಬಾರಾಜಗುಲಿ-ಕೃಷ್ಣನಗರ ವಿಭಾಗ 4 ಪಥ ನಿರ್ಮಾಣ ಯೋಜನೆಯೂ ಒಂದು. NH-34 ರ 17.6 ಕಿಮೀ ಉದ್ದದ ಬಾರಾಜಸತ್-ಬಾರಾಜಗುಲಿ ವಿಭಾಗ 4 ಪಥ ನಿರ್ಮಾಣಕ್ಕೂ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಇದನ್ನೂ ಓದಿ: ಪಶ್ಚಿಮ ಬಂಗಾಳದ ಎಸ್ಐಆರ್ ಕರಡಿನಲ್ಲಿ 58 ಲಕ್ಷ ಹೆಸರುಗಳು ಡಿಲೀಟ್
ಈ ಯೋಜನೆಗಳು ಕೋಲ್ಕತ್ತಾವನ್ನು ಸಿಲಿಗುರಿಯೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ ಮತ್ತು ಜನರ ಪ್ರಯಾಣದ ಸಮಯವನ್ನು ಸುಮಾರು 2 ಗಂಟೆಗಳ ಕಾಲ ಕಡಿಮೆ ಮಾಡುತ್ತದೆ. ಈ ಯೋಜನೆಗಳು ಈ ಪ್ರದೇಶದ ಆರ್ಥಿಕ ಚಟುವಟಿಕೆಗಳನ್ನು ಸುಧಾರಿಸಲು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ