
ಬೆಂಗಳೂರು, (ಏಪ್ರಿಲ್ 10): ದಾವಣಗೆರೆ ದಕ್ಷಿಣ ಉಪ ಚುನಾವಣೆ (ದಾವಣಗೆರೆ ಉಪಚುನಾವಣೆ) ಮುಗಿದರೂ ಸಹ ಕಾಂಗ್ರೆಸ್ ಮುಸ್ಲಿಂ ನಾಯಕರಲ್ಲಿನ (ಕಾಂಗ್ರೆಸ್ ಮುಸ್ಲಿಂ ಮುಖಂಡರು) ಕಿಚ್ಚು ತಣ್ಣಗಾಗಿಲ್ಲ. ಬದಲಾಗಿ ಮತ್ತಷ್ಟು ತೀವ್ರ ಸ್ವರೂಪದಲ್ಲಿದೆ. ಹೌದು…ಬೈ ಎಲೆಕ್ಷನ್ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ದಾವಣಗೆರೆ ಚುನಾವಣೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್, ನಜೀರ್ ಅಹಮದ್, ಅಬ್ದುಲ್ ಜಬ್ಬರ್ ವಿರುದ್ಧ ಆರೋಪ ಕೇಳಿಬಂದಿದೆ. ಈ ಸಂಬಂಧ ಕಾಂಗ್ರೆಸ್ ಮುಸ್ಲಿಂ ನಾಯಕರು ರಣದೀಪ್ ಸುರ್ಜೇವಾಲಗೆ ದೂರು ನೀಡಿದ್ದಾರೆ. ಇದರೊಂದಿಗೆ ಟಿಕೆಟ್ ವಿಚಾರವಾಗಿ ಮುಸ್ಲಿಂ ನಾಯಕರಲ್ಲಿ ಇದ್ದ ಭಿನ್ನಾಭಿಪ್ರಾಯ ಇದೀಗ ಅಧಿಕೃತವಾಗಿ ಹೊರಬಿದ್ದಿದೆ. ಅದರಲ್ಲೂ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಕಾಂಗ್ರೆಸ್ ಮುಸ್ಲಿಂ ನಾಯಕರಲ್ಲಿ ತೀವ್ರ ಅಸಮಾಧಾನ ಇರುವುದು ಬಹಿರಂಗವಾಗಿದೆ.
ಜಮೀರ್ ಅಹ್ಮದ್ ವಿರುದ್ಧ ಗಂಭೀರ ಆರೋಪ
ಶಾಸಕರಾದ ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್, ಯಾಸಿನ್ ಖಾನ್ ಪಠಾಣ್ ಹಾಗೂ ಬಿಲ್ಕೀಸ್ ಬಾನು ಅವರು ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಸಚಿವ ಜಮೀರ್ ಏಕಚಕ್ರಾಧಿಪತ್ಯದ ವಿರುದ್ಧ ಸೆಡ್ಡು ಹೊಡೆದಿರೋ ಕೆಲ ಅಲ್ಪಸಂಖ್ಯಾತ ನಾಯಕರು, ದಾವಣಗೆರೆ ಬೈಎಲೆಕ್ಷನ್‌ನಲ್ಲಿ ಕೆಲಸ ಮಾಡಿದವರಿಗೆ ಕೂಲಿ ಕೊಡಿ ಅಂತಿದ್ದಾರೆ. ಕೆಲಸ ಮಾಡಿದವರ ಲೆಕ್ಕ ಇಡಿ ಅಂತಿದ್ದು, ಪ್ರಾರಂಭದಲ್ಲಿ ಬೈಲೆಕ್ಷನ್ ನಿಂದ ದೂರ ಉಳಿದಿದ್ದ ಜಮೀರ್ ವಿರುದ್ಧ ಪರೋಕ್ಷವಾಗಿಯೇ ರಿಜ್ವಾನ್ ಅರ್ಷದ್, ಸಲೀಂ ಅಹಮ್ಮದ್ ಜೋಡಿ ಗುಡುಗಿದೆ. ಹೌದು..ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ಸಮರ್ಥ್‌ಗೆ ಒಪ್ಪಿಗೆ ನೀಡಿದ್ವಿ. ಆನಂತರ ಪಕ್ಷಕ್ಕೆ ಕೊಟ್ಟ ಮಾತಿನಂತೆ ನಾವು ಕೆಲಸ ಮಾಡಿದ್ದೇವೆ. ಆದರೆ, ಕೆಲವರು ಕೆಲಸ ಮಾಡಿಲ್ಲ ಎಂದು ಶಾಸಕ ರಿಜ್ವಾನ್ ಅರ್ಷದ್ ಪರೋಕ್ಷವಾಗಿ ಸಚಿವ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ನೋಡಿ: ಏಕವಚನದಲ್ಲಿ ಬೈದಿದ್ದ ಸಚಿವ ಎಸ್ ಎಸ್ ಮಲ್ಲಿಕಾರ್ಜುರನ್ನು ಕ್ಷಮಿಸಿ ಪ್ರಚಾರಕ್ಕೆ ಬಂದ ಜಮೀರ್
ನಾವೆಲ್ಲಾ ಒಗ್ಗೂಡಿ ಕೆಲಸ ಮಾಡಿದ್ದೇವೆ ಎಂದು ರಿಜ್ವಾನ್ ಅರ್ಷದ್ ಹೇಳಿದ್ದಾರೆ. ಪಟ್ಟಿಯಲ್ಲಿ ಸಚಿವ ಜಮೀರ್ ಹೆಸರು ಇಲ್ಲ. ವಿರೋಧ ಪಕ್ಷದವರ ಜೊತೆಗೂಡಿ ಪಕ್ಷದ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಕಾಂಗ್ರೆಸ್ ಸೋಲಿಸೋಕೆ ಕೆಲ ಪಕ್ಷದ ಮುಖಂಡರೇ ಹುನ್ನಾರ ಮಾಡಿದ್ರು ಎಂದು ರಿಜ್ವಾನ್, ಸಲೀಂ ಅಹ್ಮದ್ ಗಂಭೀರ ಆರೋಪ ಮಾಡಿದ್ದಾರೆ.
ಜಮೀರ್ ಅಹಮ್ಮದ್ ಖಾನ್ ಕೈಕೊಟ್ಟಿದ್ದಕ್ಕೆ ಪರಿಸ್ಥಿತಿ ಕೈ ಮೀರಿದಾಗ ಸಾದಿಕ್ ನನ್ನ ಮನವೊಲಿಸಲು ರಿಜ್ವಾನ್ ಅರ್ಷದ್ ಮತ್ತು ಸಲೀಂ ಅಹ್ಮದ್ ಗೆ ಜಬಾವ್ದಾರಿ ಕೊಡಲಾಗಿದೆ. ಸಿಎಂ, ಡಿಸಿಎಂ ಸೂಚನೆಯಂತೆಯೇ ಮುನಿಸು ಶಮನ ಮಾಡೋ ಕೆಲಸ ಇವರಿಬ್ಬರು ಮಾಡಿದ್ದರು. ಇದೀಗ ಜಮೀರ್ ವಿರುದ್ಧ ಕೆಲ ಮುಸ್ಲಿಂ ನಾಯಕರು ಸಿಡಿದೆದ್ದಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಹೈಕಮಾಂಡ್‌ಗೆ ದೂರು ನೀಡಿದ್ದಾರೆ.
ತೆರೆಮರೆಯಲ್ಲಿದ್ದ ಮುಸ್ಲಿಂ ನಾಯಕರ ಗುದ್ದಾಟ ಬಯಲಿಗೆ
ದಾವಣಗೆರೆ ದಕ್ಷಿಣ ಟಿಕೆಟ್ ಹಂಚಿಕೆ ವೇಳೆ ಅಲ್ಪಸಂಖ್ಯಾತರ ಮಧ್ಯೆ ಭಿನ್ನಾಭಿಪ್ರಾಯ ಬಂದಿತ್ತು. ಮುಸ್ಲಿಂ ನಾಯಕರಿಗೆ ಟಿಕೆಟ್ ಕೊಡಿಸುತ್ತೇನೆಂದು ಜಮೀರ್ ಭರವಸೆ ಕೊಟ್ಟಿದ್ದರು. ಆ ವೇಳೆ ತಾನೇ ಅಖಂಡ ಕರ್ನಾಟಕದ ಮುಸ್ಲಿಂ ಅಧಿಪತಿ ಎಂಬಂತೆ ಜಮೀರ್ ಅಬ್ಬರಿಸಿದ್ದರು. ಆದರೆ ಪ್ರಯತ್ನಕ್ಕೆ ಸಹಕಾರ ಸಿಗದ ಮುಸ್ಲಿಂ ನಾಯಕರಿಗೆ ದಾವಣಗೆರೆ ದಕ್ಷಿಣದಲ್ಲಿ ಟಿಕೆಟ್ ಸಿಗಲೇ ಇಲ್ಲ. ಹೀಗಾಗಿ ಟಿಕೆಟ್ ಕೊಡಿಸುತ್ತೇನೆಂದುಭರವಸೆ ಕೊಟ್ಟಿದ್ದ ಜಮೀರ್ ಅಂತರ ಕಾಯ್ದುಕೊಂಡ್ರು. ದಾವಣಗೆರೆ ದಕ್ಷಿಣದಿಂದ ದೂರ ಉಳಿದಿದ್ದು, ಇದು ಕೆಲ ಅಲ್ಪಸಂಖ್ಯಾತ ಮುಖಂಡರಿಗೆ ಸಿಟ್ಟು ತರಿಸಿತ್ತು. ಹೀಗೆ ತೆರೆಮರೆಯಲ್ಲೇ ನಡೆದಿದ್ದ ಮುಸ್ಲಿಂ ನಾಯಕರ ಗುದ್ದಾಟ ಈಗ ಬಹಿರಂಗವಾಗಿ ಹೊರಬಂದಂತಾಗಿದೆ.
ದಾವಣಗೆರೆ ಬಂದು ಹಿಂಬಾಗಿಲಿನಿಂದ ಹೋಗಿದ್ದ ಜಮೀರ್
ಟಿಕೆಟ್ ಘೋಷಣೆಯಾದ ಬಳಿಕ ಜಮೀರ್ ಅಹಮ್ಮದ್ ಖಾನ್ ದಾವಣಗೆರೆ ಕಡೆ ಮುಖ ಹಾಕಿಲ್ಲ. ಕೇರಳ ಚುನಾವಣೆ ನೆಪ ಮಾಡಿಕೊಂಡು ಅಲ್ಲಿಯೇ ಠಿಕಾಣಿ ಹೂಡಿದ್ದರು. ಇತ್ತ ಅಭಿಮಾನಿಗಳು ಹಾಗೂ ಮುಸ್ಲಿಂ ಕಾರ್ಯಕರ್ತರು ಜಮೀರ್ ಕರೆಸಿ ಎಂದು ಡಿಕೆಶಿ, ಸಿದ್ದರಾಮಯ್ಯ ಹೋದಲ್ಲೆಲ್ಲ ಹಿಡಿದಿದ್ದರು. ಕೊನೆಗೆ ಸಿಎಂ ಸೂಚನೆಯಂತೆ ಜಮೀರ್ ಕೇಳಿದಾಗ ದಾವಣಗೆರೆಗೆ ಹಾರಿಬಂದಿದ್ದು, ಎಸ್ ಎಸ್ ಎಸ್ ಮಲ್ಲಿಕಾರ್ಜುನ ಮನೆಯಲ್ಲಿ ಊಟ ಸವಿದು ಅವರ ನಡುವೆ ಭಿನ್ನಾಭಿಪ್ರಾಯವಿಲ್ಲ ಎಂದು ಹಿಂಬಾಗಿಲಿನಿಂದ ಹೋಗಿದ್ದು, ಮತ್ತೆ ದಾವಣಗೆರೆ ಕಡೆ ತಲೆಯೇ ಇಲ್ಲ. ಆದರೆ, ದಾವಣಗೆರೆಯಲ್ಲಿ ಪ್ರಚಾರ ಮಾಡದೇ ನೇರವಾಗಿ ಬಾಗಲಕೋಟೆಯಲ್ಲಿ ಎರಡು ದಿನ ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಇದು ಸಹ ಕೆಲ ನಾಯಕರ ಕಣ್ಣು ಕೆಂಪಾಗಿಸಿದೆ.
ರಿಸಲ್ಟ್ ಮೇಲೆ ನಿಂತಿದೆ ಮುಂದಿನ ಬೆಳವಣಿಗೆ
ಹೌದು…. ಒಂದು ವೇಳೆ ರಿಸಲ್ಟ್ ವ್ಯತರಿಕ್ತವಾಗಿ ಅಂದರೆ ಸಮರ್ಥ್ ಸೋತರೆ ಭಿನ್ನಮತ ಮತ್ತಷ್ಟು ಸ್ಫೋಟಗೊಳ್ಳಲಿದೆ. ಜಮೀರ್ ವಿರೋಧ ಮುಸ್ಲಿಂ ನಾಯಕರಾದ ಎಸ್ ಎಸ್ ಎಸ್ ಮಲ್ಲಿಕಾರ್ಜುನ ಸೇರಿದಂತೆ ಹಲವು ಲಿಂಗಾಯರ ನಾಯಕರು ಸಹ ಜಮೀರ್ ಮೇಲೆ ಮುಗಿಬೀಳುವ ಸಾಧ್ಯತೆಗಳಿದ್ದು, ದಾವಣಗೆರೆ ದಂಗಲ್ ತೀವ್ರ ಸ್ವರೂಪ ಪಡೆದುಕೊಳ್ಳುವುದು ಗ್ಯಾರಂಟಿ.
ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರ ನಡುವಿನ ಭಿನ್ನಮತ ಸ್ಫೋಟಗೊಂಡಿದ್ದು, ಮುಸ್ಲಿಂ ನಾಯಕರ ನಡುವೆ ಎರಡು ಬಣಗಳು ಸೃಷ್ಟಿಯಾಗಿದೆ. ಇದು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಬಂದು ನಿಲ್ಲಲಿದೆ ಎನ್ನುವುದನ್ನು ಕಾದುನೋಡಬೇಕಿದೆ.