
ಬೆಂಗಳೂರು, (ಮಾರ್ಚ್ 10): ದಲಿತ ಒಳಮೀಸಲಾತಿ (ಆಂತರಿಕ ಮೀಸಲಾತಿ)ನೀಡಿಕೆಯು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಜಟಾಪಟಿಗೆ ಕಾರಣವಾಗಿದೆ. ಸರ್ಕಾರ ಒಳ ಮೀಸಲಾತಿ ನೀಡದೇ ಸರ್ಕಾರಿ ನೌಕರರ ನೇಮಕಾತಿಗೆ ಮುಂದಾಗಿದೆ. ಇದಕ್ಕೆ ದಲಿತ ಎಡಗೈ ನಾಯಕರು ವಿರೋಧಿಸುತ್ತಿದ್ದಾರೆ. ಇದರಿಂದ ಸ್ವಪಕ್ಷದಲ್ಲೇ ಹೊತ್ತಿಕೊಂಡ ಈ ಭಿನ್ನಾಭಿಪ್ರಾಯದ ಕಿಡಿ, ಪರಿಸ್ಥಿತಿ ಕೈಮೀರುತ್ತಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಕಚೇರಿಯಲ್ಲಿ ದಲಿತ ಸಚಿವರು ಮಹತ್ವದ ಸಭೆ ನಡೆಸಿದ್ದು, ಗೊಂದಲ ಪರಿಹಾರ ಕುರಿತು ಸಿದ್ದರಾಮಯ್ಯ ಜೊತೆಗೆ ಚರ್ಚಿಸಿದ್ದಾರೆ.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಚಿವ ಮುನಿಯಪ್ಪ, ಒಳಮೀಸಲಾತಿ ಆಯ್ಕೆ ಮಾಡಿಕೊಳ್ಳುವುದಾಗಿ ಸಿಎಂ ಕೂಡ ಭರವಸೆ ನೀಡಿದ್ದಾರೆ. ಮಾರ್ಚ್ 27 ರಂದು ವಿಶೇಷ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನವಾಗುತ್ತದೆ. ಬಲ ಸಮುದಾಯ ’ನಾಯಕರು ಒಳಮೀಸಲಾತಿಗೆ ಒಪ್ಪಿಕೊಂಡಿದ್ದಾರೆ. ಎಡ, ಬಲ ಸಮುದಾಯಗಳಿಗೆ ಸರಿಸಮವಾಗಿ ಒಳಮೀಸಲಾತಿ ಹಂಚಿಕೆ ಮಾಡಲಾಗುತ್ತೆ. ಮಾ.27ರವರೆಗೆ ಯಾವುದೇ ನೇಮಕಾತಿ ಪ್ರಕಟಣೆ ಪ್ರಕಟಣೆ ಆಗಲ್ಲ ಎಂದು ಸ್ಪಷ್ಟಪಡಿಸಿದರು.