ಕೆ.ಆರ್.ಪೇಟೆಯಲ್ಲಿ ಅಡುಗೆ ಅನಿಲ ಸಿಗುವುದಿಲ್ಲ ಎಂಬ ವದಂತಿಯಿಂದಾಗಿ ಸಿಲಿಂಡರ್‌ಗಾಗಿ ಜನರು ಮುಗಿಬಿದ್ದ ಘಟನೆ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಿ, ಗ್ಯಾಸ್ ಲಾರಿಯನ್ನು ಪೊಲೀಸ್ ಠಾಣೆಗೆ ಸ್ಥಳಾಂತರಿಸಿ ಅಲ್ಲಿಯೇ ಸಿಲಿಂಡರ್‌ಗಳನ್ನು ವಿತರಿಸಿದರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಾಗಿ ಗ್ರಾಹಕರು ಏಕಾಏಕಿ ಮುಗಿಬಿದ್ದ ಪರಿಣಾಮ ಭಾರೀ ಗೊಂದಲ ಸೃಷ್ಟಿಯಾದ ಘಟನೆ ಭಾನುವಾರ ನಡೆದಿದೆ. ಗ್ಯಾಸ್ ಸಿಗುವುದಿಲ್ಲ ಎಂಬ ವದಂತಿ ಅಥವಾ ಆತಂಕಕ್ಕೆ ಒಳಗಾದ ನೂರಾರು ಜನರು ಏಜೆನ್ಸಿಯ ಮುಂದೆ ಜಮಾಯಿಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೊನೆಗೆ ಗ್ಯಾಸ್ ವಿತರಣಾ ಲಾರಿಯನ್ನೇ ಪೊಲೀಸ್ ಠಾಣೆಗೆ ಸ್ಥಳಾಂತರಿಸಿ ಅಲ್ಲಿ ಸಿಲಿಂಡರ್ ಹಂಚಿಕೆ ಮಾಡಲಾದ ಅಪರೂಪದ ಪ್ರಸಂಗ ಜರುಗಿತು.

ಕೆ.ಆರ್.ಪೇಟೆ ಪಟ್ಟಣದ ಮಂಜುನಾಥ್ ಗ್ಯಾಸ್ ಏಜೆನ್ಸಿಯಲ್ಲಿ ಎಂದಿನಂತೆ ಇಂದು ಸಿಲಿಂಡರ್ ವಿತರಣಾ ಕಾರ್ಯ ನಡೆಯುತ್ತಿತ್ತು. ಆದರೆ, ಭಾನುವಾರ ರಜೆ ದಿನವಾದ ಕಾರಣ ಮತ್ತು ಮುಂದಿನ ದಿನಗಳಲ್ಲಿ ಗ್ಯಾಸ್ ಸಿಗುವುದಿಲ್ಲ ಎಂಬ ಸಣ್ಣದೊಂದು ಆತಂಕ ಸಾರ್ವಜನಿಕರಲ್ಲಿ ಮನೆಮಾಡಿತ್ತು. ಇದೇ ಕಾರಣಕ್ಕೆ ಬೆಳಗ್ಗೆಯಿಂದಲೇ ನೂರಾರು ಮಂದಿ ಏಜೆನ್ಸಿಯ ಮುಂದೆ ಜಮಾಯಿಸಿದ್ದರು. ಅಡುಗೆ ಅನಿಲ ತುಂಬಿದ ಲಾರಿ ಕಚೇರಿಯ ಮುಂದೆ ಬರುತ್ತಿದ್ದಂತೆಯೇ ಜನರು ಲಾರಿಯನ್ನು ಸುತ್ತುವರೆದರು.

ಲಾರಿಯಿಂದ ಸಿಲಿಂಡರ್ ಕೆಳಗಿಳಿಸಲು ಬಿಡದಂತೆ ಜನ ಮುಗಿಬಿದ್ದರು. ‘ನನಗೆ ಮೊದಲು ಬೇಕು, ನನಗೆ ಮೊದಲು ಬೇಕು’ ಎಂಬ ಹಠಕ್ಕೆ ಬಿದ್ದ ಗ್ರಾಹಕರು ಪರಸ್ಪರ ನೂಕಾಟ ತಳ್ಳಾಟದಲ್ಲಿ ತೊಡಗಿದರು. ಏಜೆನ್ಸಿ ಸಿಬ್ಬಂದಿ ಎಷ್ಟೇ ಮನವಿ ಮಾಡಿದರೂ ಜನರು ಸಾಲಿನಲ್ಲಿ ನಿಲ್ಲಲು ತಯಾರಿರಲಿಲ್ಲ. ಈ ಹಂತದಲ್ಲಿ ಏಜೆನ್ಸಿ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ತೀವ್ರ ಮಾತಿನ ಚಕಮಕಿ ಕೂಡ ನಡೆಯಿತು. ಜನಸಂದಣಿ ಮಿತಿ ಮೀರಿದ್ದರಿಂದ ಸಿಲಿಂಡರ್ ವಿತರಣೆ ಮಾಡುವುದು ಏಜೆನ್ಸಿಯವರಿಗೆ ಅಸಾಧ್ಯವಾಯಿತು.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಕೆ.ಆರ್.ಪೇಟೆ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ಆದರೆ ಜನರು ಶಾಂತರಾಗದ ಕಾರಣ, ಪೊಲೀಸರು ಒಂದು ಉಪಾಯ ಮಾಡಿದರು. ತುಂಬಿದ್ದ ಗ್ಯಾಸ್ ಸಿಲಿಂಡರ್ ಲಾರಿಯನ್ನು ನೇರವಾಗಿ ಪೊಲೀಸ್ ಠಾಣೆಯ ಆವರಣಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದರು.

ಲಾರಿಯು ಪೊಲೀಸ್ ಠಾಣೆಗೆ ತಲುಪಿದ ನಂತರ, ಪೊಲೀಸರ ಕಣ್ಗಾವಲಿನಲ್ಲಿ ಕಟ್ಟುನಿಟ್ಟಾದ ಕ್ಯೂ (ಸಾಲಿನಲ್ಲಿ) ನಿಲ್ಲುವಂತೆ ಜನರಿಗೆ ತಿಳಿಸಲಾಯಿತು. ಪೊಲೀಸರ ಸಮ್ಮುಖದಲ್ಲಿ ಯಾವುದೇ ಗಲಾಟೆ ಇಲ್ಲದೆ ಶಿಸ್ತುಬದ್ಧವಾಗಿ ಜನರಿಗೆ ಸಿಲಿಂಡರ್ ವಿತರಿಸಲಾಯಿತು. ಗ್ಯಾಸ್ ಪಡೆದ ಜನರು ನಿಟ್ಟುಸಿರು ಬಿಟ್ಟು ಮನೆಗೆ ತೆರಳಿದರು.

ಒಟ್ಟಾರೆಯಾಗಿ, ಕೆ.ಆರ್.ಪೇಟೆಯಲ್ಲಿ ಅಡುಗೆ ಅನಿಲಕ್ಕಾಗಿ ನಡೆದ ಈ ಹೈಡ್ರಾಮಾವು ಜಿಲ್ಲೆಯಾದ್ಯಂತ ಚರ್ಚೆಗೆ ಕಾರಣವಾಗಿದೆ. ಅನಗತ್ಯವಾಗಿ ಆತಂಕಕ್ಕೆ ಒಳಗಾಗಿ ಇಂತಹ ಪರಿಸ್ಥಿತಿ ನಿರ್ಮಿಸಿಕೊಳ್ಳಬೇಡಿ ಎಂದು ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಮದ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್-ಇಸ್ರೇಲ್ ನಡುವಿನ ಯುದ್ಧದಿಂದಾಗಿ ಎಲ್‌ಪಿಜಿ ಗ್ಯಾಸ್ ಪೂರೈಕೆ ಕೊರತೆಯಾಗಿದೆ ಎಂಬುದನ್ನು ಜನರು ಗಂಭೀರವಾಗಿ ಪರಿಗಣಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಕೊರತೆಯಿಲ್ಲ ಎಂದು ಸರ್ಕಾರ ಹೇಳಿದರೂ ಕೇಳದ ಜನರು ಸಿಲಿಂಡರ್ ಏಜೆನ್ಸಿ ಕಚೇರಿಗೆ ಮುಗಿಬಿದ್ದಿದ್ದಾರೆ. ಒಂದು ಏಜೆನ್ಸಿ ವ್ಯಾಪ್ತಿಯಲ್ಲಿ ದಿನಕ್ಕೆ 500 ಆಗುತ್ತಿದ್ದ ಬುಕಿಂಗ್ ಸಂಖ್ಯೆ ಇದೀಗ 3000 ಸಾವಿರ ದಾಟಿವೆ. ಹೀಗಾಗಿ, ಗ್ಯಾಸ್ ಸಿಲಿಂಡರ್ ಪೂರೈಕೆ ಸಮಸ್ಯೆ ಕೃತಕವಾಗಿ ಸೃಷ್ಟಿಯಾಗಿದೆಯೇ ಹೊರತು ಸಂಗ್ರಹ ಮತ್ತು ಯಥಾಸ್ಥಿತಿ ಪೂರೈಕೆ ಮಾತ್ರ ನಿಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಗೃಹಬಳಕೆ ಸಿಲಿಂಡರ್‌ಗೆ ಯಾವುದೇ ಕೊರತೆಯಿಲ್ಲ ಎಂದು ಸರ್ಕಾರ ತಿಳಿಸಿದೆ.

Source link
ಮಂಡ್ಯ ಪೊಲೀಸ್ ಠಾಣೆ, ಗ್ಯಾಸ್ ವಿತರಣಾ ಕೇಂದ್ರವಾದ ಕಥೆ; ಸಿಲಿಂಡರ್ ಲಾರಿಗೆ ಮುಗಿಬಿದ್ದ ಜನ, ಮುಂದೇನಾಯ್ತು?