ಜೋಹಾನ್ಸ್ ಬರ್ಗ್, ನವೆಂಬರ್ 21: ದಕ್ಷಿಣ ಆಫ್ರಿಕಾ ದೇಶಕ್ಕೆ 3 ದಿನಗಳ ಭೇಟಿ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ (ನರೇಂದ್ರ ಮೋದಿ) ಅವರು ಇಂದು ಶುಕ್ರವಾರ ಜೋಹಾನ್ಸ್‌ಬರ್ಗ್ ನಗರಕ್ಕೆ ಕಾಲಿಟ್ಟರು. ಏರ್‌ಪೋರ್ಟ್‌ನಲ್ಲಿ ಪ್ರಧಾನಿಗೆ ಆತ್ಮೀಯ ಸ್ವಾಗತ ಸಿಕ್ಕಿತು. ಸಾಂಸ್ಕೃತಿಕ ನೃತ್ಯದ ಮೂಲಕ ಮೋದಿ ಆಗಮನವನ್ನು ಸೌತ್ ಆಫ್ರಿಕನ್ನರು ಸಂಭ್ರಮಿಸಿದರು. ಸೌತ್ ಆಫ್ರಿಕಾದ ಅತಿದೊಡ್ಡ ನಗರವೆನಿಸಿದ ಇಲ್ಲಿಯೇ ಜಿ20 ಶೃಂಗಸಭೆ. ಇದರಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ಅವರು ಜೋಹಾನ್ಸ್ ಬರ್ಗ್ ನಗರಕ್ಕೆ ಆಗಮಿಸಿದ್ದಾರೆ.
ಜೋಹಾನ್ಸ್ ಬರ್ಗ್ ನಲ್ಲಿ ನವೆಂಬರ್ 22 ಮತ್ತು 23 ರಂದು ಜಿ20 ಸಮಿತ್ ನಡೆಯುತ್ತಿದೆ. ಇದು 20ನೇ ಜಿ20 ಶೃಂಗಸಭೆ. ಗ್ಲೋಬಲ್ ಸೌತ್ ಎಂದು ಬಣ್ಣಿಸಲಾಗುವ ಅಭಿವೃದ್ಧಿ ದೇಶಶೀಲಗಳಲ್ಲಿ ಸತತ ನಾಲ್ಕನೇ ಜಿ20 ಶೃಂಗಸಭೆಯೂ ಹೌದು. ಆಫ್ರಿಕನ್ ನೆಲದಲ್ಲಿ ನಡೆಯುವ ಮೊದಲ ಜಿ20 ಸಮಿತಿ ಇದು. ಆಫ್ರಿಕನ್ ದೇಶಗಳನ್ನು ಜಿ20 ಗುಂಪಿಗೆ ಸೇರಿಸಲು ಭಾರತದ ಪಾತ್ರ ಪ್ರಮುಖವಾಗಿತ್ತು ಎಂಬುದು ವಿಶೇಷ. ಈ ವರ್ಷದ ಜಿ20 ಶೃಂಗಸಭೆಯ ವಿಷಯ ‘ಐಕ್ಯತೆ, ಸಮಾನತೆ ಮತ್ತು ಸುಸ್ಥಿರತೆ’ ಎಂದು ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಬಿಹಾರದ ನೂತನ ಮಂತ್ರಿಗಳಿಗೆ ಖಾತೆ ಹಂಚಿಕೆ; ನಿತೀಶ್ ಕುಮಾರ್ ಸಂಪುಟದ ಸಚಿವರ ಪಟ್ಟಿ ಇಲ್ಲಿದೆ
16ನೇ ಶೃಂಗಸಭೆ ಇಟಲಿಯಲ್ಲಿ ನಡೆದಿತ್ತು. ಅದಾದ ಬಳಿಕ ನಾಲ್ಕು ಶೃಂಗಸಭೆಗಳು ಭಾರತವೂ ಸೇರಿ ನಾಲ್ಕು ಅಭಿವೃದ್ಧಿಶೀಲ ದೇಶಗಳಲ್ಲಿ ನಡೆದಿವೆ. 17ನೇ ಇಂಡೋನೇಷ್ಯಾದಲ್ಲಿ ನಡೆದ ಸಭೆ, 18ನೇ ಜಿ20 ಸಮಿತಿ 2023ರಲ್ಲಿ ಭಾರತದಲ್ಲಿ ನಡೆದಿತ್ತು. ಅದಾದ ಬಳಿಕ 2024ರ ಜಿ20 ಸಭೆ ಬ್ರಿಜಿಲ್‌ನಲ್ಲಿ ನಡೆಯಿತು. ಈಗ ಈ ವರ್ಷ ಸೌತ್ ಆಫ್ರಿಕಾದಲ್ಲಿ ನಡೆಯುತ್ತಿದೆ. ಮುಂದಿನ ವರ್ಷ ಅಮೆರಿಕದಲ್ಲಿ ಈ ಸಮಿಟ್ ನಡೆಯುತ್ತಿದೆ.
ನರೇಂದ್ರ ಮೋದಿ ಜೋಹಾನ್ಸ್ ಬರ್ಗ್ ಏರ್‌ಪೋರ್ಟ್‌ನಲ್ಲಿ ಸ್ವಾಗತ ಪಡೆದಿರುವುದು
#ವೀಕ್ಷಿಸಿ | 20 ನೇ ಜಿ 20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ಗೆ ಬಂದಿಳಿದರು
(ಮೂಲ: ANI/DD) pic.twitter.com/qV6IKd51TU
– ANI (@ANI) ನವೆಂಬರ್ 21, 2025
ಟ್ರಂಪ್, ಜಿನ್ಪಿಂಗ್ ಗೈರು?
ಜಿ20 ಗುಂಪಿನಲ್ಲಿರುವ ಎರಡು ಅತಿ ಬಲಿಷ್ಠ ದೇಶಗಳ ನಾಯಕರು ಈ ಬಾರಿಯ ಶೃಂಗಸಭೆಗೆ ಗೈರಾಗಿರುವುದು ಗಮನಾರ್ಹ ಸಂಗತಿ. ದಕ್ಷಿಣ ಆಫ್ರಿಕಾದಲ್ಲಿ ಬಿಳಿಯ ಸಮುದಾಯದವರನ್ನು ತುಚ್ಛವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಹೇಳುತ್ತಿರುವ ಡೊನಾಲ್ಡ್ ಟ್ರಂಪ್ ಅವರು ಜಿ20 ಸಮಿಟ್ ಅನ್ನು ಬಾಯ್ಕಾಟ್ ಮಾಡಿದ್ದಾರೆ. ಇನ್ನೊಂದೆಡೆ, ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ ಅವರು ಕೂಡ ಪ್ರವಾಸವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಶೃಂಗಸಭೆ ಪ್ರವಾಸಕ್ಕೆ ಕತ್ತರಿ ಹಾಕಿದ್ದಾರೆ.
ಇದನ್ನೂ ಓದಿ: ಸದ್ಯ ಷೇರುಪೇಟೆ ಸುರಕ್ಷಿತ ಇಲ್ಲ; ಕಾದಿದೆ ವಿಪತ್ತು: ವ್ಯಾಲ್ಯುಯೇಶನ್ ಎಕ್ಸ್‌ಪರ್ಟ್ ದಾಮೋದರನ್ ಆತಂಕ
ನರೇಂದ್ರ ಮೋದಿ ಅಜೆಂಡಾಗಳೇನು?
ಜಿ20 ಶೃಂಗಸಭೆಯಲ್ಲಿ ನಡೆಯುವ ಮೂರು ಪ್ರಮುಖ ಅಧಿವೇಶಗಳಲ್ಲಿ, ಎಲ್ಲದರಲ್ಲೂ ನರೇಂದ್ರ ಮೋದಿ ಮಾತನಾಡುವ ನಿರೀಕ್ಷೆಯಿದೆ. ಸಮಗ್ರ ಆರ್ಥಿಕ ಬೆಳವಣಿಗೆ, ಹವಾಮಾನ ಸವಾಲುಗಳು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಪಾಯ ಮತ್ತು ಅವಕಾಶಗಳು ಈ ವಿಚಾರಗಳ ಬಗ್ಗೆ ಗಮನ ಇಟ್ಟು ಮೋದಿ ಮಾತನಾಡಬಹುದು.
ಹಾಗೆ, ನರೇಂದ್ರ ಮೋದಿ ಅವರು ಹಲವು ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಬಹುದು. ಭಾರತ, ಬ್ರೆಜಿಲ್ ಮತ್ತು ಸೌತ್ ಆಫ್ರಿಕಾ ನಾಯಕರ ಸಭೆ ಕೂಡ ಈ ವೇಳೆ ನಡೆಯಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 7:52 pm, ಶುಕ್ರ, 21 ನವೆಂಬರ್ 25