ಮೈಸೂರಿನಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಚಾಮುಂಡಿ ಬೆಟ್ಟದ ಕೋತಿಗಳು ತತ್ತರಿಸಿವೆ. ತಮ್ಮ ಬಾಯಾರಿಕೆ ನೀಗಿಸಿಕೊಳ್ಳಲು ಪ್ರವಾಸಿಗರಿಂದ ತಂಪು ಪಾನೀಯ ಕಿತ್ತು ಕುಡಿಯುತ್ತಿದ್ದು, ಈ ದೃಶ್ಯಗಳು ವೈರಲ್ ಆಗಿವೆ. ಆದರೆ, ಈ ಪಾನೀಯಗಳು ಅವುಗಳ ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ಎಚ್ಚರಿಸಿದ್ದಾರೆ.

ಮೈಸೂರು (ಮಾ.30): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಕೇವಲ ಮನುಷ್ಯರಷ್ಟೇ ಅಲ್ಲದೆ ಪ್ರಾಣಿ-ಪಕ್ಷಿಗಳು ಕೂಡ ಈ ಬಿಸಿಲ ಧಗೆಯಿಂದ ತತ್ತರಿಸಿ ಹೋಗಿವೆ. ಈ ನಡುವೆ ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕೋತಿಗಳು ತಮ್ಮ ದಣಿವು ಆರಿಸಿಕೊಳ್ಳಲು ವಿಭಿನ್ನ ಹಾದಿ ಹಿಡಿದಿರುವ ಅಪರೂಪದ ದೃಶ್ಯಗಳು ಕಂಡುಬಂದಿವೆ.

ಸಾಮಾನ್ಯವಾಗಿ ಕೋತಿಗಳು ಭಕ್ತರ ಕೈಯಿಂದ ಹಣ್ಣು-ಹಂಪಲು ಅಥವಾ ತಿಂಡಿಗಳನ್ನು ಕಿತ್ತುಕೊಳ್ಳುವುದು ಸಹಜ. ಆದರೆ, ಈಗ ಮೈಸೂರಿನಲ್ಲಿ ಕಂಠಪೂರ್ತಿ ಬಿಸಿಲಿರುವುದರಿಂದ ಕೋತಿಗಳಿಗೆ ಹಸಿವಿಗಿಂತ ಹೆಚ್ಚಾಗಿ ಬಾಯಾರಿಕೆಯಾಗುತ್ತಿದೆ. ಹೀಗಾಗಿ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರ ಕೈಯಲ್ಲಿದ್ದ ತಂಪು ಪಾನೀಯದ (Cool Drinks) ಬಾಟಲಿಗಳ ಮೇಲೆ ಈ ವಾನರ ಸೈನ್ಯ ದಾಳಿ ನಡೆಸುತ್ತಿದೆ. ಭಕ್ತರ ಕೈಯಿಂದ ಜ್ಯೂಸ್ ಹಾಗೂ ಸೋಡಾ ಬಾಟಲಿಗಳನ್ನು ಕಿತ್ತುಕೊಂಡು ಅರಾಮವಾಗಿ ಕುಡಿಯುವ ಮೂಲಕ ಕೋತಿಗಳು ದಣಿವು ನಿವಾರಿಸಿಕೊಳ್ಳುತ್ತಿವೆ.

ವಿಶೇಷವೆಂದರೆ, ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಓಡಾಡುವ ಪ್ರವಾಸಿಗರು ಹೆಚ್ಚಾಗಿ ಬಳಸುವ ‘ಜಿರಾ’ (Jeera Soda) ಪಾನೀಯದ ಬಾಟಲಿಗಳನ್ನೇ ಕೋತಿಗಳು ಟಾರ್ಗೆಟ್ ಮಾಡುತ್ತಿವೆ. ಭಕ್ತರ ಕೈಯಲ್ಲಿದ್ದ ಬಾಟಲಿಗಳನ್ನು ಜಾಣ್ಮೆಯಿಂದ ಕಿತ್ತುಕೊಳ್ಳುವ ಕೋತಿಗಳು, ಮನುಷ್ಯರಂತೆಯೇ ಬಾಟಲಿಯ ಮುಚ್ಚಳ ತೆರೆದು ಅಥವಾ ತೂತು ಮಾಡಿ ಪಾನೀಯವನ್ನು ಹೀರುತ್ತಿವೆ. ಸಕ್ಕರೆ ಅಂಶವಿರುವ ಮತ್ತು ತಂಪಾಗಿರುವ ಈ ಪಾನೀಯವನ್ನು ಕುಡಿದು ವಾನರ ಸೈನ್ಯ ಫುಲ್ ಖುಷ್ ಆಗಿರುವ ದೃಶ್ಯಗಳು ಪ್ರವಾಸಿಗರ ಗಮನ ಸೆಳೆಯುತ್ತಿವೆ.

ಚಾಮುಂಡಿ ಬೆಟ್ಟದ ರಸ್ತೆಯ ತಿರುವುಗಳಲ್ಲಿ ಕುಳಿತು ಕೋತಿಗಳು ಮನುಷ್ಯರಂತೆ ಸ್ಟೈಲಿಶ್ ಆಗಿ ಕೂಲ್ ಡ್ರಿಂಕ್ಸ್ ಕುಡಿಯುತ್ತಿರುವ ದೃಶ್ಯವನ್ನು ಅಲ್ಲಿಗೆ ಬಂದಿದ್ದ ಪ್ರವಾಸಿಗರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ‘ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ಬಿಸಿಲಿನ ತಾಪ ತಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
View this post on Instagram
A post shared by Sathish Kumar (@sathish_reports)

ಕೋತಿಗಳು ತಂಪು ಪಾನೀಯ ಕುಡಿಯುವುದು ನೋಡಲು ತಮಾಷೆಯಾಗಿದ್ದರೂ, ಇದು ಅವುಗಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಡುತ್ತಾರೆ. ಪಾನೀಯಗಳಲ್ಲಿರುವ ಅತಿಯಾದ ಸಕ್ಕರೆ ಮತ್ತು ಗ್ಯಾಸ್ ಅಂಶಗಳು ಪ್ರಾಣಿಗಳ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹೀಗಾಗಿ ಪ್ರವಾಸಿಗರು ಪ್ರಾಣಿಗಳಿಗೆ ಇಂತಹ ಪಾನೀಯಗಳನ್ನು ನೀಡಬಾರದು ಮತ್ತು ಅವುಗಳಿಗೆ ಕಿತ್ತುಕೊಳ್ಳಲು ಅವಕಾಶ ನೀಡದಂತೆ ಜಾಗರೂಕತೆ ವಹಿಸಬೇಕು ಎಂದು ಮನವಿ ಮಾಡಲಾಗಿದೆ.

ಒಟ್ಟಿನಲ್ಲಿ, ಮೈಸೂರಿನ ಬಿಸಿಲಿನ ತೀವ್ರತೆಗೆ ಮನುಷ್ಯರಂತೆ ಕೋತಿಗಳು ಕೂಡ ಅಪ್‌ಡೇಟ್ ಆಗಿದ್ದು, ಸಾಫ್ಟ್ ಡ್ರಿಂಕ್ಸ್ ಮೂಲಕ ತಮ್ಮ ದಾಹ ತೀರಿಸಿಕೊಳ್ಳುತ್ತಿರುವುದು ಒಂದು ಅಪರೂಪದ ವಿದ್ಯಮಾನವಾಗಿದೆ. ಆದರೆ, ಈ ಡ್ರಿಂಕ್ಸ್ ಕೋತಿಗಳ ದೇಹಕ್ಕೆ ಅನಾರೋಗ್ಯ ತರಬಾರದು ಎಂಬುದು ಸ್ಥಳೀಯರ ಆಶಯವಾಗಿದೆ. ಜೊತೆಗೆ, ಅರಣ್ಯ ಅಧಿಕಾರಿಗಳು ಕೂಡ ಈ ಪ್ರಾಣಿಗಳ ಬಗ್ಗೆ ಗಮನಹರಿಸಬೇಕಿದೆ.

Source link
ಚಾಮುಂಡಿ ಬೆಟ್ಟದಲ್ಲಿ ಬಿಸಿಲ ಬೇಗೆಯ ದಣಿವಿಗೆ 'ಕೂಲ್ ಡ್ರಿಂಕ್ಸ್ ಕುಡಿದ ಕೋತಿಗಳು'; ಮಂಕೀಸ್ ರಾಕ್, ಭಕ್ತರು ಶಾಕ್!