ನೇಪಾಳದಲ್ಲಿ ಕುಳಿತು ಭಾರತದಲ್ಲಿ ನೂರಾರು ಕೋಟಿ ವಂಚನೆ ಮಾಡುತ್ತಿರುವವರನ್ನು ಹೆಡೆಮುರಿಕಟ್ಟಿದ ಮಂಗಳೂರು ಪೊಲೀಸರು!
ಮಂಗಳೂರು, ಫೆಬ್ರುವರಿ 06: ನೇಪಾಳದಲ್ಲಿ ಕುಳಿತು ಭಾರತವನ್ನೇ ಗುರಿಯಾಗಿಸಿಕೊಂಡು ನೂರಾರು ಕೋಟಿ ರೂಪಾಯಿ ವಂಚನೆ ಮಾಡುತ್ತಿದೆ ಅತಿದೊಡ್ಡ ಸೈಬರ್ ಫ್ರಾಡ್ ನೆಟ್ವರ್ಕ್ (ಸೈಬರ್ ವಂಚನೆ ಜಾಲ) ಮಂಗಳೂರು ಭೇದಿಸಿದ್ದಾರೆ. ನೇಪಾಳ ಪೊಲೀಸರ ಸಹಕಾರದೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ, ಅಲ್ಲಿಯೇ ತಂಗಿ ವಂಚನೆ ನಡೆಸುತ್ತಿದ್ದ 11 ಮಂದಿ ಭಾರತೀಯ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ವಂಚನೆಯ ಜಾಲವನ್ನು ನಿಯಂತ್ರಿಸುತ್ತಿದ್ದ ಚೀನಾದ ಹ್ಯಾಂಡ್ಲರ್ಗಳು
ಮಂಗಳೂರಿನ ಸೈಬರ್ ಎಕ್ನಾಮಿಕ್ ನಾರ್ಟಿಕ್ಸ್ (ಸಿಇಎನ್) ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ತನಿಖೆಯ ಜಾಡು ಹಿಡಿದು ಆರೋಪಿಗಳಿಗೆ ಪೊಲೀಸರು ತಲುಪಿದ್ದರು. ಬಂಧಿತ ತಂಡದಲ್ಲಿ ಭಾರತೀಯರ ಜೊತೆಗೆ ಚೀನಾ ಮೂಲದ ವಂಚಕರು ಸೇರಿದ್ದು, ಇಡೀ ಜಾಲವನ್ನು ಚೀನಾದ ಹ್ಯಾಂಡ್ಲರ್‌ಗಳು ನಿಯಂತ್ರಿಸುತ್ತವೆ. ಆರೋಪಿಗಳಿಂದ ಲ್ಯಾಪ್‌ಟಾಪ್‌ಗಳು, 21 ಮೊಬೈಲ್ ಫೋನ್‌ಗಳು, 20 ವಿವಿಧ ಕಂಪನಿಯ ಸಿಮ್ ಕಾರ್ಡ್‌ಗಳು ಹಾಗೂ 20 ಬ್ಯಾಂಕ್ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಒಂದೇ ಖಾತೆಯಿಂದ 167 ಕೋಟಿ ರೂ ಹಣ ವರ್ಗಾವಣೆ
ತನಿಖೆಯಲ್ಲಿ 624 ಬ್ಯಾಂಕ್ ಖಾತೆಗಳ ವಿವರಗಳಿವೆ, ಈ ಖಾತೆಗಳ ವಿರುದ್ಧ NCRP ಪೋರ್ಟಲ್‌ನಲ್ಲಿ 4580 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಒಂದು ಖಾತೆಯಲ್ಲೇ 167 ಕೋಟಿ ರೂಪಾಯಿ ಹಣ ವರ್ಗಾವಣೆ ನಡೆದಿರುವುದು ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ತನಿಖೆ ವೇಳೆ ವಂಚಕರು ಬಳಸಿದ್ದ ಉಳಿದ 10 ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆದಿದೆ, ಈ ಖಾತೆಗಳ ಮೂಲಕ ಸುಮಾರು 30.70 ಕೋಟಿ ರೂಪಾಯಿ ಹಣ ವರ್ಗಾವಣೆ ನಡೆದಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ ಮ್ಯೂಲ್ ಅಕೌಂಟ್ ಸೈಬರ್ ದಂಧೆಗೆ ಸಂಬಂಧಿಸಿದಂತೆ ಶಾಕ್: ರಾಜ್ಯಾದ್ಯಂತ ಮೆಗಾ ದಾಳಿ, 13 ಮಾಸ್ಟರ್ ಮೈಂಡ್‌ಗಳ ಬಂಧನ
ಹೇಗೆ ನಡೀತಿತ್ತು ವಂಚನೆ?
ಸಾಮಾಜಿಕ ಜಾಲತಾಣಗಳ ಮೂಲಕ ಖಾತೆದಾರರು ಹಾಗೂ ಏಜೆಂಟರನ್ನು ನೇಮಿಸಿಕೊಂಡು, ದಿನಕ್ಕೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ವಂಚನೆ ಮಾಡಿದ್ದಾರೆ. ವಂಚನೆಯ ಹಣವನ್ನು ಡಾಲರ್‌ಗೆ ಪರಿವರ್ತಿಸಿ ವಿದೇಶಗಳಿಗೆ ಕಳುಹಿಸಲಾಗುವುದಿಲ್ಲ. ಈ ಜಾಲಕ್ಕೆ ಕಾಂಬೋಡಿಯಾದಲ್ಲಿರುವ ವಂಚನಾ ಬಿಪಿಓ ಸಹ ಬೆಂಬಲ ನೀಡುತ್ತಿದೆ.
ಬಂಧಿತ ಆರೋಪಿಗಳಿವರು!
ಗುಜರಾತಿನ ಬಾವಾ ನಗರ ಜಿಲ್ಲೆಯ ನಿವಾಸಿ ಮಕವನ್ ವಿಕ್ರಂ(25), ಪಶ್ಚಿಮ ಬಂಗಾಳದ ಸೌಮ್ಯಾದಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಂಡ್ ನ ಸಿಂಗಾಪುರ ಜಿಲ್ಲೆ ಪುಪ್ಲ ಶಿವಕುಮಾರ್ ರಾವ್(32), ಉತ್ತರಪ್ರದೇಶದ ಮಾವೋ ಜಿಲ್ಲೆಯ ನಿವಾಸಿ ಗೌರವ ಪಾಂಡೆ(24), ಉತ್ತರ ಪ್ರದೇಶದ ಸುಲ್ತಾನ್ ಪುರ್ ಜಿಲ್ಲೆ ಹರ್ಷ್ ಮಿರ್ಜಾಸ್ರಾ(22), ಉತ್ತರ ಪ್ರದೇಶದ ಸುಲ್ತಾನ್ ಪುರ್ ಜಿಲ್ಲೆ ಹರ್ಷ್ ಮಿರ್ ಜಾಸ್ರಾ(22), ಮೊಹಮ್ಮದ್ ಆಕೀಬ್ ಅಲಿ(27), ಬಿಹಾರದ ನಲಂದಾ ಜಿಲ್ಲೆಯ ರಾಜೀವ್ ರಂಜನ್ ಕುಮಾರ್(30), ಜಾರ್ಖಂಡ್ ನಿವಾಸಿ ಮಿಥುನ್ ಕುಮಾರ್ ಮಂಗರಾಜ್(38), ರಾಜಸ್ಥಾನದ ಜೈಪುರದ ಓಮ್ ಪ್ರಕಾಶ್ ಯಾಧವ್ (37), ಜಾನ್ಸಿ ಮೂಲದ ನೌಶಾದ್ ಅಲಿ(34) ಸೇರಿ ಒಟ್ಟು 11 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.